Advertisement

ಧರ್ಮಸ್ಥಳಕ್ಕೆ ಕರವೇಯಿಂದ ನೀರು ಪೂರೈಕೆ

07:32 AM May 27, 2019 | Team Udayavani |

ದೇವನಹಳ್ಳಿ: ಹಿಂದಿನ ಕಾಲದಲ್ಲಿ ಮಳೆ ಪ್ರಮಾಣ ಹೇಗಿತ್ತು ಎಂಬುದರ ಬಗ್ಗೆ ತಿಳಿದಿದೆ. ಆದರೆ, ಈಗ ಮಳೆಯ ಅಭಾವ ಹೆಚ್ಚಾಗಿರು ವುದರಿಂದ ನೀರನ್ನು ಮಿತವಾಗಿ ಬಳಸಬೇಕೆಂದು ತಹಶೀಲ್ದಾರ್‌ ಮಂಜುನಾಥ್‌ ತಿಳಿಸಿದರು.

Advertisement

ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ ಶೆಟ್ಟಿ ಬಣ)ಯಿಂದ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಗೆ ಕುಡಿಯುವ ನೀರಿನ ಸರಬರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕರವೇ ಸಾಮಾಜಿಕ ಕಾರ್ಯ ಅಭಿನಂದನೀಯ: ಧರ್ಮಸ್ಥಳಕ್ಕೆ 10ಸಾವಿರ ಲೀಟರ್‌ ನೀರು ಕಳುಹಿಸಿ ಕೊಡುತ್ತಿರುವ ಕರವೇಗೆ ತಾಲೂಕು ಆಡಳಿತದ ವತಿಯಿಂದ ಅಭಿನಂದಿಸುತ್ತೇನೆ. ಇಂತಹ ಸಾಮಾಜಿಕ ಕಾರ್ಯಗಳು ಹೆಚ್ಚಾಗ ಬೇಕು ಎಂದು ತಿಳಿಸಿದರು.

ಜಲ ಮೂಲ ಉಳಿಸಿ: ಧರ್ಮಸ್ಥಳದಲ್ಲಿ ನೀರಿನ ಅಭಾವ ಇರುವುದರಿಂದ ಹೆಚ್ಚಿನ ಭಕ್ತಾದಿಗಳು ಬರದಂತೆ ಧರ್ಮಾಧಿಕಾರಿಗಳು ಮನವಿ ಮಾಡಿರುವುದು ಅಲ್ಲಿನ ನೀರಿನ ಸಮಸ್ಯೆಗೆ ನಿದರ್ಶನವಾಗಿದೆ. ಇದು ಜನರಿಗೆ ತಿಳಿದ ವಿಚಾರವೂ ಆಗಿದೆ. ಪ್ರವಾಸಿಗರು ಹೆಚ್ಚು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿಯೇ ನೀರಿನ ಸಮಸ್ಯೆ ಉದ್ಭವಿಸಿದೆ. ಜಲ ಮೂಲಗಳನ್ನು ಉಳಿಸದಿದ್ದರೆ ಮುಂದೆ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಳೆ ಕೊಯ್ಲು ಪದ್ಧತಿ ಅಗತ್ಯ: ಜಿಲ್ಲಾಧಿ ಕಾರಿಗಳು ಜಿಲ್ಲೆಯಲ್ಲಿ ಈಗಾಗಲೇ ಮಳೆ ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಲು ಸೂಚಿಸಿದ್ದು, ಕೈಗಾರಿಕಾ ಪ್ರದೇಶ, ವಾಣಿಜ್ಯ ಮಳಿಗೆಗಳು, ಹೋಟೆಲ್, ಕಲ್ಯಾಣ ಮಂಟಪ, ಚಿತ್ರಮಂದಿರ ಇನ್ನಿತರೆ ಕಡೆಗಳಲ್ಲಿ ಮಳೆ ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಲು ನೋಟಿಸ್‌ ನೀಡಲಾಗಿದೆ. 49 ಲಕ್ಷ ಲೀಟರ್‌ ಮಳೆ ನೀರು ಸಂಗ್ರಹಿಸಿದರೆ ನೀರಿನ ಬವಣೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ. ದೇವನಹಳ್ಳಿಯಲ್ಲೂ ಮಳೆ ಕೊಯ್ಲು ಪದ್ಧತಿಯನ್ನು ಅಳವಡಿಸಿ ಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಕರವೇ ರಾಜ್ಯ ಕಾರ್ಯದರ್ಶಿ ರಾಜಘಟಕ ರವಿ ಮಾತನಾಡಿ, ಕರವೇ ಸಾಕಷ್ಟು ಹೋರಾಟ ಗಳನ್ನು ಮಾಡಿಕೊಂಡು ಬಂದಿದೆ. ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಿಕೊಂಡು ಬಂದಿದೆ. ಧರ್ಮಸ್ಥಳದಲ್ಲಿ ಜನರಿಗೆ ನೀರಿನ ಅಭಾವ ಇರುವುದರಿಂದ ಆಡಳಿತ ಮಂಡಳಿಗೆ ದೂರವಾಣಿ ಮಾಡಿ ವಿಚಾರಿಸಿದಾಗ ನೀರು ಕಳುಹಿಸಿ ಕೊಡಿ ಎಂದಿದ್ದಾರೆ. ದಾನಿಗಳ ಸಹಕಾರದಿಂದ 10ಸಾವಿರ ಲೀಟರ್‌ ನೀರು ಕಳುಹಿಸುತ್ತಿದ್ದೇವೆ ಎಂದರು.

ಈ ವೇಳೆ ತಾಲೂಕು ಕರವೇ ಅಧ್ಯಕ್ಷ ಗಜೇಂದ್ರ, ಯಲಹಂಕ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಜಯಂತ್‌, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಉದಯ್‌, ತಾಲೂಕು ಪ್ರಧಾನ ಸಂಚಾಲಕ ಧನೇಶ್‌ ಕುಮಾರ್‌, ಕಾರ್ಮಿಕ ಘಟಕದ ಉಪಾಧ್ಯಕ್ಷ ಕೆಂಪೇಗೌಡ, ತಾಲೂಕು ಉಪಾಧ್ಯಕ್ಷ ಸತೀಶ್‌ ಗೋಖರೆ, ಬಾಬು, ಜಂಟಿ ಕಾರ್ಯದರ್ಶಿ ಮುನಿಕೃಷ್ಣ, ಕರವೇ ಮುಖಂಡ ಮೈಲನಹಳ್ಳಿ ಪ್ರಕಾಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next