Advertisement

ಸದ್ಯಕ್ಕಿಲ್ಲ ಜಲಕ್ಷಾಮ ಭೀತಿ; ಆದರೂ ಮಿತವಾಗಿ ನೀರು ಬಳಸಿ

09:55 AM Mar 17, 2018 | Team Udayavani |

ಮಹಾನಗರ : ಎರಡು ವರ್ಷಗಳಿಂದ ಸತತವಾಗಿ ಮಾರ್ಚ್‌- ಎಪ್ರಿಲ್‌ ತಿಂಗಳಿನಲ್ಲಿ ನಗರಕ್ಕೆ ಎದುರಾಗಿದ್ದ ‘ಜಲ ಕ್ಷಾಮ’ದ ಭೀತಿ ಈ ಬಾರಿ ಬಾಧಿಸುವ ಸಾಧ್ಯತೆ ಕಡಿಮೆ. ನಗರಕ್ಕೆ ನೀರುಣಿಸುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ನೀರಿನ ಮಟ್ಟ ಹೆಚ್ಚಿದೆ. ಹೀಗಾಗಿ, ಸದ್ಯಕ್ಕೆ ಕುಡಿಯುವ ನೀರಿನ ರೇಷನಿಂಗ್‌ ಮಾಡುವ ಪರಿಸ್ಥಿತಿ ಇಲ್ಲ. ಜತೆಗೆ ನೀರಿನ ಅಭಾವ ಸಾಧ್ಯತೆಯೂ ದೂರ.

Advertisement

ಪ್ರತಿ ವರ್ಷ ಬೇಸಗೆಯ ಎರಡು ತಿಂಗಳಲ್ಲಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದದ್ದೇ. ಅದರಲ್ಲೂ ಕಳೆದ ವರ್ಷ ನೀರಿನ ಕೊರತೆ ಎದುರಾಗಿ 5 ಮೀಟರ್‌ ಸಾಮರ್ಥ್ಯದ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ (ಮಾ. 14- 2017) 4.30 ಮೀಟರ್‌ ಇತ್ತು. ಆದರೆ, ಈ ವರ್ಷ ಡ್ಯಾಂನ ನೀರಿನ ಮಟ್ಟವನ್ನು 6 ಮೀಟರ್‌ಗೆ ಏರಿಸಲಾಗಿದೆ. ಹೀಗಾಗಿ ಸದ್ಯ 5.59 ಮೀಟರ್‌ ನೀರು ಸಂಗ್ರಹವಿದೆ. ಅಂದರೆ ಈ ವರ್ಷ 1.28 ಮೀಟರ್‌ ನೀರು ಹೆಚ್ಚಳವಿದೆ.

ಆದರೆ, ಪ್ರಸ್ತುತ ಇರುವ ಬಿಸಿಲಿನ ಬೇಗೆ ಹೀಗೆ ಮುಂದುವರಿದರೆ ಡ್ಯಾಂನ ನೀರು ಪ್ರತೀ ದಿನ ಆವಿಯಾಗುವ ಅಪಾಯವಿದೆ. ಪ್ರಸ್ತುತ ನೇತ್ರಾವತಿಯಲ್ಲಿ ಒಳಹರಿವು ಸ್ಥಗಿತಗೊಂಡ ಕಾರಣ ಹಾಗೂ ಬಂಟ್ವಾಳದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ನೀರೆತ್ತುವ ಪ್ರಕ್ರಿಯೆ ನಡೆಯುವ ಕಾರಣ ಡ್ಯಾಂನ ನೀರಿನ ಪ್ರಮಾಣ ಕ್ರಮೇಣ ಕಡಿಮೆಯಾಗಬಹುದು. ಇಂಥ ಸಂದರ್ಭದಲ್ಲಿ ಹತ್ತಿರದ ಎಎಂಆರ್‌ ಡ್ಯಾಂನಿಂದ ನೀರನ್ನು ತುಂಬೆ ಡ್ಯಾಂಗೆ ಬಳಸಿಕೊಳ್ಳಲೂ ಚಿಂತಿಸಲಾಗಿದೆ. ವಿಶೇಷವೆಂದರೆ, ಕಳೆದ ವರ್ಷ ಮಾ. 20ರಿಂದಲೇ ನೀರು ಸರಬರಾಜಿನಲ್ಲಿ ಕಡಿತ ಮಾಡಲಾಗಿತ್ತು.

ಪ್ರತೀ 48 ಗಂಟೆ ನಿರಂತರ ನೀರು ಪೂರೈಸಿ, 36 ಗಂಟೆ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಈ ಮಧ್ಯೆ 2016ರಲ್ಲಿ ಜನವರಿ 1ರಿಂದಲೇ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಪರಿಸ್ಥಿತಿ ಇತ್ತು.!

ಅರವತ್ತು ದಿನದವರೆಗೆ
ತುಂಬೆ ಡ್ಯಾಂನಲ್ಲಿರುವ ನೀರು ಸರಿಸುಮಾರು 60 ದಿನಗಳವರೆಗೆ ಪೂರೈಸಬಹುದು. ಆರು ಮೀಟರ್‌ವರೆಗೆ 10.83 ಮಿಲಿಯನ್‌ ಕ್ಯೂಬಿಕ್‌ ಮೀಟರ್‌ (ಎಂಸಿಎಂ) ನೀರು ಸಂಗ್ರಹವಿದ್ದು, 7 ಮೀಟರ್‌ಗೆ ನಿಲುಗಡೆಯಾದಲ್ಲಿ ಸಂಗ್ರಹ ಸಾಮರ್ಥ್ಯ 14.73 ಎಂಸಿಎಂ ಆಗಲಿದೆ.

Advertisement

ಕೈಗಾರಿಕೆಗಳಿಗೂ ಸದ್ಯಕ್ಕಿಲ್ಲ ನೀರು ಕಡಿತ
ಇತ್ತೀಚೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದ್ಯ ಕೈಗಾರಿಕೆಗಳಿಗೆ ನೀರು ಕಡಿತ ಮಾಡದಿರಲು ತೀರ್ಮಾನಿಸಲಾಗಿದೆ. ಪರಿಸ್ಥಿತಿಯನ್ನು ಪರಾಮರ್ಶಿಸಿ ಹಾಗೂ ತುಂಬೆ/ಎಎಂಆರ್‌ ಡ್ಯಾಂ ನೀರಿನ ಮಟ್ಟವನ್ನು ಗಮನಿಸಿ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ. ನಗರಕ್ಕೆ 160 ಎಂಎಲ್‌ಡಿ (ದಿನವೊಂದಕ್ಕೆ ಮಿಲಿಯ ಲೀಟರ್‌) ನೀರು ಪೂರೈಕೆಯಾಗುತ್ತಿದೆ.

ಎಂಜಿಡಿ (ಮಿಲಿಯ ಗ್ಯಾಲನ್ಸ್‌) ಲೆಕ್ಕಾಚಾರದಲ್ಲಿ 160 ಎಂಎಲ್‌ಡಿ ಅಂದರೆ ಸುಮಾರು 35 ಎಂಜಿಡಿ. ತುಂಬೆ ಡ್ಯಾಂನಿಂದ ಎಂಸಿಎಫ್‌ಗೆ 2 ಎಂಜಿಡಿ ಹಾಗೂ ಎನ್‌ಎಂಪಿಟಿಗೆ 0.5 ಎಂಜಿಡಿ, ಇತರ ಕೈಗಾರಿಕೆಗಳಿಗೆ 1 ಎಂಜಿಡಿ ನೀರು ಪೂರೈಕೆಯಾಗುತ್ತಿದೆ. ಎಎಂಆರ್‌ ಡ್ಯಾಂನಿಂದ ಎಂಆರ್‌ಪಿಎಲ್‌ಗೆ 6 ಎಂಜಿಡಿ ಹಾಗೂ ವಿಶೇಷ ಆರ್ಥಿಕ ವಲಯಕ್ಕೆ (ಎಸ್‌ಇಝೆಡ್‌) 8 ಎಂಜಿಡಿ ನೀರು ಪೂರೈಕೆಯಾಗುತ್ತದೆ. ಸುಮಾರು 18 ಎಂಜಿಡಿಯಷ್ಟು ನೀರು ವಿವಿಧ ಕೈಗಾರಿಕೆಗಳಿಗೆ ಎರಡೂ ಡ್ಯಾಂಗಳಿಂದ ಪೂರೈಕೆಯಾಗುತ್ತಿದೆ.

ನೀರು ಲಭ್ಯವಿದ್ದರೂ ಮಿತ ಬಳಕೆ ಗಮನದಲ್ಲಿರಲಿ
ಜಿಲ್ಲಾಡಳಿತ/ಮಹಾನಗರ ಪಾಲಿಕೆ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕಿಲ್ಲ ಎಂದು ಹೇಳಿದರೂ, ನಾಗರಿಕರು ನೀರಿನ ಮಿತವ್ಯಯ ಮಾಡುವುದು ಸೂಕ್ತ. ಮುಂದೆ ನೀರಿಲ್ಲ ಎಂದು ಆಡಳಿತಗಾರರು ಹೇಳಿದರೆ ಕಷ್ಟವಾಗಬಹುದು. ಅದಕ್ಕಿಂತ ಮುಂಚಿತವಾಗಿ ಮಿತವ್ಯಯಕ್ಕೆ ಮುಂದಾಗಬೇಕಿದೆ. ಹೀಗಾಗಿ ಮನೆ, ವ್ಯವಹಾರ, ಹಾಸ್ಟೆಲ್‌, ಕಚೇರಿ ಸೇರಿದಂತೆ ಎಲ್ಲೆಡೆ ನೀರಿನ ಮಿತಬಳಕೆಗೆ ಆದ್ಯತೆ ನೀಡಬೇಕು ಎಂಬುದು ‘ಸುದಿನ’ ಕಾಳಜಿ.

ಸದ್ಯಕ್ಕಿಲ್ಲ ರೇಷನಿಂಗ್‌
ಸದ್ಯ ಮಾಹಿತಿ ಪ್ರಕಾರ ‘ಎಪ್ರಿಲ್‌ ಮಧ್ಯ ಭಾಗದವರೆಗೆ ನಗರಕ್ಕೆ ನೀರು ರೇಷನಿಂಗ್‌ ನಡೆಸುವುದಿಲ್ಲ. ಬಳಿಕ ನೀರಿನ ಲಭ್ಯತೆ ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಆದರೆ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಅಂಥ ಸಮಸ್ಯೆ ಕಾಣಿಸುತ್ತದೆ.
 -ಮಹಮದ್‌ ನಝೀರ್‌, ಮಂಗಳೂರು ಆಯುಕ್ತ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next