ಬಸವಕಲ್ಯಾಣ: ಬಸವಕಲ್ಯಾಣ ತಾಲೂಕಿನ ಪರತಾಪೂರ ಗ್ರಾಪಂ ವ್ಯಾಪ್ತಿಗೆ ಬರುವ ಖಾನಾಪುರ ಗ್ರಾಮದ ಡಾ| ಬಾಲಕೃಷ್ಣ ರಾಠೊಡ ಅವರು, ನರೇಗಾ ಯೋಜನೆಯಡಿ ಕೃಷಿಹೊಂಡ ನಿರ್ಮಿಸಿಕೊಂಡು ಪ್ರಾಯೋಗಿಕವಾಗಿ ವಿವಿಧ ಬೆಳೆ ಹಾಗೂ ತರಕಾರಿ ಬೆಳೆಯುತ್ತಿದ್ದಾರೆ. ಈ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ವೃತ್ತಿಯಲ್ಲಿ ವೈದ್ಯ ಸೇವೆ ಸಲ್ಲಿಸುತ್ತಿರುವ ಬಾಲಕೃಷ್ಣ ಅವರು ಪರವೃತ್ತಿಯಲ್ಲಿ ಕೃಷಿ ಕೈಗೊಂಡಿದ್ದಾರೆ. ಅದರಲ್ಲೂ ಸರ್ಕಾರಿ ಯೋಜನೆಯನ್ನುಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ತಮ್ಮಹೊಲದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.ಕೃಷಿ ಹೊಂಡದಿಂದ ಮಳೆಗಾಲದಲ್ಲಿ ಮಳೆಯ ಆಧಾರಿತ ನೀರು ಬಳಸುತ್ತಾರೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ದೂರದ ಬಾವಿ ಹಾಗೂಕೊಳವೆಬಾವಿ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಲಾಗುತ್ತಿದೆ. ನಂತರ ಹನಿ ನೀರಾವರಿಪದ್ಧತಿ ಮೂಲಕ ವರ್ಷಪೂರ್ತಿ ಬೆಳೆಗಳಿಗೆ ನೀರು ಒದಗಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇನ್ನೆರಡುವರ್ಷದಲ್ಲಿ ವಾರ್ಷಿಕ ಲಕ್ಷಾಂತರ ರೂ. ಆದಾಯ ಪಡೆಯುವಂತೆ ಯೋಜನೆ ಹಾಕಿಕೊಂಡಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಎರಡು ಎಕರೆ ಭೂಮಿಯಲ್ಲಿ ಕೃಷಿ ಹೊಂಡ ನಿರ್ಮಿಸಲಾಗಿದ್ದು, ನುಗ್ಗೆ ಕಾಯಿ-500, ಆ್ಯಪಲ್ ಬಾರೆ ಮರ-500, ಟೊಮಾಟೊ, ಕರಿಬೇವು, ಲಿಂಬು, ಹೆಬ್ಬೆವು, ಶುಂಠಿ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆಸಲಾಗಿದೆ. ಇದಕ್ಕೆ ಕೃಷಿ ಹೊಂಡ ತುಂಬಾಸಹಾಯಕವಾಗಿದೆ ಎಂದು ವೈದ್ಯ ಡಾ| ಬಾಲಕೃಷ್ಣ ರಾಠೊಡ ಹೇಳಿದರು.
ಕೃಷಿ ಹೊಂಡ ಉದ್ದೇಶ: ಕೃಷಿಕರು ಮಳೆ ನೀರನ್ನು ವ್ಯರ್ಥವಾಗಲು ಬಿಡದೆ ಸೂಕ್ತ ಸ್ಥಳದಲ್ಲಿ ಹೊಂಡ ತೆಗೆದು ನೀರನ್ನು ಸಂಗ್ರಹಿಸಿ ಅದನ್ನು ತಮ್ಮ ಬೆಳೆಗಳಿಗೆ ನೀರು ಒದಗಿಸುವುದು ಈ ಯೋಜನೆ ಉದ್ದೇಶವಾಗಿದೆ. ಕೃಷಿ ಹೊಂಡ ರಚನೆ ನಂತರ ನೀರು ಇಂಗದಂತೆ ತಡೆಯಲು ಪಾಲಿಥಿನ್ ಹೊದಿಕೆ, ಅಳವಡಿಕೆ, ಹೊಂಡದಿಂದ ನೀರು ಎತ್ತಲು ಡಿಸೇಲ್ ಪಂಪ್ ಸೆಟ್ ತುಂತುರು ನೀರಾವರಿ ಅಳವಡಿಕೆಗೆ ಈ ಯೋಜನೆಯಡಿ ಅವಕಾಶವಿದೆ. ಕೃಷಿ ಹೊಂಡ ನಿರ್ಮಾಣ ಮಾಡಿದ ರೈತರಿಗೆ ಅಳತೆಯ ಅನುಗುಣವಾಗಿ ಸಾಮಾನ್ಯ ವರ್ಗದವರಿಗೆ ಶೇ.80ರಷ್ಟು, ಎಸ್‌ಸಿ, ಎಸ್‌ಟಿ ಪಂಗಡದವರಿಗೆ ರಿಯಾಯತಿಯಲ್ಲಿ ಈ ಯೋಜನೆ ನೀಡಲಾಗುತ್ತದೆ.
ಕೃಷಿ ಹೊಂಡ ನಿರ್ಮಿಸಲು ಮಾನದಂಡವೇನು? : ಕನಿಷ್ಠ ಒಂದು ಎಕರೆ ಭೂಮಿ ಹೊಂದಿರುವ ರೈತರು, ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ದಾಖಲೆ, ಆಧಾರ ಕಾರ್ಡ್ ಪ್ರತಿಗಳನ್ನು ನೀಡಬೇಕು. ಸರ್ಕಾರ ಸೂಚಿಸಿದ ಅನುದಾನವನ್ನು ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತದೆ. ನಂತರ ಕೃಷಿ ಅಧಿ ಕಾರಿಗಳು ಖುದ್ದು ಜಮೀನಿಗೆ ಭೇಟಿ ನೀಡಿ ಕೃಷಿ ಹೊಂಡ ನಿರ್ಮಿಸಲು ಸ್ಥಳ ಗುರುತಿಸಿ, ಪರಿಶೀಲನೆ ನಡೆಸುತ್ತಾರೆ.
ಕೃಷಿ ಹೊಂಡದಿಂದ ರೈತರು ಹೆಚ್ಚಿನ ಇಳುವರಿ ಪಡೆಯಲು ಮತ್ತು ಮಣ್ಣಿನ ಸವಕಳಿ ತಡೆಯಲು ಸಹಾಯವಾಗುತ್ತದೆ. ಹೀಗಾಗಿ ರೈತರು ಆಯಾ ಗ್ರಾಪಂ ಅಧಿಕಾರಿಗಳನ್ನು ಸಂಪರ್ಕಿಸಿ ಈ ಯೋಜನೆ ಲಾಭ ಪಡೆದುಕೊಳ್ಳಬೇಕು.-
ಸಂತೋಷ ಚವ್ಹಾಣ, ಸಹಾಯಕ ನಿರ್ದೇಶಕರು, ಬಸವಕಲ್ಯಾಣ
-ಆರ್.ಎಸ್.ವೀರುರೆಡ್ಡಿ