ಜೋಯಿಡಾ: ಮಲೆನಾಡಿನ ಸೂಪಾ ದಂಡಕಾರಣ್ಯದ ಹಚ್ಚಹಸಿರಿನ ನಿತ್ಯ ಹರಿದ್ವರ್ಣದ ಕಾಡು ಈಗ ಬಿಸಿಲಿನ ಬೆಗೆಗೆ ಬೆಂದುಹೋಗಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹಳ್ಳಕೊಳ್ಳಗಳು ಬತ್ತಿಹೋಗಿವೆ. ಕಾಡುಪ್ರಾಣಿಗಳು ದಾಹ ತೀರಿಸಿಕೊಳ್ಳಲು ನಾಡು, ಜಲಾಶಯದ ಹಿನ್ನೀರಿನತ್ತ ಧಾವಿಸುತ್ತಿವೆ. ಅರಣ್ಯ ಇಲಾಖೆ ದಾಹ ಇಂಗಿಸಲು ಹರಸಾಹಸ ಪಡುತ್ತಿರುವುದು ಕಂಡುಬರುತ್ತಿದೆ.
ಸೂಪಾ ಜಲಾಶಯದ ಒಡಲು ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಈಗ ಜಲಕಂಟಕ ಎದುರಾಗಿದೆ. ಕಾಳಿ ಸಂರಕ್ಷಿತಾರಣ್ಯ ಸೇರಿದಂತೆ ದಟ್ಟಕಾನನದಲ್ಲೀಗ ಬಹುತೇಕ ಎಲ್ಲ ಹಳ್ಳಕೊಳ್ಳಗಳು ಬತ್ತಿದ್ದು, ನೀರಿನ ಸೆಲೆ ಇಂಗಿವೆ. ಇದರಿಂದಾಗಿ ಕಾಡು ಪ್ರಾಣಿಗಳಿಗೆ ನೀರಿನ ಕೊರತೆ ಎದುರಾಗಿದೆ. ಕಾಡಂಚಿನ ಕೆರೆ ಕಟ್ಟೆಗಳಲ್ಲಿ ಹಿಂದೆಂದು ಕಾಣದ ಜಲಕ್ಷಾಮ ಎದುರಾಗಿದೆ. ಕಾಡು ಪ್ರಾಣಿಗಳು ದಾಹ ಇಂಗಿಸಿಕೊಳ್ಳಲಾಗದೆ ವಾಸಸ್ಥಾನವನ್ನು ತೊರೆದು ನಾಡಂಚಿಗೆ ನಿತ್ಯವೂ ಧಾವಿಸಿ ಬರುತ್ತಿವೆ.
ಇಲಾಖೆಯಿಂದ ನೀರುಣಿಸುವ ಪ್ರಯತ್ನ: ಅರಣ್ಯ ಇಲಾಖೆ ಕಾಳಿ ಸಂರಕ್ಷಿತ ಪ್ರದೇಶವಾದ ವಿನೋಲಿ, ಪಣಸೋಲಿ, ಕುಳಗಿ, ಅಣಶಿ, ಸೇರಿದಂತೆ ವನ್ಯಜೀವಿ ವಲಯ ಹಾಗೂ ನಾಡಂಚಿನ ಅರಣ್ಯ ಪ್ರದೇಶದಲ್ಲಿ ನೀರಿನ ತೊಟ್ಟಿ ಇಟ್ಟು ಟ್ಯಾಂಕರ್‌ಗಳ ಮೂಲಕ ನೀರು ಪೂರಣ ಮಾಡುವ ಕೆಲಸ ಮಾಡುತ್ತಿವೆ. ಆದರೆ ಇದು ಕಾಡು ಪ್ರಾಣಿಗಳಿಗೆ ಸಾಲದಾಗಿದ್ದು, ಜಲಮೂಲವನ್ನು ಅರಶಿ ನಾಡಿನತ್ತ ಹಾಗೂ ಸೂಪಾ ಜಲಾಶಯದ ಹಿನ್ನೀರಿನತ್ತ ಧಾವಿಸುತ್ತಿರುವುದು ಕಂಡುಬರುತ್ತಿವೆ.
ಕಾಡುಕೋಣ, ಚಿಗರೆ, ಸಾರಂಗ, ಸಸ್ತನಿಗಳು ಸೇರಿದಂತೆ ಆನೆಗಳೂ ಕೂಡಾ ಜಲಾಶಯದ ನೀರಿನತ್ತ ಧಾವಿಸುತ್ತಿರುವ ದೃಶ್ಯ ದಿನನಿತ್ಯ ಕಂಡು ಬರುತ್ತಿದೆ. ಜೀವಜಲದ ದಾಹ ತೀರಿಸಿಕೊಳ್ಳುವ ಈ ಪಯಣದಲ್ಲಿ ರಸ್ತೆ ಅಂಚಿನಲ್ಲಿ ವಾಹನಕ್ಕೆ ಡಿಕ್ಕಿಹೊಡೆದು ಸಾವನ್ನಪ್ಪುವ ಸಂಭವ ಹೆಚ್ಚಾಗಿದ್ದರೆ, ನಾಡಿನತ್ತ ಧಾವಿಸುವ ಕಾಡು ಪ್ರಾಣಿಗಳಿಗೆ ನಾಯಿ, ಕಳ್ಳ ಬೇಟೆಗಾರರ ಜಾಲಕ್ಕೆ ಸಿಲುಕುವ ಅಪಾಯವಿದೆ.
ಪ್ರಾಣಿಗಳಿಗೆ ಜೀವಜಲದ ಕೊರತೆ ಜೀವಾಪಯಕ್ಕೂ ಕಾರಣವಾಗುತ್ತಿದೆ ಎನ್ನುವುದೇ ದುರಾದೃಷ್ಟಕರ. ಅರಣ್ಯ ಇಲಾಖೆ ಕಾಡಿನ ಒಳಗೆ ಸಾಧ್ಯವಾದಷ್ಟು ಕೆರೆಕಟ್ಟೆಗಳಿಗೆ ನೀರು ಸಂಗ್ರಹಿಸುವ ಕೆಲಸ ಮಡುವ ಮೂಲಕ ಜೀವಜಲ ಕ್ಕಾಗಿ ನಾಡಿನತ್ತ ಬರುವ ಪ್ರಮೇಯ ಎದುರಗದಂತೆ ಮಾಡಬೇಕಿದೆ.