ಗಂಗಾವತಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ಡ್ಯಾಂ ಗೆ ಹೆಚ್ಚುವರಿ ನೀರು ಹರಿದು ಬರುತ್ತಿದ್ದು ನದಿಗೆ ನೀರನ್ನ ಬಿಡಲಾಗುತ್ತಿದೆ. ಇದರಿಂದಾಗಿ ತಾಲ್ಲೂಕಿನ ಆನೆಗೊಂದಿಯ ಐತಿಹಾಸಿಕ ನವವೃಂದಾವನ ಗಡ್ಡಿ, ಶ್ರೀಕೃಷ್ಣದೇವರಾಯರ ಸಮಾಧಿ ಎಂದು ಹೇಳಲಾಗುವ 60 ಕಾಲಿನ ಮಂಟಪ, ಚಿಂತಾಮಣಿ, ಋಷಿಮುಖ ಪರ್ವತ ಪ್ರದೇಶ, ವಿರುಪಾಪುರಗಡ್ಡಿ ಸಂಪೂರ್ಣ ಜಲಾವೃತವಾಗಿವೆ.
ಹನುಮನಹಳ್ಳಿ ಪಂಪಾ ಸರೋವರ ಹಾಗೂ ಪುರಾತನ ದೇವಘಾಟ್ ಅಮೃತೇಶ್ವರ ದೇಗುಲದ ಹತ್ತಿರ ನದಿಯ ನೀರು ಹರಿಯುತ್ತಿದೆ. ಕಡೆಬಾಗಿಲು ಮತ್ತು ಕಂಪ್ಲಿ ಸೇತುವೆಗಳು ಮುಳುಗಲು ಮೂರರಿಂದ 4 ಅಡಿ ನೀರು ಮಾತ್ರ ಬಾಕಿಯಿದೆ. ಈಗಾಗಲೇ ತಾಲ್ಲೂಕು ಮತ್ತು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ನದಿಪಾತ್ರದ ಗ್ರಾಮಗಳಲ್ಲಿ ಡಂಗುರ ಹಾಕಿ ನದಿಗೆ ಹೆಚ್ಚುವರಿ ನೀರು ಬಿಡುವ ಕುರಿತು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ರವಿವಾರ ಸಂಜೆಯಿಂದ ನದಿಗೆ ಡ್ಯಾಂನಿಂದ ಹೆಚ್ಚುವರಿ ನೀರು ಬಿಡಲಾಗುತ್ತಿದ್ದು ಸೋಮವಾರ ಬೆಳಿಗ್ಗೆ ಒಂದು ಲಕ್ಷ ಕ್ಯೂಸೆಕ್ ಗೂ ಅಧಿಕ ನೀರನ್ನು ನದಿಗೆ ಹರಿಸುವ ಕುರಿತು ಡ್ಯಾಮ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ರಾಜ್ಯಗಳಿಗೆ ಈಗಾಗಲೇ 45.37 ಕೋಟಿಯಷ್ಟು ಲಸಿಕೆ ಡೋಸ್ ಗಳ ಪೂರೈಕೆ : ಕೇಂದ್ರ
ನದಿ ಪಾತ್ರದಲ್ಲಿದ್ದ ರೈತರ ಪಂಪ್ ಸೆಟ್ ಗಳು ಸಂಪೂರ್ಣ ಮುಳುಗಡೆಯಾಗಿದ್ದು ಕೆಲವು ಮೋಟರ್ ಗಳು ನೀರಿಗೆ ಕೊಚ್ಚಿಕೊಂಡು ಹೋಗಿವೆ ಎಂದು ಹೇಳಲಾಗುತ್ತಿದೆ. ನದಿಯಲ್ಲಿ ನೀರು ಹೆಚ್ಚಳವಾಗಿದ್ದರಿಂದ ಮೊಸಳೆ, ಹಾವು, ಆಮೆ ಇತರ ಪ್ರಾಣಿಗಳು ನದಿ ದಂಡೆಗೆ ಬರುತ್ತಿವೆ.
ಕಂಪ್ಲಿ ಮತ್ತು ಕಡೆಬಾಗಿಲು ಸೇತುವೆ ಬಳಿ ಗ್ರಾಮೀಣ ಪೊಲೀಸ್ ಠಾಣೆಯ ವತಿಯಿಂದ ಹೆಚ್ಚುವರಿ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು ನದಿ ಪಕ್ಕದಲ್ಲಿ ಮೊಬೈಲ್ ನಿಂದ ಸೆಲ್ಫಿ ತೆಗೆದು ಕೊಳ್ಳುವ ಸಂದರ್ಭದಲ್ಲಿ ನದಿಗೆ ಜನರು ಬೀಳುವ ಸಾಧ್ಯತೆ ಇರುವುದರಿಂದ ಮೊಬೈಲ್ ಮೂಲಕ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ನೀಡುತ್ತಿಲ್ಲ.
ನಿಷೇಧ:ತುಂಗಭದ್ರಾ ನದಿಯಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರಿಂದ ತಾಲ್ಲೂಕಿನ ಆನೆಗೊಂದಿ ನವವೃಂದಾವನ ಗಡ್ಡಿ ಋಷಿಮುಖ ಪರ್ವತ ಪ್ರದೇಶ ವಿರುಪಾಪುರಗಡ್ಡಿ ಗಳಿಗೆ ಬೋಟ್ ಗಳಲ್ಲಿ ತೆರಳಲು ನಿಷೇಧ ಹೇರಲಾಗಿದೆ.