Advertisement
ಮೊಗೇರಡ್ಕ ಶಾಲೆ ಪರಿಸರದ ಬಡ ಕೂಲಿ ಕಾರ್ಮಿಕರ, ಮಧ್ಯಮ ವರ್ಗದವರ ಆಶಾಕಿರಣವಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೂ ಇದ್ದಾರೆ. ಆದರೆ ಮೂಲ ಸೌಕರ್ಯಗಳಾದ ಕೊಠಡಿ, ಪ್ರಯೋಗ ಪರಿಕರಗಳು, ಶಾಲಾ ಆವರಣ ಗೋಡೆ ಮೊದಲಾದ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ.
ಇಲ್ಲಿನ ನೀರಿನ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿದ್ದಾರೆ. ಶಾಲಾ ಆವರಣದಲ್ಲಿದ್ದ ತೆರದ ಬಾವಿ ಬತ್ತಿ ಹೋಗಿ ತಿಂಗಳಾಗುತ್ತಾ ಬಂತು. ಬಳಿಕ ಕೈಪಂಪು ಅಳವಡಿಸಿದ್ದ ಕೊಳವೆ ಬಾವಿ ಕೂಡಾ ಬತ್ತಿ ಹೋಗಿದೆ. ಅದನ್ನು ದುರಸ್ತಿ ಮಾಡಿ ಅಥವಾ ನೂತನ ಕೊಳವೆ ಬಾವಿ ಕೊರೆಸಿಕೊಡಿ ಎಂದು ಇಲ್ಲಿನ ಶಾಲಾಭಿವೃದ್ಧಿ ಸಮಿತಿಯವರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಮುಖಾಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಎರಡೆರಡು ಬಾರಿ ಮನವಿ ಸಲ್ಲಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್‌ಗೂ ಮನವಿ ಮಾಡಿದ್ದಾರೆ. ಆದರೆ ಇದ್ಯಾವುದೂ ಈವರೆಗೆ ಫಲ ನೀಡಿಲ್ಲ. ಜಿಲ್ಲಾಧಿಕಾರಿಗಳಿಗೆ ಮನವಿ
ವಿದ್ಯಾಭಿಮಾನಿಗಳು ಸ್ಥಳೀಯ ಸಾಮಾಜಿಕ ಮುಂದಾಳು ರಾಮಕೃಷ್ಣ ಹೊಳ್ಳಾರು ಅವರ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಆಶಾ ಲಕ್ಷ್ಮಣ ಅವರನ್ನೊಳಗೊಂಡ ನಿಯೋಗವೊಂದು ಫೆ. 11ರಂದು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಮನವಿಗೆ ಸ್ಪಂದಿಸಿ ಜಿಲ್ಲಾಧಿಕಾರಿಯವರು ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ದೂರವಾಣಿ ಕರೆ ಮಾಡಿ ಬತ್ತಿ ಹೋದ ಕೊಳವೆ ಬಾವಿಯನ್ನು ಕೂಡಲೇ ದುರಸ್ತಿ ಮಾಡಿ ವಿದ್ಯುತ್ ಪಂಪು ಅಳವಡಿಸಬೇಕು. ಮಾತ್ರವಲ್ಲ ಶಾಲಾ ವಠಾರದಲ್ಲಿ ನೂತನ ಕೊಳವೆ ಬಾವಿ ಕೊರೆದು ಶಾಶ್ವತವಾಗಿ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಸೂಚನೆ ನೀಡಿದ್ದಾರೆ. ಆದರೆ ಆ ಬಳಿಕ ಯಾವ ಅಧಿಕಾರಿಗಳೂ ಈ ಬಗ್ಗೆ ಗಮನಹರಿಸಿಲ್ಲ. ಸಮಸ್ಯೆಗೆ ಪರಿಹಾರ ದೊರೆಯಲೇ ಇಲ್ಲ. ವಿದ್ಯಾರ್ಥಿಗಳು ಹಾಗೂ ಅಕ್ಷರ ದಾಸೋಹ ಸಿಬಂದಿಗಳು ಶಾಲೆಯ ಸಮೀಪದ ಖಾಸಗಿಯವರ ಕೊಳವೆ ಬಾವಿಯಿಂದ ನೀರು ಹೊತ್ತು ತರುತ್ತಿದ್ದಾರೆ. ಶೌಚಾಲಯ ನಿರ್ವಹಣೆಗೆ, ಕುಡಿಯುವುದಕ್ಕಾಗಿ ಅಡುಗೆ ಬೇಯಿಸಲು, ಪಾತ್ರೆ ತೊಳೆಯಲು ಎಲ್ಲದಕ್ಕೂ ಬೇರೆಡೆಯಿಂದ ನೀರು ಹೊತ್ತು ತರುವ ಅನಿವಾರ್ಯತೆ ಎದುರಾಗಿದೆ.
Related Articles
ಶಾಲೆಯಲ್ಲಿ ನೀರಿನ ಸಮಸ್ಯೆ ಉಂಟಾಗಿ ತಿಂಗಳಾಗುತ್ತಾ ಬಂದಿದೆ. ತೆರೆದ ಬಾವಿ ಕೂಡಾ ಬತ್ತಿ ಹೋಗಿದೆ. ಕೆಟ್ಟುಹೋದ ಕೊಳವೆ ಬಾವಿ ದುರಸ್ತಿ ಮಾಡಿಕೊಡಿ ಅಥವಾ ನೂತನ ಕೊಳವೆ ಬಾವಿ ಕೊರೆದು ಕುಡಿಯುವ ನೀರಿನ ಸಮಸ್ಯೆ ಪರಿಸಹರಿಸಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿದೆ. ಜಿಲ್ಲಾಧಿಕಾರಿಯವರು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಸಮಸ್ಯೆ ಪರಿಹರಿಸಲು ಸೂಚನೆ ನೀಡಿದ್ದಾರೆ. ಆದರೆ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಮುಂದಾಳು ರಾಮಕೃಷ್ಣ ಹೊಳ್ಳಾರು ಹೇಳಿದ್ದಾರೆ.
Advertisement
ಅಧಿಕಾರಿಗಳೊಂದಿಗೆ ಚರ್ಚೆಮೊಗೇರಡ್ಕ ಶಾಲಾ ನೀರಿನ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಕೂಡಲೇ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾವುದು.
– ಪಿ.ಪಿ. ವರ್ಗೀಸ್
ಜಿ.ಪಂ. ಸದಸ್ಯರು, ಕಡಬ ಡಿಸಿಗೆ ಪತ್ರ
ಮೊಗೇರಡ್ಕ ಶಾಲೆಯ ನೀರಿನ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ಪಂಚಾಯತ್‌ನಿಂದ ಪತ್ರ ಬರೆಯಲಾಗಿದೆ. ಶಾಸಕರಿಗೂ ಮನವಿ ಸಲ್ಲಿಸಲಾಗಿದೆ. ಸಮಸ್ಯೆ ಬಗೆ ಹರಿಸಲು ಅನುದಾನ ನೀಡುವಂತೆ ಸಂಬಂಧ ಪಟ್ಟವರಿಗೆ ಒತ್ತಡ ಹೇರಲಾಗುವುದು.
-ಅಜಿತ್ ಎಸ್.
ಅಧ್ಯಕ್ಷರು, ಕೊಂಬಾರು ಗ್ರಾ.ಪಂ