ಮಹಾನಗರ : ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಡಿವೈಡರ್ ಗಳಲ್ಲಿ ನೆಡಲಾಗಿದ್ದ ಗಿಡಗಳು ನೀರಿಲ್ಲದ ಸೊರಗಿ, ಸಾಯುವ ಹಂತದಲ್ಲಿದ್ದು, ಇದೀಗ ಎಚ್ಚೆತ್ತುಕೊಂಡ ಪಾಲಿಕೆ ಬೆಳಗ್ಗೆ ಟ್ಯಾಂಕರ್ ಮುಖೇನ ನೀರು ಹಾಯಿಸಲು ವ್ಯವಸ್ಥೆ ಮಾಡಿದೆ. ನಗರದ ರಸ್ತೆ ಡಿವೈಡರ್‌ಗಳಲ್ಲಿ ಒಟ್ಟಾರೆಯಾಗಿ ಸುಮಾರು 29 ಸಾವಿರದಷ್ಟು ಗಿಡಗಳನ್ನು ನೆಟ್ಟಿದ್ದು, ಒಂದು ಗಿಡದ ನಿರ್ವಹಣೆಗೆ ಸುಮಾರು 39 ರೂ. ಖರ್ಚು ಮಾಡುತ್ತಿದೆ. ಅಲ್ಲದೆ, ಒಂದು ಗಿಡ ನೆಡಲು 22 ರೂ. ಖರ್ಚು ಮಾಡಿದ್ದು, ಇಷ್ಟೊಂದು ಖರ್ಚು ಮಾಡಿಯೂ ಗಿಡಗಳು ಮಾತ್ರ ಸಾಯುವ ಸ್ಥಿತಿಯಲ್ಲಿದ್ದು, ಪಾಲಿಕೆಯ ಈ ಕ್ರಮಕ್ಕೆ ಪರಿಸರಾಸಕ್ತರಿಂದ ವಿರೋಧ ವ್ಯಕ್ತವಾಗಿತ್ತು.
ಪರಿಸರ ಉಳಿಸಿ, ಬೆಳೆಸಿ ಎಂದು ವನಮಹೋತ್ಸವ ಆಚರಿಸಿ, ಪರಿಸರ ಸಂರಕ್ಷಣೆಯ ಮಹತ್ವ ಪಸರಿಸುತ್ತಿರುವ ಮಹಾನಗರ ಪಾಲಿಕೆ ನೆಟ್ಟ ಗಿಡವನ್ನು ಸರಿಯಾದ ರೀತಿಯಲ್ಲಿ ಪೋಷಿಸುವ ಗೋಜಿಗೆ ಹೋಗುತ್ತಿಲ್ಲ.
ಇದೇ ಕಾರಣಕ್ಕೆ ಪಾಲಿಕೆ ವ್ಯಾಪ್ತಿಯ ಗಿಡಗಳಿಗೆ ಸಮರ್ಪಕ ನಿರ್ವಹಣೆ ಇಲ್ಲದ ಕುರಿತಾಗಿ ‘ಉದಯವಾಣಿ ಸುದಿನ’ ಮಾ. 18ರಂದು ವಿಶೇಷ ವರದಿ ಪ್ರಕಟಿಸಿತ್ತು. ಇದೀಗ ಪಾಲಿಕೆ ಎಚ್ಚೆತ್ತುಕೊಂಡು ಸೊರಗಿದ ಗಿಡಗಳಿಗೆ ಟ್ಯಾಂಕರ್ ಮುಖೇನ ನೀರು ಹಾಕಲು ಮುಂದಾಗಿದೆ.
ನಗರದ ಕೆಎಸ್ಸಾರ್ಟಿಸಿಯಿಂದ ಕೊಟ್ಟಾರ ಕ್ರಾಸ್ ಬಳಿ ತೆರಳುವ ರಸ್ತೆಯ ಡಿವೈಡರ್‌ಗಳಲ್ಲಿ ನೆಡಲಾದ ಗಿಡಗಳಿಗೆ ರವಿವಾರ ಟ್ಯಾಂಕರ್ ಮುಖೇನ ನೀರು ಹಾಕಲಾಗಿದ್ದು, ಉಳಿದ ಎಲ್ಲ ಕಡೆಗಳಲ್ಲಿಯೂ ಇದೇ ಕ್ರಮ ಕೈಗೊಳ್ಳಲು ಇದೀಗ ಪಾಲಿಕೆ ಮುಂದಾಗಿದೆ.