Advertisement

ದೇಗುಲ ಕೆರೆಗಳ ಅಭಿವೃದ್ಧಿಗೆ ಜಲಾಭಿಷೇಕ ಯೋಜನೆ

01:39 AM Jan 25, 2020 | mahesh |

ಮಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಸೇರಿದ ದೇವಾಲಯಗಳ ಕಲ್ಯಾಣಿ, ಕೊಳ, ಕೆರೆ, ಸರೋವರಗಳನ್ನು ಅಭಿವೃದ್ಧಿ ಪಡಿಸಲು ಜಲಾಭಿಷೇಕ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಯೋಜನೆಯ ವೆಚ್ಚವನ್ನು ಆಯಾಯ ದೇಗುಲಗಳ ನಿಧಿ ಮತ್ತು ವಿವಿಧ ಖಾಸಗಿ ಉದ್ದಿಮೆಗಳ ಸಿಎಸ್‌ಆರ್‌ ನಿಧಿಯಡಿ ಮತ್ತು ಸಾರ್ವಜನಿಕರ ದೇಣಿಗೆ, ಶ್ರಮ ದಾನದ ಮೂಲಕ ಭರಿಸಲಾಗುವುದು ಎಂದರು.

Advertisement

ಇ-ಆಫೀಸು
ಧಾರ್ಮಿಕದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ 34,562 ದೇವಾಲಯಗಳ ಕೋಟ್ಯಂತರ ರೂ. ಬೆಲೆಬಾಳುವ ಚರ-ಸ್ಥಿರ ಆಸ್ತಿಗಳನ್ನು, ಅತ್ಯಮೂಲ್ಯ ದಾಖಲೆಗಳ ಸಂರಕ್ಷಣೆ, ಆಡಳಿತ ನಿರ್ವಹಣೆ ಮತ್ತು ದೈನಂದಿನ ಕಾರ್ಯಚಟುವಟಿಕೆಗಳನ್ನು ಸುಗಮವಾಗಿ ಪಾರದರ್ಶಕವಾಗಿ ನಿರ್ವಹಿಸಿ ಇ-ಆಡಳಿತ ಯೋಜನೆಗಳನ್ನು ( ಇ-ಆಫೀಸ್‌, ವೆಬ್‌ಬೇಸ್ಡ್ ಅಪ್ಲಿಕೇಶನ್‌/ ಸಾಫ್ಟ್‌ವೇರ್‌) ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ದೇವಾಲಯಗಳ ಮೂರು ವರ್ಷಗಳ ಅವಧಿ ಮುಕ್ತಾಯಗೊಂಡ ವ್ಯವಸ್ಥಾಪನ ಸಮಿತಿಗಳನ್ನು ಹೊಸದಾಗಿ ರಚಿಸಲು ಆಸಕ್ತ ಭಕ್ತರು/ಸಾರ್ವಜನಿಕರಿಂದ ಶೀಘ್ರ ಅರ್ಜಿ ಆಹ್ವಾನಿಸಲಾಗುವುದು ಎಂದು ಹೇಳಿದರು.

ವೇದ, ಆಗಮ ಶಾಲೆಗಳ ಆರಂಭ
ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಸಿ ದರ್ಜೆಯ ಅರ್ಚಕರಿಗೆ ವೇದ ಮತ್ತು ಆಗಮ ಶಾಸ್ತ್ರಗಳ ವಿದ್ಯಾಭ್ಯಾಸವನ್ನು ಇಲಾಖೆಯ ವತಿಯಿಂದ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಶ್ರೀಮಂತ ದೇವಾಲಯಗಳ ವತಿಯಿಂದ ಸಂಸ್ಕೃತ ವೇದ ಮತ್ತು ಆಗಮ ಶಾಲೆ ತೆರೆಯಲು, ಶಿಕ್ಷಣದ 5 ವರ್ಷದ ಕಾಲಾವಧಿಯನ್ನು ಮಿತಗೊಳಿಸುವ ಮತ್ತು ಒಂದು ವರ್ಷದ ವಿಶೇಷ ಕೋರ್ಸ್‌ ಆಯೋಜಿಸುವ ಬಗ್ಗೆ ಪರಿಶೀಲಿಸಲು 5 ಮಂದಿ ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ಸಚಿವರು ವಿವರಿಸಿದರು.

ದೇವಾಲಯಗಳ ದತ್ತು
ಕುಕ್ಕೆ ದೇವಾಲಯದ ವತಿಯಿಂದ ಶಿರಾಡಿ ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರೀ ದೇವಾಲಯ, ಬೆಳ್ತಂಗಡಿ ತಾಲೂಕಿನ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಾಲಯಗಳನ್ನು 5 ವರ್ಷಗಳ ಅವಧಿಗೆ ದತ್ತು ತೆಗೆದುಕೊಂಡು ಪ್ರತಿ ದೇವಾಲಯಕ್ಕೆ ಗರಿಷ್ಠ 50 ಲಕ್ಷ ರೂ. ಮಿತಿಗೆ ಒಳಪಟ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಅದು ಸಿಎಂ ಪರಮಾಧಿಕಾರ. ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರು ಎಂದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ ವಿಚಾರದಲ್ಲಿ ಆರೋಪಿಯ ಜಾತಿ, ಧರ್ಮ, ವರ್ಗದ ಪ್ರಶ್ನೆ ಬರುವುದಿಲ್ಲ. ಸಮಾಜಘಾತಕರ ವಿರುದ್ಧ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.

Advertisement

ಮದ್ಯದಂಗಡಿಗಳಿಗೆ ದೇವರ ಹೆಸರು ಇಡದಂತೆ ಮನವಿ
ಬಾರ್‌, ಮದ್ಯದಂಗಡಿಗಳಿಗೆ ದೇವರ ಹೆಸರನ್ನು ಇಡುವುದಕ್ಕೆ ಅವಕಾಶ ನೀಡಬಾರ ದೆಂದು ಕೆಲವರು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಅಬಕಾರಿ-ಕಾನೂನು ಇಲಾಖೆಗೆ ಸೂಚಿಸಿದ್ದೆ. ಅದು ಪರಿಶೀಲನೆಯಲ್ಲಿದೆ. ಬಾರ್‌, ಮದ್ಯದಂಗಡಿಗಳಿಗೆ ದೇವರ ಹೆಸರುಗಳನ್ನು ಇಡಬಾರದು ಹಾಗೂ ಈಗಾಗಲೇ ಇದ್ದರೆ ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next