Advertisement

ಮಳವೂರು ವೆಂಟೆಡ್‌ ಡ್ಯಾಂನ ನೀರೇ ಆಶ್ರಯ

05:24 AM Feb 13, 2019 | Team Udayavani |

ಬಜಪೆ : ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಡಿಯುವ ನೀರು ಸರಬರಾಜು ಕೊಳವೆ ಬಾವಿ ಮತ್ತು ಮಳವೂರು ವೆಂಟೆಡ್‌ ಡ್ಯಾಂನ ನೀರನ್ನು ಆಶ್ರಯಿಸಿದೆ. ಕೊಳವೆ ಬಾವಿಗಳ ಅಂತರ್ಜಲ ಕುಸಿತದಿಂದ ಮಳವೂರು ವೆಂಟೆಡ್‌ ಡ್ಯಾಂ ನೀರೇ ಇಲ್ಲಿನ ನೀರಿನ ಸಮಸ್ಯೆಗೆ ಸದ್ಯದ ಪರಿಹಾರ. ಕಳೆದ ಬಾರಿಗಿಂತಲೂ ಬೇಗನೆ ಕೊಳವೆ ಬಾವಿಯ ನೀರಿ ಮಟ್ಟ ಕಡಿಮೆಯಾಗಿರುವುದು ಪಂಚಾಯತ್‌ನ ಚಿಂತೆಗೆ ಕಾರಣವಾಗಿದೆ.

Advertisement

ಕೆಲವು ಕೊಳವೆ ಬಾವಿಯ ಅಂತರ್ಜಲ ಮಟ್ಟ ಕುಸಿದಿದೆ. ಈಗಾಗಲೇ ಸುಮಾರು 30 ಅಡಿ ಅಳಕ್ಕೆ ಹೋಗಿದೆ. ಗ್ರಾ. ಪಂ. 2 ಪೈಪುಗಳನ್ನು ಕೊಳವೆಬಾವಿಗಳ ಆಳಕ್ಕೆ ಇಳಿಸಿದೆ. ಕಳೆದ ಬಾರಿ ಎಪ್ರಿಲ್‌ನಲ್ಲಿ ಕಂಡ ನೀರಿನ ಸಮಸ್ಯೆ ಈ ಬಾರಿ ಈಗಲೇ ಶುರುವಾಗಿದೆ.ಮೇ, ಜೂನ್‌ ತಿಂಗಳಲ್ಲಿ ಉತ್ತಮ ಮಳೆ ಬಿದ್ದರೂ ನೀರಿನ ಅಭಾವದ ಕಾರಣ ಕೊಳವೆ ಬಾವಿ ಹಾಗೂ ಮಳವೂರು ವೆಂಟೆಡ್‌ ಡ್ಯಾಂನ್ನು ಆಧರಿಸಿ ಪಂ. ಮನೆಮನೆಗಳಿಗೆ ನೀರು ಸರಬರಾಜು ಮಾಡುತ್ತಿದೆ.

ಬಜಪೆಯಲ್ಲಿ 3 ಸಾವಿರಕ್ಕೂ ಹೆಚ್ಚು ಮನೆಗಳಿವೆ. ಜನಸಂಖ್ಯೆ ಅಧಿಕವಾದ ಕಾರಣ ನೀರು ಹೆಚ್ಚು ಖರ್ಚಾಗುತ್ತದೆ. ಹಾಗೂ ಇತರ ಕಡೆಗಳಿಗಿಂತ ಬೇಗನೆ ನೀರಿನ ಸಮಸ್ಯೆ ತಲೆದೋರಿದೆ.  ಈ ವ್ಯಾಪ್ತಿಯಲ್ಲಿ ಕೆರೆ ಹಾಗೂ ನದಿ ಇಲ್ಲ. ತೊಟ್ಟಿಲಗುರಿಯ ತೋಡು ಹಿಂದೆ ನೀರಿನ ಮೂಲವಾಗಿತ್ತು. ಅದರಲ್ಲಿ ಎಪ್ರಿಲ್‌ ತನಕವೂ ನೀರು ಹರಿಯುತ್ತಿತ್ತು. ಇಂದು ನವೆಂಬರ್‌ ತಿಂಗಳಲ್ಲೇ ನೀರು ಬತ್ತಿ, ದ್ರವ ತ್ಯಾಜ್ಯ ಹರಿಯುವ ತೋಡಾಗಿ ಪರಿವರ್ತನೆಗೊಂಡಿದೆ. ಮಳವೂರು ಡ್ಯಾಂನಿಂದ ದಿನಕ್ಕೆ ಒಂದೇ ಬಾರಿ ಟ್ಯಾಂಕಿ ತುಂಬಿಸುತ್ತಿದ್ದುದರಿಂದ ಸಮಸ್ಯೆಗೆ ಕಾರಣವಾಗಿದೆ.ಕಳೆದ ಬಾರಿ ಒಂದು ಟ್ಯಾಂಕಿಗಿಂತ ಸ್ವಲ್ಪ ಹೆಚ್ಚು ನೀರನ್ನು ತುಂಬಿಸಲಾಗುತ್ತಿತ್ತು. ನೀರು ಸರಬರಾಜು ಯೋಜನೆಯಡಿಯಲ್ಲಿ ಮೂರು ಓವರ್‌ ಹೆಡ್‌ ಟ್ಯಾಂಕಿಗಳ ನಿರ್ಮಾಣ ಹಾಗೂ ಅದರಲ್ಲಿ ಮಳವೂರು ಡ್ಯಾಂ ನೀರು ತುಂಬಿಸಿ ನೀರು ಸರಬರಾಜು ಮಾಡಿದ್ದಲ್ಲಿ ನೀರು ಸಮಸ್ಯೆಗೆ ಪರಿಹಾರ ಕಾಣಬಹುದು. ಕೊಳವೆ ಬಾವಿಗಳನ್ನು ಈಗಾಗಲೇ ದುರಸ್ತಿಗೊಳಿಸುವ ಕಾರ್ಯ ಆರಂಭವಾಗಿದ್ದು, 3 ಓವರ್‌ ಹೆಡ್‌ ಟ್ಯಾಂಕಿಗಳಿಗೂ ಬೇಡಿಕೆ ಸಲ್ಲಿಸಿದೆ. ನೀರಿನ ಸಮಸ್ಯೆಯನ್ನು ತಡೆಯಲು ಪಂ. ಸಿದ್ಧತೆ ನಡೆಸಿದೆ.

ಹೊಸ ಕೊಳವೆ ಬಾವಿಗೆ ಮನವಿ
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾದ ಮಳವೂರು ವೆಂಟೆಡ್‌ ಡ್ಯಾಂ ನೀರು ಬಂದ ಮೇಲೆ ನೀರಿನ ಸಮಸ್ಯೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಹಾಗಾಗಲಿಲ್ಲ. ನೀರಿನ ಸಮಸ್ಯೆ ಈಗಲೂ ನಮ್ಮನ್ನು ಕಾಡುತ್ತಿದೆ. ಹೊಸ ಕೊಳವೆ ಬಾವಿಗೆ ನಾವು ಜಿಲ್ಲಾ ಪಂಚಾಯತ್‌ಗೆ ಮನವಿ ಮಾಡಿದ್ದೇವೆ. ಬಜಪೆ ಗ್ರಾಮ ಪಂಚಾಯತ್‌ ನಗರವಾಗುತ್ತಿದೆ. ಇತರ ಪಂಚಾಯತ್‌ನ ನಿಯಮಗಳು ಇಲ್ಲಿಗೆ ಅನ್ವಯವಾಗುವುದಿಲ್ಲ. ಅವಿಭಕ್ತ ಕುಟುಂಬಗಳು, ವಲಸೆ ಕಾರ್ಮಿಕರು, ಜಾಸ್ತಿಯಾದ ಕಾರಣ ಡ್ಯಾಂ ನ ಅಧಿನಿಯಮದ ಪ್ರಕಾರ ಒಬ್ಬರಿಗೆ 55ಲೀಟರ್‌ ನೀರು ಸಾಕಾಗುತ್ತಿಲ್ಲ.
– ಸಾಯೀಶ್‌ ಚೌಟ
ಬಜಪೆ ಗ್ರಾ.ಪಂ. ಪಿಡಿಒ

ನೀರಿನ ಸಮಸ್ಯೆ ಬಂದಿಲ್ಲ
ಇಷ್ಟರ ತನಕ ನೀರಿನ ಸಮಸ್ಯೆ ಬಂದಿಲ್ಲ. ದೂರು ಕೂಡ ಬಂದಿಲ್ಲ. ಕೊಳವೆ ಬಾವಿಗಳಲ್ಲಿ ಕಳೆದ ಬಾರಿಗಿಂತ ಈ ಬಾರಿ ನೀರಿನಮಟ್ಟ ಕಡಿಮೆಯಾಗಿದೆ. ಈಗಾಗಲೇ ಮೂರು ಕೊಳವೆಬಾವಿಗಳನ್ನು ಸರಿಪಡಿಸಲಾಗಿದೆ. ನೀರಿನ ಮಟ್ಟ ಕಡಿಮೆ ಇದ್ದ ಬೇರೆ ಕೊಳವೆಬಾವಿಗಳನ್ನು ಸರಿಪಡಿಸಲಾಗುತ್ತದೆ. ಒಂದು ಹೆಚ್ಚುವರಿ ಕೊಳವೆ ಬಾವಿಗಳನ್ನು ಈ ಬಾರಿ ಕೊರೆ‌ಯಲಾಗುವುದು. ಕೆಲವೆಡೆ ಡ್ಯಾಂನ ನೀರು ಸರಬರಾಜು ಮಾಡಲಾಗುವುದು.
– ರೋಜಿ ಮಥಾಯಸ್‌
ಬಜಪೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ

Advertisement

‡ ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next