ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 10 ದಿನಕ್ಕೊಮ್ಮೆ ನೀರು ಕೊಡುತ್ತಿರುವುದೇ ಕಾಂಗ್ರೆಸ್ ಸಾಧನೆ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ವ್ಯಂಗ್ಯವಾಡಿದ್ದಾರೆ.
ಗುರುವಾರ, ಉತ್ತರ ವಿಧಾನ ಸಭಾ ಕ್ಷೇತ್ರದ ಕೆಟಿಜೆ ನಗರ, ಭಗತ್ ಸಿಂಗ್ ನಗರ, ಲೇಬರ್ ಕಾಲೋನಿ, ಕೆ.ಬಿ. ಬಡಾವಣೆಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಅನೇಕರ ಮನೆಗಳಿಗೆ ಕೊಳವೆಬಾವಿ ಇಲ್ಲ. ನಗರಪಾಲಿಕೆ ನೀರಿನ ಮೇಲೆಯೇ ಅವಲಂಬಿತರಾಗಿದ್ದಾರೆ. ಏನೆಲ್ಲಾ ಅಭಿವೃದ್ಧಿ ಮಾಡಿದ್ದೇವೆ ಎಂದೇಳುವ ಜನರು ಕುಡಿಯಲು ನೀರು ಕೊಡಲು ಮನಸ್ಸು ಮಾಡಿಲ್ಲ. ಅವರ ಅಭಿವೃದ್ಧಿ ಏನು? ಎಂಬುದನ್ನು ಮತದಾರರೇ ನಿರ್ಧರಿಸಬೇಕು ಎಂದರು.
ಬಡ ಜನ, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರಿಗೆ ಮೂಲಭೂತ ಸೌಕರ್ಯ ಒದಗಿಸದೇ ಇರುವುದೇ ಕಾಂಗ್ರೆಸ್ ಸಾಧನೆ. ಸಾರ್ವಜನಿಕರು ಮೇ. 12 ರಂದು ತೆಗೆದುಕೊಳ್ಳುವ ತೀರ್ಮಾನದಂತೆ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಮೂಲಭೂತ ಸೌಕರ್ಯವನ್ನು ನೀಡಲು ಸಾಧ್ಯವಾಗದ ಕಾಂಗ್ರೆಸ್ ಸರ್ಕಾರಕ್ಕೆ ಜನರೆ ಸರಿಯಾದ ಪಾಠ ಕಲಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ರವೀಂದ್ರನಾಥ್‌ರಿಗೆ ಮತ ನೀಡುವ ಮೂಲಕ ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ವಿನಂತಿಸಿದರು.
ಈ ಭಾಗದಲ್ಲಿ ಸ್ವತ್ಛತೆಗೆ ಆದ್ಯತೆ ನೀಡಿಲ್ಲ, ಚರಂಡಿ, ಒಳಚರಂಡಿ ವ್ಯವಸ್ಥೆ ಇಲ್ಲ. ಇನ್ನು ಮಳೆ ಬಂದರಂತೂ ಈ ಭಾಗದಲ್ಲಿ ಕೆಸರಿನ ಗದ್ದೆಯಾಗಿ ನೀರು ಮನೆಯೊಳಗೆ ಸೇರುತ್ತದೆ. ಭಾಗಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನಮ್ಮ ಬಿಜೆಪಿ ಸರ್ಕಾರ ಒದಗಿಸುವಂತಾಗಲು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮುಕುಂದಪ್ಪ, ಬಿ.ಎಸ್. ಜಗದೀಶ್, ಮಾಜಿ ಮೇಯರ್ ಎಂ.ಎಸ್. ವಿಠ್ಠಲ್, ಮಾಜಿ ಉಪ ಮೇಯರ್ ಪಿ.ಎಸ್. ಜಯಣ್ಣ, ನಿಟುವಳ್ಳಿ ಲಕ್ಷ್ಮಣ್, ಕೆ.ಎನ್. ಹನುಮಂತಪ್ಪ, ನಾಗರಾಜ್, ಕುಮಾರ್, ಸವಿತಾ ರವಿಕುಮಾರ್ ಇದ್ದರು.