ದೋಟಿಹಾಳ: ಬೇಸಿಗೆ ಆರಂಭವಾಗಿದ್ದೇ ತಡ ತಾಲೂಕಿನ ಗಡಿಭಾಗದ ಹಳ್ಳಿಗಳಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಜನರು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.
ಜುಮಲಾಪೂರ ಗ್ರಾಪಂ ಇದ್ಲಾಪೂರದಲ್ಲಿ ಕಳೆದ ಒಂದು ವಾರದಿಂದ ನೀರಿನ ಸಮಸ್ಯೆ ಕಾಡುತ್ತಿದೆ. ಹೊಸ ಬಡಾವಣೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇಲ್ಲಿ ಕಳೆದ 15 ದಿನಗಳಿಂದ ಜನರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ನೀರಿಗಾಗಿ ಜನ ಹೊಲಗದ್ದೆಗಳಿಗೆ ಅಲೆದಾಡುವಂತಾಗಿದೆ.
ಇಲ್ಲಿ ಒಂದು ನೀರಿನ ಟ್ಯಾಂಕ್ ಸಹ ಇಲ್ಲ. ನಲ್ಲಿ ನೀರು ಬಂದರೇ ಮಾತ್ರ ಜನರು ನೀರು ಹಿಡಿಯಬೇಕು. ಇಲ್ಲ ಊರ ಮುಂದೇ ಇರುವ ಕೈ ಬೋರ್ ಹೊಡೆದು ನೀರು ತರಬೇಕು. ಗ್ರಾಮದಲ್ಲಿ ಹಾಕಲಾದ ನಳಗಳ ಪೈಪ್‌ಗ್ಳು ಒಡೆದು ಹೋಗಿವೆ ಎನ್ನುತ್ತಾರೆ ಗ್ರಾಮಸ್ಥರು.
ಗಂಟೆಗೊಂದು ಕೊಡ: ನೀರಿನ ಸಮಸ್ಯೆ ಇರುವುದರಿಂದ ಜನರು ಗ್ರಾಮದ ಮುಂದೇ ಇರುವ ಕೈ ಬೋರಿಗೆ ಬರುತ್ತಿದ್ದಾರೆ. ನೀರಿನ ಅಂತರ್ಜಲ ಕಡಿಮೆ ಇರುವುದರಿಂದ ಗಂಟೆಗೊಂದು ಬಿಂದಿಗೆ ತುಂಬುತ್ತವೆ. ಕೈ ಬೋರ್ ಒಡೆದು ಮಹಿಳೆಗೆ ಸುಸ್ತಾಗುತ್ತಿದ್ದಾರೆ. ಈ ಮಧ್ಯ ನೀರಿಗಾಗಿ ಆಗಮಿಸಿ ಜನರು ಗಂಟೆಗಟ್ಟಲೆ ನೀರಿಗಾಗಿ ಬಿಸಿಲಿನಲ್ಲಿ ಕುಳಿತು ಕಾಯಬೇಕು.
ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಸರಿಯಾಗಿ ನಡೆದಿಲ್ಲ. ಕೆಲವು ಕಡೆಗಳಲ್ಲಿ ಹನಿ ಹನಿಯಾಗಿ ನೀರು ಬರುತ್ತದೆ. ಇನ್ನೂ ಕೆಲವು ಕಡೆಗಳಲ್ಲಿ ನೀರೇ ಬರುವುದಿಲ್ಲ. ಕಳೆದ 15 ದಿನಗಳಿಂದ ಗ್ರಾಮದ ಜನರು ಈ ಕೈ ಬೋರಿನಿಂದ ಗಂಟೆಗಟ್ಟಲೆ ಕಾದು ನೀರಿ ಒಯ್ಯುತ್ತಿದ್ದಾರೆ. ಬೆಳಗಿನಿಂದ ಸಂಜೆಯವರೆಗೆ ಜನ ನೀರಿಗಾಗಿ ಕಾಯುವಂತಾಗಿದೆ ಎಂದು ಅಲವತ್ತುಕೊಳ್ಳುತ್ತಾರೆ.
ಸಾಮಾನ್ಯವಾಗಿ ರೈತಾಪಿ ಜನ ಇರುವುದರಿಂದ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು, ನೀರಿಗಾಗಿ ಕಾಯುವ ಪರಿಸ್ಥಿತಿ ಇದೆ. ಇನ್ನೂ ಕೆಲವರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ನೀರಿಗಾಗಿ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಗ್ರಾಮದಲ್ಲಿ ಸುಮಾರು 100ಕ್ಕೂ ಮನೆಗಳಿದ್ದು, ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬೇಸಿಗೆ ಆರಂಭದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಗಮನಹರಿಸಬೇಕು ಎನ್ನುವುದು ಸಾರ್ವಜನಿಕರ ಕಳಕಳಿಯಾಗಿದೆ.
ಬೋರ್ ಹೊಡೆದು ಹೊಟ್ಟೆ ನೋವು
ಕಳೆದ ಒಂದು ವಾರದಿಂದ ನೀರಿನ ಸಮಸ್ಯೆಯಾಗಿದೆ. ಈ ಮೊದಲು 15 ದಿನಗಳಿಂದ ನೀರಿನ ಸಮಸ್ಯೆಯಾಗಿತ್ತು. ಆಗ 2-3 ದಿನ ನೀರು ಬಂದವು. ಈಗ ಮತ್ತೆ ನೀರಿನ ಸಮಸ್ಯೆಯಾಗಿದೆ. ಕೈಬೋರ್ ಒಡೆದು ಸಾಕಾಗಿದೆ. ಹೊಟ್ಟೆ ನೋವು ಬರುತ್ತಿದೆ ಎಂದು ಅಲವತ್ತು ಕೊಳ್ಳುತ್ತಾರೆ ಇದ್ಲಾಪೂರ ಹೊಸ ಬಡಾವಣೆಯ ಮಹಿಳೆ ದೇವಮ್ಮ.
ಬಿಸಿಯೂಟಕ್ಕೂ ಪರದಾಟ
ಶಾಲಾ ಮಕ್ಕಳ ಬಿಸಿಯೂಟಕ್ಕೂ ನೀರಿನ ಸಮಸ್ಯೆ ಕಾಡುತ್ತಿದೆ. ಗ್ರಾಮದ ಜನರಿಗೆ ಮಾತ್ರ ನೀರಿನ ಸಮಸ್ಯೆವಿಲ್ಲ. ಮಧ್ಯಾಹ್ನದ ಬಿಸಿಯೂಟ ಅಡುಗೆ ಮಾಡಲು ನೀರಿಲ್ಲ. ಶಾಲಾ ಮಕ್ಕಳು ತೋಟಗಳಿಗೆ ಹೋಗಿ ನೀರು ತರುತ್ತಾರೆ ಎಂದು ಹೇಳುತ್ತಾರೆ ಶಾಲಾ ಮಕ್ಕಳು.
ಇದ್ಲಾಪೂರದಲ್ಲಿ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಬಂದಿದೆ. ಇದರ ಬಗ್ಗೆ ತಾಲೂಕು ಗ್ರಾಮೀಣ ಕುಡಿಯುವ ನೀರು ಅಧಿ ಕಾರಿಗಳಿಗೆ ಮಾಹಿತಿ ನೀಡಿದ್ದೇನೆ ನಾಳೆ ಸರಿಪಡಿಸುತ್ತಾರೆ. ನಾನು ಈ ಗ್ರಾಪಂಗೆ ಬಂದು 2-3 ದಿನಗಳಾಗಿವೆ.
-ವೆಂಕಟೇಶ ಪವಾರ ಪಿಡಿಒ ಜುಮಲಾಪೂರ
ಮಲ್ಲಿಕಾರ್ಜುನ ಮೆದಿಕೇರಿ