Advertisement

ತುಂಬೆ ಡ್ಯಾಂನಲ್ಲಿ  ನೀರು ಸಂಗ್ರಹ ಆರಂಭ

12:16 PM Sep 18, 2018 | Team Udayavani |

ಬಂಟ್ವಾಳ: ತುಂಬೆ ಡ್ಯಾಂನಲ್ಲಿ ಹೊರ ಹರಿವು ನಿಲುಗಡೆ ಮಾಡಿದ್ದು, ಮೂರು ದಿನಗಳಿಂದ ನೀರಿನ ಮಟ್ಟ ಏರಿಕೆ ಆಗುತ್ತಿದೆ.

Advertisement

ನೇತ್ರಾವತಿ ನದಿಯಲ್ಲಿ ಹರಿವು ಕಡಿಮೆ ಆಗುತ್ತಿದ್ದಂತೆ ಮನಪಾ ಈ ಬಾರಿ ಅವಧಿಗಿಂತ ಮುಂಚಿತವಾಗಿಯೇ ಡ್ಯಾಂ ಗೇಟ್‌ಗಳನ್ನು ಇಳಿಸುವ ಮೂಲಕ ಹೊರ ಹರಿವನ್ನು ನಿಯಂತ್ರಿಸಿದೆ.

ಪ್ರಸ್ತುತ ಡ್ಯಾಂನಲ್ಲಿ 5 ಮೀ. ಎತ್ತರಕ್ಕೆ ನೀರನ್ನು ಕಾಯ್ದಿಟ್ಟುಕೊಳ್ಳಲಾಗಿದೆ. ನೆರೆ ನೀರಿನಿಂದ ತುಂಬಿ ಹರಿದಿದ್ದ ನೇತ್ರಾವತಿ ನದಿಯಲ್ಲಿ ಒಳಹರಿವು ಕುಸಿದಿದೆ.

ಈ ಹಿಂದೆ ಅಕ್ಟೋಬರ್‌ ಅಂತ್ಯಕ್ಕೆ ಡ್ಯಾಂನ ಗೇಟ್‌ ಮುಚ್ಚಲಾಗುತ್ತಿತ್ತು. ಆದರೆ ಈ ಬಾರಿ ಸೆಪ್ಟಂಬರ್‌ ಮಧ್ಯದಲ್ಲೇ 30 ಗೇಟುಗಳ ಪೈಕಿ 26ನ್ನು ಮುಚ್ಚಲಾಗಿದೆ. ಶಂಭೂರಿನ ಎಎಂಆರ್‌ ಡ್ಯಾಂನಲ್ಲೂ ನೀರಿನ ಹರಿವು ಕಡಿಮೆಯಾಗಿದ್ದು, ಪ್ರಸ್ತುತ 18.9 ಮೀ. ನೀರು ಕಾಯ್ದುಕೊಳ್ಳಲಾಗಿದೆ. ನದಿ ಬದಿಯಲ್ಲಿ ಡಿಸೆಂಬರ್‌ವರೆಗೆ ನೀರು ಹರಿಯುತ್ತಿದ್ದ ತೊರೆಗಳು ಈ ಬಾರಿ ನೀರಿನ ಹರಿವಿಲ್ಲದೆ ಸೊರಗಿವೆ.

ನೀರಿನ ಮಟ್ಟ ಇಳಿಕೆ ಕಾರಣ
ಪ್ರಸ್ತುತ ವರ್ಷ ಸೆ. 16ರಿಂದ ಡ್ಯಾಂ ಗೇಟುಗಳನ್ನು ಇಳಿಸಲಾಗಿದೆ. ನೀರು ಹರಿವು ಕಡಿಮೆ ಆಗಿರುವುದು ಗೇಟ್‌ ಇಳಿಸಲು ಕಾರಣ ಎಂದು ಮನಪಾ ಅಧಿಕಾರಿಗಳು ವಿವರ ನೀಡಿದ್ದಾರೆ.

Advertisement

ವಾಸ್ತವದಲ್ಲಿ ಶಂಭೂರು ಎಎಂಆರ್‌ ಡ್ಯಾಂನಲ್ಲಿ ನೀರನ್ನು ಸಂಪೂರ್ಣ ತಡೆದು ಹೊರ ಹರಿವನ್ನು ನಿಯಂತ್ರಿಸಲಾಗಿದೆ. ಅಲ್ಲಿ ನೀರಿನ ಮಟ್ಟವನ್ನು 18.5 ಮೀ.ಗೆ ಏರಿಸಿರುವುದು ಹರಿವು ಕಡಿಮೆಯಾಗಲು ಕಾರಣವಾಗಿದೆ, ಉಪ್ಪಿನಂಗಡಿ, ಧರ್ಮಸ್ಥಳಗಳಲ್ಲಿ ನದಿಯಲ್ಲಿ ನೀರ ಹರಿವು ಇದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಮಳೆ ನಿಂತ ಬಳಿಕ ನೀರ ಹರಿವು ಕಡಿಮೆ ಆಗಿದೆ ಎಂಬುದಾಗಿ ಸಂಬಂಧಿತ ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟಂಬರ್‌ಗೆà ಡಿಸೆಂಬರ್‌ ಸ್ಥಿತಿ
ಕಳೆದ ವರ್ಷ ತುಂಬೆ ನೂತನ ಡ್ಯಾಂ ಕಾಮಗಾರಿ ಪೂರ್ತಿಗೊಂಡು ಎಪ್ರಿಲ್‌ ಬಳಿಕ 6 ಮೀ. ನೀರು ನಿಲುಗಡೆ ಆಗಿತ್ತು. ಅದಕ್ಕೆ ಮೊದಲು 5 ಮೀ. ಎತ್ತರ ನೀರು ನಿಲ್ಲಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್‌ ತಿಂಗಳಿನಲ್ಲಿ ಹಲಗೆ ಇಳಿಸಿದ್ದರು. ಎಪ್ರಿಲ್‌ನಲ್ಲಿ ನೂತನ ಡ್ಯಾಂ ಕೆಲಸ ಮುಗಿಸಿ ನೀರು ನಿಲುಗಡೆ ಆಗಿದ್ದು, ಕಿರು ಡ್ಯಾಂ ಮುಳುಗಡೆ ಆಗಿತ್ತು. ಪ್ರಸ್ತುತ ವರ್ಷ ಹೊರ ಹರಿವು ನಿಲ್ಲಿಸುವ ಡಿಸೆಂಬರ್‌ನ ಸ್ಥಿತಿ ಸೆಪ್ಟಂಬರ್‌ನಲ್ಲೇ ಎದುರಾಗಿದೆ.

2015-16ನೇ ಸಾಲಿನಲ್ಲಿ ನವೆಂಬರ್‌ನಲ್ಲಿ ಕಿಂಡಿ ಅಣೆಕಟ್ಟಿಗೆ ಹಲಗೆ ಇಳಿಸಿದ್ದರು. ಸುಮಾರು ಒಂದು ತಿಂಗಳ ಕಾಲ ಆ ಕಾಮಗಾರಿ ನಡೆಯುವುದ ರಿಂದ ಡಿಸೆಂಬರ್‌ ತಿಂಗಳಾಗುವಾಗ ನೀರು ನಿಲ್ಲಲು ಆರಂಭವಾಗುತ್ತಿತ್ತು.

15 ವರ್ಷಗಳಲ್ಲಿ ಸಾಮಾನ್ಯವಾಗಿ ನವೆಂಬರ್‌- ಡಿಸೆಂಬರ್‌ ತಿಂಗಳಲ್ಲಿ ನೀರು ನಿಲ್ಲಿಸಲಾಗುತ್ತಿತ್ತು. ಪ್ರಸ್ತುತ ವರ್ಷ ಮಳೆ ಹಠಾತ್‌ ನಿಂತ‌ ಕೂಡಲೇ ನೀರಿನ ಕೊರತೆಯ ಲಕ್ಷಣ ಕಾಣಿಸಿದೆ. ಸಾಮಾನ್ಯ ಸ್ಥಿತಿಯಲ್ಲಿ ಸೆಪ್ಟಂಬರ್‌ನಲ್ಲಿ ಉತ್ತಮ ಮಳೆ ಆಗುವುದರ ಜತೆಗೆ ನೆರೆ ನೀರು ನದಿಯ ದಂಡೆಯ ಮಟ್ಟಕ್ಕೂ ಹರಿದ ಉದಾಹರಣೆಗಳು ಇವೆ. ಇನ್ನು ಮಳೆಯಾಗದಿದ್ದಲ್ಲಿ ಪರಿಸ್ಥಿತಿ ಕೈ ಮೀರಲಿದೆ.

ಪಯಸ್ವಿನಿ: ನೀರಿನ ಮಟ್ಟ ಇಳಿಮುಖ
1974ನೇ ಇಸವಿಯ ಬಳಿಕ ಕುಮಾರಧಾರಾ, ಪಯಸ್ವಿನಿ  ನದಿ ಸೇರಿದಂತೆ ತಾಲೂಕಿನ ನೀರಿನ ಮೂಲಗಳಲ್ಲಿ ಗರಿಷ್ಠ ಮಟ್ಟದಲ್ಲಿ ಮಳೆ ನೀರು ಹರಿದಿತ್ತು. ಈಗ ಒಂದು ವಾರದಿಂದ ನೀರಿನ ಪ್ರಮಾಣ ಸಾಕಷ್ಟು ಕುಸಿದಿದ್ದು, ನದಿಯಲ್ಲಿ ಕಲ್ಲು ಬಂಡೆ ಕಾಣುತ್ತಿದೆ.

ಅಂತರ್ಜಲ ಸಮೀಕ್ಷೆ ಪ್ರಕಾರ 1.96ರಲ್ಲಿ ಇದ್ದ ಜಲಮಟ್ಟ ಈಗ 2.45ಕ್ಕೆ ಕುಸಿದಿದೆ. ಸದ್ಯ ತಾಲೂಕಿ ನಲ್ಲಿ ನೀರಿನ ಅಭಾವ ತಲೆದೋರಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next