ಕಾಸರಗೋಡು: ಕೇರಳ ರಾಜ್ಯ ಜಲ ಪ್ರಾಧಿಕಾರವು 386 ಕೋಟಿ ರೂ. ಗಳ ವಾರ್ಷಿಕ ಸಾಲ ಹೊಂದಿದೆ. ಇದೇ ಸಂದರ್ಭದಲ್ಲಿ ನೀರು ಪೂರೈಸಿದ ಜಲ ಪ್ರಾಧಿಕಾರಕ್ಕೆ ಬರೋಬ್ಬರಿ 909 ಕೋಟಿ ರೂ. ಲಭಿಸಲು ಬಾಕಿಯಿದೆ.
ಆ ಹಣವನ್ನು ಸರಿಯಾಗಿ ವಸೂಲು ಮಾಡಿದಲ್ಲಿ ಜಲ ಪ್ರಾಧಿಕಾರದ ಸಾಲದ ಹೊರೆಯನ್ನು ನೀಗಿಸಬಹುದಾಗಿದೆ. ಅಂತಹ ಕ್ರಮಗಳು ಸರಿಯಾದ ರೀತಿಯಲ್ಲಿ ನಡೆಯದೇ ಇರುವುದು ಜಲ ಪ್ರಾಧಿಕಾರವನ್ನು ರಾಜ್ಯದ ಕೆಎಸ್‌ಆರ್‌ಟಿಸಿ ವಿಭಾಗದಂತೆಯೇ ತೀವ್ರ ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ.
ಜಲ ಪ್ರಾಧಿಕಾರವು ರಾಜ್ಯಾದ್ಯಂತ ಒಟ್ಟು 21 ಲಕ್ಷ ನಳ್ಳಿ ನೀರಿನ ಸಂಪರ್ಕಗಳನ್ನು ಒದಗಿಸಿದೆ. ಇದರಲ್ಲಿ ಬಹುತೇಕ ಮನೆಗಳಿಗೆ ನಳ್ಳಿ ನೀರಿನ ವ್ಯವಸ್ಥೆ ಮಾಡಿದೆ. ಮನೆಗಳಿಂದ ನೀರಿನ ಶುಲ್ಕ ಹೆಚ್ಚು ಕಡಿಮೆ ಪ್ರಾಧಿಕಾರಕ್ಕೆ ಲಭಿಸುತ್ತಿದೆಯಾದರೂ ಸರಕಾರಿ ಸಂಸ್ಥೆಗಳು ಮತ್ತು ಇತರ ವಿಭಾಗಗಳಿಗೆ ನೀಡಲಾದ ನಳ್ಳಿನೀರು ಸಂಪರ್ಕದ ಬಾಬ್ತು ಹಣ ಸಂದಾಯವಾಗುತ್ತಿಲ್ಲ.
ಬಾಕಿಯಿರುವ ಒಟ್ಟು 909 ಕೋಟಿ ರೂ. ಗಳಲ್ಲಿ 715 ಕೋಟಿ ರೂ. ದೊರಕಲು ಕಷ್ಟ ಸಾಧ್ಯವಾದ ಹಣವಾಗಿ ಗುರುತಿಸಲಾಗಿದೆ. ಒಟ್ಟು ಬಾಕಿ ಮೊತ್ತದಲ್ಲಿ ಮನೆಗಳಿಗೆ ನೀರು ಪೂರೈಸಿದ ಅಂಗವಾಗಿ 173 ಕೋಟಿ ರೂ. ವಸೂಲಾತಿಗೆ ಬಾಕಿಯಿದೆ. ಉದ್ದಿಮೆ ಘಟಕಗಳಿಗೆ ನೀರು ಪೂರೈಸಿದ ವತಿಯಿಂದ 7.8 ಕೋಟಿ ರೂ., ಕಟ್ಟಡಗಳನ್ನು ನಿರ್ಮಿಸಲು ತಾತ್ಕಾಲಿಕವಾಗಿ ನೀಡಲಾದ ನಳ್ಳಿನೀರು ವತಿಯಿಂದ 13 ಕೋಟಿ ರೂ. ಜಲ ಪ್ರಾಧಿಕಾರಕ್ಕೆ ದೊರಕಲು ಬಾಕಿಯಿದೆ.
ಲೋಕೋಪಯೋಗಿ ಇಲಾಖೆಯ ವಿವಿಧ ಕಚೇರಿಗಳಿಂದಲೇ ಪ್ರಾಧಿಕಾರಕ್ಕೆ 73.78 ಕೋಟಿ ರೂ. ಬಾಕಿ ಉಳಿದುಕೊಂಡಿದೆ. ತಿರುವನಂತಪುರದ ತೈಕ್ಕಾಡ್ ಅತಿಥಿಗೃಹಕ್ಕೆ ಪೂರೈಸಲಾದ ನೀರಿನ ವತಿಯಿಂದ ಮಾತ್ರವಾಗಿ 19.45 ಕೋಟಿ ರೂ. ಮೊತ್ತ ದೊರಕಲು ಬಾಕಿಯಿರುವುದಾಗಿ ಅಂಕಿ ಅಂಶಗಳು ಸೂಚಿಸುತ್ತಿವೆ.
ಜಲ ಪ್ರಾಧಿಕಾರಕ್ಕೆ 1,280 ಕೋಟಿ ರೂ.ಗಳ ವಾರ್ಷಿಕ ಖರ್ಚು ಲೆಕ್ಕ ಹಾಕಲಾಗಿದೆ. ಪ್ರತೀ ವರ್ಷ ನೀರು ಪೂರೈಕೆಯಿಂದ 554 ಕೋಟಿ ರೂ. ಲಭಿಸಬೇಕು. ಇದರ ಹೊರತಾಗಿ ರಾಜ್ಯ ಸರಕಾರದ ಅನುದಾನದ ರೂಪದಲ್ಲಿ 335 ಕೋಟಿ ರೂ. ಮತ್ತಿತರ ಅನುದಾನ ವತಿಯಿಂದ 5 ಕೋಟಿ ರೂ. ಲಭಿಸುತ್ತಿದೆ. ಹೀಗೆ ಪ್ರಾಧಿಕಾರದ ಒಟ್ಟು ವಾರ್ಷಿಕ ಆದಾಯ 894 ಕೋಟಿ ರೂ. ಆಗಿದೆ. ಆದರೆ ಖರ್ಚು ಅದಕ್ಕಿಂತಲೂ ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ.
ಬಾಕಿ ವಸೂಲಿಗೆ ವ್ಯವಸ್ಥೆಯಿಲ್ಲ
ನೀರು ಪೂರೈಕೆಯ ಅಂಗವಾಗಿ ಜಲ ಪ್ರಾಧಿಕಾರಕ್ಕೆ ಲಭಿಸಬೇಕಾದ ಹಣದಲ್ಲಿ ಕನಿಷ್ಠ ಶೇಕಡಾ 50ರಷ್ಟು ವಸೂಲು ಮಾಡಲು ಸಾಧ್ಯವಾದಲ್ಲಿ ಪ್ರಾಧಿಕಾರವು ಎದುರಿಸುತ್ತಿರುವ ನಷ್ಟವನ್ನು ಅಲ್ಪ ಪ್ರಮಾಣದಲ್ಲಾದರೂ ನೀಗಿಸಬಹುದು. ಆದರೆ ಅದಕ್ಕಿರುವ ಕ್ರಮಗಳಿಗೆ ಚಾಲನೆ ನೀಡಲಾಗಿದ್ದರೂ ಕ್ಷಿಪ್ರಗತಿಯ ಯಾವುದೇ ಯೋಜನೆಗಳನ್ನು ಹಾಕಿಕೊಳ್ಳಲಾಗಿಲ್ಲ. ಅಲ್ಲದೆ ನೀರು ಪೂರೈಕೆ ವತಿಯಿಂದ ಹಣ ಪಾವತಿಸದ ಸಂಸ್ಥೆಗಳಿಗೆ ಯಾವುದೇ ಎಚ್ಚರಿಕೆಯ ನೋಟಿಸುಗಳನ್ನು ನೀಡಲಾಗಿಲ್ಲ.