Advertisement

ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಬಿಡುಗಡೆ

03:40 PM Jul 27, 2022 | Team Udayavani |

ನಾರಾಯಣಪುರ: ಆಲಮಟ್ಟಿಯ ಕೆಬಿಜೆಎನ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಜರುಗಿದ ಕೃಷ್ಣಾ ಮೇಲದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಪ್ರಸ್ತುತ ಮುಂಗಾರು ಹಂಗಾಮಿನ ಬೆಳೆಗಳಿಗೆ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ ಮಂಗಳವಾರದಿಂದ ನೀರು ಹರಿಸಲು ಚಾಲನೆ ನೀಡಲಾಗಿದೆ.

Advertisement

ನೀರಾವರಿ ಸಲಹಾ ಸಮಿತಿ ಸಭೆ ಅಧ್ಯಕ್ಷ, ಸಚಿವ ಸಿ.ಸಿ ಪಾಟೀಲ್‌ ಅಧ್ಯಕ್ಷತೆಯಲ್ಲಿ ಹಾಗೂ ಕೃಷ್ಣಾ ಅಚ್ಚುಕಟ್ಟು ಭಾಗದ ಫಲಾನುಭವಿ ಜಿಲ್ಲೆಗಳ ಶಾಸಕರು, ಸಂಸದರು, ಜಿಲ್ಲಾಮಟ್ಟದ ಅಧಿಕಾರಿಗಳು, ನಿಗಮದ ಎಂಡಿ, ಆಲಮಟ್ಟಿ, ನಾರಾಯಣಪುರ ಅಣೆಕಟ್ಟುಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆ ನಿರ್ಣಯದಂತೆ ಎಡದಂಡೆ ಮುಖ್ಯ ಕಾಲುವೆಗೆ 300 ಕ್ಯೂಸೆಕ್‌ ನಷ್ಟು ನೀರು ಹರಿಸಲು ಚಾಲನೆ ನೀಡಲಾಗಿದ್ದು, ರಾತ್ರಿ ವೇಳೆಗೆ ನೀರು ಹರಿಸುವ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸುವ ಮೂಲಕ ಸದ್ಯ 1500 ಕ್ಯೂಸೆಕ್‌ ನಷ್ಟು ನೀರನ್ನು ಮುಖ್ಯ ಕಾಲುವೆಗೆ ಹರಿಸಲಾಗುತ್ತಿದೆ. ಉತ್ತಮ ಮಳೆಯಿಂದಾಗಿ ಜಲಾಶಯಗಳಿಗೆ ಒಳಹರಿವು ನಿರಂತರ ಇದ್ದರೆ ಕಾಲುವೆಗೆ ನಿರಂತರವಾಗಿ ನೀರು ಹರಿಸಲಾಗುತ್ತದೆ. ಒಂದೊಮ್ಮೆ ಜಲಾಶಯಗಳಿಗೆ ಒಳಹರಿವು ಸ್ಥಗಿತಗೊಂಡ ಸಂದರ್ಭದಲ್ಲಿ ಮತ್ತೊಮ್ಮೆ ಅಧಿಕಾರಿಗಳ ಸಭೆ ನಡೆಸಿ ವಾರಾಬಂದಿ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಡ್ಯಾಮ್‌ ಡಿವಿಜನ್‌ ಪ್ರಭಾರ ಕಾರ್ಯನಿರ್ವಾಹಕ ಇಂಜಿನಿಯರ್‌ ಪ್ರಕಾಶ ಎಂ. ಉದಯವಾಣಿಗೆ ತಿಳಿಸಿದರು.

ಎಲ್ಲ ಕಡೆಗಳಲ್ಲಿ ಮಳೆಯಾಗುತಿದೆ ಹಾಗೂ ಕಾಲುವೆ ಭಾಗದ ಅಧಿಕಾರಿಗಳ ಬೇಡಿಕೆಯಂತೆ ಮುಖ್ಯ ಕಾಲುವೆಗೆ ನೀರು ಹರಿಸುವುದನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದರು.

ಹೆಚ್ಚುವರಿ ನೀರು ನದಿಗೆ ಬಿಡುಗಡೆ: ರವಿವಾರದಂದು ಬಸವಸಾಗರದಿಂದ ಕೃಷ್ಣಾ ನದಿಗೆ ನೀರು ಹರಿಸುವುದನ್ನು ಸಂಪೂರ್ಣ ಸ್ಥಗಿತಗೊಳಿಸಿ ಜಲಾಶಯದ ನೀರಿನ ಸಂಗ್ರಹ ಮಟ್ಟ ಹೆಚ್ಚಿಸಿಕೊಳ್ಳಲಾಗಿತ್ತು. ಮಂಗಳವಾರ ರಾತ್ರಿ ವೇಳೆಗೆ ಜಲಾಶಯದ ಗರಿಷ್ಠ ಮಟ್ಟಕ್ಕೂ ಮೀರಿ ಬರುತ್ತಿರುವ ಹೆಚ್ಚುವರಿ ಅಂದಾಜು 6000 ಕ್ಯೂಸೆಕ್‌ ನಷ್ಟು ನೀರನ್ನು ಬಸವಸಾಗರದ ಎಂಪಿಸಿಎಲ್‌ ಜಲವಿದ್ಯುತ್‌ ಸ್ಥಾವರದ ಮೂಲಕ ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಸದ್ಯ ಬಸವಸಾಗರಕ್ಕೆ 7500 ಕ್ಯೂಸೆಕ್‌ ನೀರಿನ ಒಳಹರಿವು ಇದೆ. ಜಲಾಶಯದ ಗರಿಷ್ಠ ಮಟ್ಟದಲ್ಲಿ 491.62 ಮೀಟರ್‌ ನೀರು ಇದ್ದು, 30.43 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಒಳಹರಿವು 7500 ಕ್ಯೂಸೆಕ್‌, ಹೊರಹರಿವು ನದಿಗೆ 6000 ಕ್ಯೂಸೆಕ್‌ ಹಾಗೂ ನೀರಾವರಿ ಕಾಲುವೆಗೆ 1500 ಕ್ಯೂಸೆಕ್‌ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next