Advertisement

ಪಿಕಪ್‌ ಚಾಲಕನಿಂದ ಗ್ರಾಮದ ಜನರಿಗೆ ನೀರು ಪೂರೈಕೆ

10:20 PM May 22, 2019 | Team Udayavani |

ಬಡಗನ್ನೂರು: ಒಳಮೊಗ್ರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎರಡು ತಿಂಗಳ ಹಿಂದೆಯೇ ಕಾಣಿಸಿಕೊಂಡಿದೆ. ಸಮಸ್ಯೆ ಗಂಭೀರವಾಗಿಯೇ ಇದ್ದರೂ ಅದು ಅಷ್ಟೊಂದು ಪ್ರಭಾವ ಬೀರಲಿಲ್ಲ. ಇದಕ್ಕೆ ಕಾರಣ ಕುಂಬ್ರದ ಪಿಕಪ್‌ ಚಾಲಕ.

Advertisement

ಜೀವನ ನಿರ್ವಹಣೆಗೆ ಪಿಕಪ್‌ ಚಾಲನೆ ವೃತ್ತಿಯಲ್ಲಿ ತೊಡಗಿರುವ ಕೋಳಿಗದ್ದೆ ನಿವಾಸಿ ಶರೀಫ್ ಎನ್ನುವವರು ಗ್ರಾಮದ ಜನರಿಗೆ ನೀರು ಪೂರೈಕೆ ಮಾಡುತ್ತಿದ್ದಾರೆ. ಯಾವುದೇ ಸಮಯಕ್ಕೂ ಸಾರ್ವಜನಿಕರು ಕರೆ ಮಾಡಿದರೆ ಸಾಕು ಕ್ಷಣ ಮಾತ್ರದಲ್ಲಿ 1,500 ಲೀ. ನೀರನ್ನು ತುಂಬಿಸಿಕೊಂಡು ಪಿಕಪ್‌ನಲ್ಲಿ ಸಾಗಾಟ ಮಾಡುತ್ತಾರೆ. ಮೂರು ತಿಂಗಳಿನಿಂದ ಇವರು ಒಳಮೊಗ್ರು ಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮಗಳ ಮನೆಗಳಿಗೆ ನೀರು ಪೂರೈಕೆ ಮಾಡುತ್ತಿದ್ದಾರೆ.

ಸಂಜೆಯ ಅನಂತರ ಕಾರ್ಯ
ಹಗಲು ಹೊತ್ತಿನಲ್ಲಿ ವಿದ್ಯುತ್‌ ಸಮಸ್ಯೆ ಅಥವಾ ಲೋ ವೋಲ್ಟೆàಜ್‌ ಸಮಸ್ಯೆಯ ಕಾರಣಕ್ಕೆ ಕೊಳವೆ ಬಾವಿಯಿಂದ ನೀರು ಶೇಖರಿಸಲು ಕಷ್ಟಸಾಧ್ಯ. ಈ ಕಾರಣದಿಂದ ಶರೀಫ್ ಅವರು ಸಂಜೆ 6ರ ಬಳಿಕ ನೀರು ಸರಬರಾಜು ಆರಂಭಿಸುತ್ತಾರೆ. ಬಹುತೇಕ ಮನೆಯವರ ಕೊಳವೆ ಬಾವಿಯೂ ಬತ್ತಿ ಹೋಗಿರುವ ಕಾರಣ ತನ್ನ ಸ್ವಂತ ಬಳಕೆಯ ಕೊಳವೆ ಬಾವಿಯಿಂದ ನೀರು ತೆಗೆದು ಜನರಿಗೆ ನೀಡುತ್ತಿದ್ದಾರೆ. ಪಿಕಪ್‌ ಬಾಡಿಗೆಯಾಗಿ 250 ರೂ. ನೀಡಿದರೆ 1,500 ಲೀ. ನೀರು ಪೂರೈಕೆ ಮಾಡುತ್ತಾರೆ.

ಪಂಪ್‌ ಹಾಕಿ ಟ್ಯಾಂಕ್‌ಗೆ ಟ್ಯಾಂಕ್‌ನಲ್ಲಿ ತಂದಿರುವ ನೀರನ್ನು ಮನೆ ಮಂದಿಯ ಕುಡಿಯುವ ನೀರಿನ ಟ್ಯಾಂಕ್‌ಗೆ ಪಂಪ್‌ ಮೂಲಕ ಅವರೇ ಹಾಕುತ್ತಾರೆ. ಹೆಚ್ಚಿನ ಮನೆಗಳಲ್ಲಿ ನೀರಿನ ಟ್ಯಾಂಕ್‌ ಇರುವ ಕಾರಣ ಶೇಖರಣೆಗೆ ಸಮಸ್ಯೆಯಿಲ್ಲ. ಒಂದು ಬಾರಿ ಸಾಗಿಸಿದರೆ ಎರಡರಿಂದ ಮೂರು ದಿನಗಳ ಕಾಲ ಬಳಕೆ ಮಾಡುತ್ತಾರೆ. ಮಿತವಾಗಿ ಬಳಕೆ ಮಾಡಿದರೆ 4 ದಿನಗಳವರೆಗೂ ಬಳಸುವವರೂ ಇದ್ದಾರೆ. ಈ ಪಿಕಪ್‌ ಚಾಲಕ ಬಿಟ್ಟರೆ ಗ್ರಾಮದಲ್ಲಿ ನೀರು ಪೂರೈಕೆ ಮಾಡುವ ಯಾವುದೇ ಬದಲಿ ವ್ಯವಸ್ಥೆ ಇಲ್ಲ. ಹಾಗಾಗಿ ಶರೀಫ್ ಅವರು ಜನರಿಗೆ ಜಲ ಆಶ್ರಯದಾತನಾಗಿದ್ದಾರೆ.

ಗ್ರಾ.ಪಂ.ನಲ್ಲಿ ವ್ಯವಸ್ಥೆ ಇಲ್ಲ
ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆ ಇದ್ದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಬೇಕು ಎನ್ನುವ ನಿಯಮವಿದೆ. ಆದರೆ ಒಳಮೊಗ್ರು ಗ್ರಾಮದಲ್ಲಿ ಸಮಸ್ಯೆಯಿದ್ದರೂ ಟ್ಯಾಂಕರ್‌ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಿಲ್ಲ. ಈ ಬಗ್ಗೆ ಪಿಡಿಒ ಅವರನ್ನು ಕೇಳಿದರೆ ತಾಲೂಕು ಪಂಚಾಯತ್‌ನಿಂದ ವ್ಯವಸ್ಥೆ ಮಾಡಿದರೆ ನಾವು ಕೊಡಬಹುದು. ನಾವೇ ವ್ಯವಸ್ಥೆ ಮಾಡಿದರೆ ಬಾಡಿಗೆ ಕೊಡುವುದು ಯಾರು ಎಂಬ ಪ್ರಶ್ನೆ ಮೂಡುತ್ತದೆ. ಖಾಸಗಿಯಾಗಿ ನೀರು ಪೂರೈಕೆ ಮಾಡುತ್ತಿರುವ ಕಾರಣ ಸಮಸ್ಯೆ ಗಂಭೀರತೆಯನ್ನು ಪಡೆಯದೇ ಇರಬಹುದು ಎಂದು ಹೇಳುತ್ತಿದ್ದಾರೆ.

Advertisement

ಕನಿಷ್ಠ ದರ
ಶುದ್ಧ ನೀರಿಗೆ ಲೀಟರ್‌ಗೆ 17 ಪೈಸೆ ಮಾತ್ರ ಪಡೆಯುತ್ತಾರೆ. ಪಿಕಪ್‌ ಓಡಿಸಿ ಅದರ ಬಾಡಿಗೆಯÇÉೇ ಜೀವನ ಸಾಗಿಸುವ ಅವರಿಗೆ ಸಣ್ಣದೊಂದು ಸಾಮಾಜಿಕ ಕಾರ್ಯ ಮಾಡುವ ಆಸೆ. ಮನೆಗಳಿಗೆ ನೀರು ಪೂರೈಸುತ್ತಾರೆ. ಗ್ರಾಮದ ಬಹುತೇಕ ಮನೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾ.ಪಂ. ನಳ್ಳಿಯಲ್ಲಿ ನೀರು ಬಾರದೇ ಇದ್ದರೆ ಜನರು ಶರೀಫ್ ಅವರಿಗೆ ಕರೆ ಮಾಡುತ್ತಾರೆ. ಆ ಕೂಡಲೇ ನೀರು ಮನೆ ಬಾಗಿಲಿಗೆ ಬರುತ್ತದೆ.

ಶ್ಲಾಘನೀಯ ಕಾರ್ಯ
ನೀರಿಲ್ಲದ ಮನೆಗಳಿಗೆ ನೀರು ಪೂರೈಕೆ ಮಾಡುವ ಪಿಕಪ್‌ ಚಾಲಕ ಇನ್ನೊಬ್ಬರಿಗೆ ಆದರ್ಶವಾಗಿದ್ದಾರೆ. ತನ್ನ ಸ್ವಂತಕ್ಕೆ ಬಳಕೆ ಮಾಡುವ ನೀರನ್ನು ಚಿಲ್ಲರೆ ಬಾಡಿಗೆ ಪಡೆದು ಸಕಾಲಕ್ಕೆ ಮನೆ ಮಂದಿಗೆ ತಲುಪಿಸುವ ಮೂಲಕ ಮಾನವೀಯತೆಯನ್ನು ತೋರುತ್ತಿರುವುದು ನಿಜಕ್ಕೂ ಶ್ಲಾಘನೀಯ.
– ಎಚ್‌.ಕೆ. ಕೃಷ್ಣಮೂರ್ತಿ, ಸಹಾಯಕ ಕಮಿಷನರ್‌, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next