ಹೆಮ್ಮಾಡಿ : ಹೆದ್ದಾರಿಗೆ ಹೊಂದಿಕೊಂಡಿರುವ ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಥವಾ ‘ಜಲಧಾರೆ’ ಯೋಜನೆ ಇಲ್ಲಿ ಅನುಷ್ಠಾನಗೊಳಿಸಿದರೆ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದೆ.
ಇಲ್ಲಿನ ಹೆಚ್ಚಿನ ಎಲ್ಲ ಮನೆಗಳಲ್ಲಿಯೂ ಬಾವಿಯಿದೆ. ಆದರೆ ಉಪ್ಪು ನೀರಿನ ಪ್ರಭಾವದಿಂದ ಬಾವಿ ನೀರು ಕುಡಿಯಲು ಯೋಗ್ಯವಿಲ್ಲ. ಕೆಲವು ಬಾವಿಗಳು ಈಗಾಗಲೇ ಬತ್ತಿ ಹೋಗಿವೆೆ.
ಪ್ರತಿ ವರ್ಷ ಫೆಬ್ರವರಿ – ಮಾರ್ಚ್ ಆರಂಭವಾಗುತ್ತಿದ್ದಂತೆ ಗ್ರಾಮದಲ್ಲಿ ನೀರಿನ ಸಮಸ್ಯೆ ಉದ್ಭವವಾಗುತ್ತದೆ. ಕನ್ನಡಕುದ್ರು, ಜಾಲಾಡಿ, ಕಟ್ಟು, ಬುಗುರಿಕಡು ಭಾಗಗಳಲ್ಲಿ ಸಮಸ್ಯೆ ತೀವ್ರವಾಗಿದೆ. ಮಳೆಗಾಲ ಆರಂಭವಾಗುವಲ್ಲಿಯವರೆಗೂ ಸಮಸ್ಯೆಗೆ ಪರಿಹಾರ ಮಾತ್ರ ಮರೀಚಿಕೆ.
ಹಿಂದೆ ಹೆಮ್ಮಾಡಿ, ಕಟ್ಬೆಲ್ತೂರು ಮತ್ತು ದೇವಲ್ಕುಂದಗಳು ಒಂದೇ ವ್ಯಾಪ್ತಿಯಲ್ಲಿದ್ದಾಗ ಒಟ್ಟು 3 ಕೊಳವೆ ಬಾವಿಗಳಿಂದ ಮೂರು ಗ್ರಾಮಗಳ ಜನರಿಗೂ ನೀರು ಪೂರೈಕೆಯಾಗುತ್ತಿತ್ತು. ಆದರೆ ಈಗ 2 ಕೊಳವೆ ಬಾವಿಗಳು ಕಟ್ ಬೆಲ್ತೂರು ಪಂ. ವ್ಯಾಪ್ತಿಯಲ್ಲಿ ಬರುವುದರಿಂದ ಹೆಮ್ಮಾಡಿಗೆ ಅವುಗಳ ಪ್ರಯೋಜನ ಸಿಗುತ್ತಿಲ್ಲ.
ಶಾಶ್ವತ ಪರಿಹಾರ ಅಗತ್ಯ
ಉಪ್ಪು ನೀರಿನ ಸಮಸ್ಯೆ ಗಂಭೀರವಾಗಿರುವುದರಿಂದ ಇಲ್ಲಿಗೆ ಶಾಶ್ವತ ಪರಿಹಾರ ಅಗತ್ಯವಾಗಿ ಬೇಕಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಹೆಮ್ಮಾಡಿಯನ್ನು ಸೇರಿಸಲಾಗಿತ್ತು. ಅನಂತರ ಇದರಿಂದ ಕೈ ಬಿಡಲಾಗಿದೆ.
ಸದ್ಯ ಜಲಧಾರೆ ಎಂಬ ಹೊಸ ಯೋಜನೆ ಆರಂಭಿಸಲಾಗಿದ್ದು, ಇದರಿಂದಲಾದರೂ ಇಲ್ಲಿನ ಜನರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿ ಎನ್ನುವುದು ಗ್ರಾಮಸ್ಥರ ಆಶಯ.
– ಪ್ರಶಾಂತ್ ಪಾದೆ