ಬೆಳ್ತಂಗಡಿ: ಪ್ರಸಿದ್ಧ ಪುಣ್ಯಕ್ಷೇತ್ರ ಎನಿಸಿಕೊಂಡಿರುವ ಧರ್ಮಸ್ಥಳದಲ್ಲೂ ನೀರಿನ ಅಭಾವ ಕಂಡು ಬಂದಿದ್ದು, ಕ್ಷೇತ್ರಕ್ಕೆ ಆಗಮಿಸುವ ಭಕ್ತರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಮನವಿ ಮಾಡಲಾಗಿದೆ.
ಧರ್ಮಸ್ಥಳದ ಮೂಲಕ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗಿರುವ ಪರಿಣಾಮ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ನೀರಿನ ಅಭಾವ ಹೆಚ್ಚಾಗುತ್ತಿದೆ. ಹೀಗಾಗಿ, ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ದ.ಕ.ಜಿಲ್ಲಾಡಳಿತ ಮೂಲಕ ತಮ್ಮ ಕ್ಷೇತ್ರದರ್ಶನವನ್ನು ಕೆಲ ದಿನಗಳ ಕಾಲ ಮುಂದೂಡುವಂತೆ ಭಕ್ತರಲ್ಲಿ ವಿನಂತಿಸಿದ್ದಾರೆ.
ಪ್ರಸ್ತುತ ಶಾಲಾ-ಕಾಲೇಜುಗಳ ರಜಾ ಅವಧಿಯಾದ ಪರಿಣಾಮ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ನೀರಿನ ಅವಶ್ಯಕತೆಯೂ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ನೇತ್ರಾವತಿ ಸ್ನಾನಘಟ್ಟದಲ್ಲೇ ಸ್ನಾನ ಮಾಡುತ್ತಾರೆ. ಆದರೆ ಈಗ ನದಿಯಲ್ಲಿ ನೀರಿಲ್ಲದೆ ಅಲ್ಲಿ ಸ್ನಾನ ಮಾಡುವುದು ಕಷ್ಟವಾಗಿದೆ.
ಹೀಗಾಗಿ, ಕ್ಷೇತ್ರದ ವಸತಿಗೃಹಗಳಲ್ಲೇ ಸ್ನಾನ ಮಾಡುತ್ತಿದ್ದಾರೆ. ಅಷ್ಟೊಂದು ಪ್ರಮಾಣದ ನೀರನ್ನು ಪೂರೈಸಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಮನವಿ ಮಾಡಲಾಗಿದೆ. ಕ್ಷೇತ್ರಕ್ಕೆ ದೂರದ ಊರುಗಳಿಂದ ಹೆಚ್ಚಿನ ಭಕ್ತರು ಆಗಮಿಸುವುದರಿಂದ, ಅವರು ತಾಸುಗಟ್ಟಲೆ ಪ್ರಯಾಣ ಮಾಡಿ ಬರುವುದರಿಂದ ಕ್ಷೇತ್ರದಲ್ಲಿ ಬಂದು ಸ್ನಾನ ಮಾಡುವುದು ಕೂಡ ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ನೀರಿಗೆ ತೊಂದರೆ ಕಂಡು ಬಂದಿದೆ.
ಧರ್ಮಸ್ಥಳ ಕ್ಷೇತ್ರಕ್ಕೆ ನೇತ್ರಾವತಿ ನದಿಯೇ ನೀರಿನ ಮೂಲವಾಗಿದ್ದು, ಕ್ಷೇತ್ರದಲ್ಲಿ ನಿರ್ಮಿಸಲಾದ ಡ್ಯಾಮ್ ಮೂಲಕ ಓವರ್‌ಹೆಡ್ ಟ್ಯಾಂಕ್‌ಗೆ ನೀರನ್ನು ಪೂರೈಸಿ ಬಳಿಕ ಕ್ಷೇತ್ರಕ್ಕೆ ಉಪಯೋಗಿಸಲಾಗುತ್ತಿದೆ. ಹೀಗಾಗಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಎಲ್ಲಾ ಕೆಲಸ ಕಾರ್ಯಗಳಿಗೂ ನೀರನ್ನು ಪೂರೈಕೆ ಮಾಡುವುದು ಕಷ್ಟವಾಗಲಿದೆ.
ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಭಕ್ತರ ಸಂಖ್ಯೆ ಹೆಚ್ಚಳವಾದಾಗ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಇಲ್ಲಿಯವರೆಗೆ ಭಕ್ತರಿಗೆ ತೊಂದರೆಯಾಗದಂತೆ ಕ್ಷೇತ್ರದ ವತಿಯಿಂದ ಕ್ರಮ ಕೈಗೊಳ್ಳಲಾಗಿದ್ದು, ಮುಂದೆ ನೀರಿಲ್ಲದೆ ಭಕ್ತರಿಗೆ ತೊಂದರೆಯಾಗಬಾರದ ರೀತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮನವಿ ಮಾಡಲಾಗಿದೆ.