ಕಾಪು : ಭಾರೀ ಮಳೆಯಿಂದಾಗಿ ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ನಿಂತು ಹೆದ್ದಾರಿ ಸಂಚಾರಕ್ಕೆ ತೊಂದರೆಯುಂಟಾಗುತ್ತಿದ್ದು, ಅಪಘಾತದ ಭೀತಿಯುಂಟಾಗಿದೆ.
ಪ್ರತೀ ಬಾರಿ ಮಳೆ ಬಂದಾಗಲೂ ಇಲ್ಲಿನ ಪರಿಸ್ಥಿತಿ ಇದೇ ಆಗಿದೆ.
ಕಾಪುವಿನಲ್ಲಿರುವ ಮಂಗಳೂರು – ಉಡುಪಿ ಹೆದ್ದಾರಿ ಮತ್ತು ಸರ್ವೀಸ್ ರಸ್ತೆಯಲ್ಲಿ ಸಂಪೂರ್ಣ ನೀರು ನಿಂತು ಹೆದ್ದಾರಿಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ರಿಕ್ಷಾ ಮತ್ತು ದ್ವಿಚಕ್ರ ವಾಹನ ಸವಾರರಂತೂ ಪ್ರಾಣ ಕೈಯ್ಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಸಮಸ್ಯೆಯೇನು ? : ವಿದ್ಯಾನಿಕೇತನ ಶಾಲೆಯ ಮುಂಭಾಗದ ರಾ.ಹೆ. 66ರ ಎಡಭಾಗದಲ್ಲಿ ಸರ್ವೀಸ್ ರಸ್ತೆ ಮತ್ತು ಬಸ್ ತಂಗುದಾಣವಿದ್ದು ಅಲ್ಲಿ ಮಳೆ ನೀರು ಹರಿದು ಹೋಗಲು ಯಾವುದೇ ರೀತಿಯ ಸಮರ್ಪಕ ವ್ಯವವ್ಥೆಗಳು ಜೋಡಣೆಯಾಗಿಲ್ಲ. ಅದರೊಂದಿಗೆ ಸರ್ವೀಸ್ ರಸ್ತೆ ಮತ್ತು ಹೆದ್ದಾರಿಯ ನಡುವಿನ ಅಂತರವೂ ಹೆಚ್ಚು ಕಡಿಮೆಯಿದ್ದು ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತು ತೊಂದರೆಯುಂಟಾಗುತ್ತಿದೆ. ಸರ್ವೀಸ್ ರಸ್ತೆಯಲ್ಲಿ ನಿಂತ ನೀರು ಸರಿಯಾಗಿ ಹರಿದು ಹೋಗದೇ ಹೆದ್ದಾರಿಯವರೆಗೂ ಬಂದು ರಸ್ತೆ ಬ್ಲಾಕ್ ಆಗಿ ಬಿಡುತ್ತಿದೆ.
ಇದನ್ನೂ ಓದಿ : ಗುಜರಾತ್ ಗಲಭೆ ಹಿಂದೆ ಅಹ್ಮದ್ ಪಟೇಲ್, ಸೋನಿಯಾ ಪಿತೂರಿ: SIT; ಆರೋಪ ತಳ್ಳಿಹಾಕಿದ ಕಾಂಗ್ರೆಸ್
ರಾ. ಹೆ. 66ರ ಚತುಷ್ಪಥ ಯೋಜನೆಯ ಅವೈeನಿಕ ಕಾಮಗಾರಿಯಿಂದಾಗಿ ಹೆದ್ದಾರಿ ಬದಿಯ ಕೆಲವೆಡೆ ಚರಂಡಿಯಲ್ಲಿ ಮಳೆ ನೀರು ಹರಿದು ಹೋಗದೇ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ. ಕಾಪು ವಿದ್ಯಾನಿಕೇತನ ಶಾಲೆಯ ಬಳಿಯ ಹೆದ್ದಾರಿಯಲ್ಲಿ ಕಳೆದ ಹಲವು ವರ್ಷಗಳಿಂದ ಇದೇ ರೀತಿಯ ಅಸ್ತವ್ಯಸ್ತತೆಯಿದ್ದು ಈ ಬಗ್ಗೆ ಹೆದ್ದಾರಿ ಇಲಾಖೆ, ಗುತ್ತಿಗೆದಾರರು ಮತ್ತು ಕಾಪು ಪುರಸಭೆಗೆ ಹಲವು ಬಾರಿ ಮನವಿ ನೀಡಲಾಗಿದೆ. ಯಾರೂ ಕೂಡಾ ಈ ಬಗ್ಗೆ ಸೂಕ್ತ ಸ್ಪಂಧನೆ ನೀಡದೇ ಜನರ ಸಮಸ್ಯೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಜಯರಾಮ ಆಚಾರ್ಯ ಆರೋಪಿಸಿದ್ದಾರೆ.