ಚಿಕ್ಕಬಳ್ಳಾಪುರ: ಸಮರ್ಪಕವಾಗಿ ಮಳೆ ಬೆಳೆ ಆಗದೇ ವರ್ಷದಿಂದ ವರ್ಷಕ್ಕೆ ತೀವ್ರ ಬರಗಾಲಕ್ಕೆ ತುತ್ತಾಗುತ್ತಿರುವ ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬತ್ತಿ ಹೋಗಿ ಅವಸಾನದ ಅಂಚಿಗೆ ತಲುಪಿರುವ ಜಲ ಮೂಲಗಳನ್ನು ಪತ್ತೆ ಮಾಡಿ ಪುನಶ್ಚೇತನ ಗೊಳಿಸಿ ಮತ್ತೂಮ್ಮೆ ಅವುಗಳನ್ನು ಜೀವಸೆಲೆಗಳಾಗಿ ರೂಪಿಸಲು ಜಿಲ್ಲಾದ್ಯಂತ ನಾಳೆಯಿಂದ (ಜೂ.15) ಜಲಮೂಲಗಳ ಸಮೀಕ್ಷೆ ನಡೆಯುತ್ತಿದೆ.
ಈಗಾಗಲೇ ಜಿಲ್ಲೆಯ ಅಂತರ್ಜಲ ಪಾತಾಳಕ್ಕೆ ಕುಸಿದು ಸಾವಿರಾರು ಅಡಿ ಕೊಳವೆ ಬಾವಿ ಕೊರೆದರೂ ಹನಿ ನೀರು ಸಿಗದೇ ಪರದಾಡುತ್ತಿರುವ ಜಿಲ್ಲೆಯ ರೈತಾಪಿ ಕೂಲಿ ಕಾರ್ಮಿಕರ ಬದುಕು ಬರ್ಬರವಾಗಿದೆ. ಕುಡಿಯುವ ನೀರಿಗೆ ಎಲ್ಲಿ ನೋಡಿದರೂ ತೀವ್ರ ಹಾಹಾಕಾರ ಎದುರಾಗಿದೆ. ಇಡೀ ಜಿಲ್ಲೆ ಅಘೋಷಿತ ಜಲಕ್ಷಾಮ ಎದುರಿಸುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಜಲಮೂಲಗಳ ಪುನಶ್ಚೇತನಕ್ಕೆ ಜಿಪಂ ಶ್ರೀಕಾರ ಹಾಡುತ್ತಿದೆ.
ನಾಳೆಯಿಂದ ಸಮೀಕ್ಷೆ: ಜಿಲ್ಲೆಗೆ ಜೀವ ನದಿಗಳಂತಿದ್ದ ಕೆರೆಗಳು ಇಂದು ಬತ್ತಿ ಹೋಗಿದ್ದು, ಭೂಗಳ್ಳರ ಆರ್ಭಟಕ್ಕೆ ಕೆರೆಗಳ ಸ್ವರೂಪವೇ ಬದಲಾಗಿದೆ. ಜಿಲ್ಲೆಯ ಉದ್ದಗಲಕ್ಕೂ ಹರಿಯುತ್ತಿದ್ದ ಉತ್ತರ ಪಿನಾಕಿನಿ, ವೃಷಭಾವತಿ, ಪಾಲಾರ್, ಪೆನ್ನಾರ್, ಚಿತ್ರಾವತಿ ಮತ್ತಿತರ ನದಿಗಳು ನಾಮವೇಶ ಇಲ್ಲದೇ ಹೋಗಿದೆ.
ಐದು ದಿನ ಸಮೀಕ್ಷೆ: ಜಿಲ್ಲೆಯ ಅಂತರ್ಜಲ ಪರಿಸ್ಥಿತಿಯನ್ನು ಕೇಂದ್ರ ಜಲ ಸಂಪನ್ಮೂಲ ಇಲಾಖೆ ಗಮನಿಸಿ ಕೇಂದ್ರ ಜಲಶಕ್ತಿ ಆಯೋಗದಿಂದ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೀಗ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶದಂತೆ ಜಿಪಂ ವತಿಯಿಂದ ಜಿಲ್ಲೆಯಲ್ಲಿನ ಜಲ ಮೂಲಗಳಾದ ಕೆರೆ, ಕುಂಟೆ ಕಾಲುವೆ, ಕಲ್ಯಾಣಿ, ಚೆಕ್ ಡ್ಯಾಂ ಮತ್ತಿತರ ಜಲಮೂಲಗಳ ಸಮೀಕ್ಷೆಯನ್ನು ಜೂ.15 ರ ಸೋಮವಾರದಿಂದ 20 ರವ ರೆಗೂ ಒಟ್ಟು 5 ದಿನಗಳ ಕಾಲ ಎಲ್ಲಾ ಜಲ ಮೂಲಗಳ ಸಪ್ತಾಹವನ್ನು ಅಭಿಯಾನ ರೂಪದಲ್ಲಿ ಜಿಲ್ಲಾದ್ಯಂತ ಕೈಗೊಳ್ಳಲು ನಿರ್ಧರಿಸಲಾಗಿದೆ.
ಸಂಬಂಧಪಟ್ಟ ಜಿಲ್ಲೆಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ತಾಲೂಕು ಮಟ್ಟದ ತಾಪಂ ಇಒಗಳು, ಕೃಷಿ ಅಧಿಕಾರಿಗಳು, ವಿಶೇಷವಾಗಿ ಪಂಚಾಯತ್ ರಾಜ್ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾ ಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಹಾಗೂ ಕಿರಿಯ ಅಭಿಯಂತರರ ಸಹಭಾಗಿತ್ವದಲ್ಲಿ ಸಮೀಕ್ಷೆ ಕಾರ್ಯ ನಡೆಯಲಿದೆ.
ಜಿಲ್ಲೆಯಲ್ಲಿ ಇರುವ ಜಲಮೂಲ ಗಳ ಸಮೀಕ್ಷೆಯನ್ನು ಜಿಲ್ಲಾದ್ಯಂತ ಜೂ.15 ರಿಂದ 20ರ ವರೆಗೂ ಹಮ್ಮಿ ಕೊಳ್ಳಲಾಗಿದೆ. ಸಮೀಕ್ಷೆ ಸಮಯದಲ್ಲಿ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಜಲಮೂಲಗಳ ಸಮೀಕ್ಷೆ ನಡೆಸುವಾಗ ಜಿಲ್ಲೆಯ ಸಾರ್ವಜನಿಕರು ಸಮೀಕ್ಷೆ ಕಾರ್ಯಕ್ಕೆ ಕೈಜೋಡಿಸಿ ಸಹಕರಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ಜಲಮೂಲಗಳ ಪುನಶ್ಚೇತನಕ್ಕೆ ಅನುಕೂಲವಾಗಲಿದೆ.
-ಬಿ.ಫೌಝೀಯಾ ತರುನ್ನುಮ್, ಜಿಪಂ ಸಿಇಒ
* ಕಾಗತಿ ನಾಗರಾಜಪ್ಪ