ಬಿಸಿಲಿನ ಪ್ರಮಾಣ ಮಿತಿ ಮೀರಿದ್ದು ನದಿ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬಾವಿಗಳಲ್ಲಿಯೂ ನೀರಿನ ಒರತೆ ಕಮ್ಮಿಯಾಗಿ ಆತಂಕ ಸೃಷ್ಟಿಯಾಗಿದೆ. ಇದರಿಂದಾಗಿ ತಾಲೂಕಿನ ಜೀವನದಿ ಶಾಂಭವಿ ತಟದಲ್ಲಿ ಹಾಹಾಕಾರ ಎದ್ದಿದೆ.
Advertisement
ಪಂಪ್ ಮಾಲಕರಿಗೆ ಸೂಚನೆನದಿ ಬದಿಯ ಬಿಲ್ ರಹಿತ ಕೃಷಿ ಪಂಪ್ ಸೆಟ್‌ಗಳು ದಿನವಿಡೀ ಚಾಲೂ ಸ್ಥಿತಿಯಲ್ಲಿದ್ದು ಅಗತ್ಯಕ್ಕಿಂತ ಹೆಚ್ಚು ನೀರು ವಿನಿಯೋಗವಾಗುತ್ತಿದೆ ಎಂದು ಕೆಲ ಕೃಷಿಕರು ಆರೋಪಿಸುತ್ತಿದ್ದಾರೆ. ಹೀಗಾಗಿ ಪಂಪ್ ಸೆಟ್ ಮಾಲಕರು ನೀರಿನ ಬವಣೆಯನ್ನು ಅರಿತು ಒಂದಿಷ್ಟು ಯೋಚಿಸಿ ನೀರನ್ನು ಬಳಸುವಂತೆಯೂ ನೀರಿನ ಸಮಸ್ಯೆ ಎದುರಿಸುತ್ತಿರುವ ಜನರು ವಿನಂತಿಸಿದ್ದಾರೆ.
ಈಗಾಗಲೇ ಶಾಂಭವಿ ನದಿಗೆ ಬೋಳ , ಪಾಲಿಂಗೇರಿ, ಸಚ್ಚೇರಿಪೇಟೆ, ಸಂಕಲಕರಿಯದಲ್ಲಿ ಅಲ್ಲಲ್ಲಿ ಕಿಂಡಿ ಆಣೆಕಟ್ಟುಗಳನ್ನು ರಚಿಸಲಾಗಿದ್ದು ಕೆಲವೊಂದು ಅಣೆಕಟ್ಟುಗಳು ನಿರ್ವಹಣೆಯ ಕೊರತೆಯಿಂದ ನೇಪಥ್ಯಕ್ಕೆ ಸರಿದಿವೆ. ಇನ್ನು ನಿರ್ವಹಣೆ ಕಂಡ ಅಣೆಕಟ್ಟುಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಸಚ್ಚೇರಿಪೇಟೆಯ ನಲ್ಲೆಗುತ್ತಿ ಪರಿಸರದಲ್ಲಿರುವ ಅಣೆಕಟ್ಟು ನಿರ್ಮಾಣ ಹಂತದಲ್ಲಿದ್ದು ಇದರ ಕಾಮಗಾರಿಯೂ ಅರ್ಧಕ್ಕೆ ಮೊಟಕುಗೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಳೆಯ ಅಣೆಕಟ್ಟಿನಲ್ಲಿ ನೀರು ಶೇಖರಣೆ ಮಾಡಲಾಗಿದ್ದು ನೀರಿನ ಪ್ರಮಾಣ ಸಂಪೂರ್ಣ ನೆಲಮಟ್ಟವನ್ನು ಕಂಡಿದೆ.
Related Articles
ಸಂಕಲಕರಿಯದಲ್ಲಿ ಸಾಮಾಜಿಕ ಕಳಕಳಿಯ ಯುವಕ ಸುಧಾಕರ ಸಾಲ್ಯಾನ್ ಎಂಬವರು ಏಕಾಂಗಿಯಾಗಿ ಹೋರಾಟ ನಡೆಸಿ ಊರಿನ ಅಕ್ಕಪಕ್ಕದ ಕೃಷಿಕರು ಹಾಗೂ ನೀರಾವರಿ ಇಲಾಖೆಯ ನೆರವಿನಿಂದ ಅಣೆಕಟ್ಟು ನಿರ್ವಹಣೆ ನಡೆಸಿ ಸುಮಾರು 20 ಕಿ.ಮೀ.ವ್ಯಾಪ್ತಿಯವರೆಗೂ ನದಿ ನೀರು ನಿಲ್ಲುವಂತೆ ಮಾಡಿ ಕೃಷಿಕರಿಗೆ ಆಸರೆಯಾಗಿದ್ದರು. ಆದರೆ ಈಗ ಸಂಕಲಕರಿಯದಲ್ಲೂ ನೀರಿನ ಮಟ್ಟ ಸಂಪೂರ್ಣ ಕುಸಿದಿದೆ. ಕೆಲವೊಂದು ಕಡೆಗಳಲ್ಲಿ ಶಾಂಭವಿ ಸಂಪೂರ್ಣ ಬತ್ತಿ ಹೋಗಿದೆ.
Advertisement
ಜಲ ಕ್ಷಾಮದ ಸೂಚನೆಕೃಷಿ ಪ್ರಧಾನವಾದ ಬೋಳ, ಪೊಸ್ರಾಲು, ಸಂಕಲಕರಿಯ ಗ್ರಾಮಗಳಿಗೆ ಶಾಂಭವಿ ನದಿ ನೀರು ಹೆಚ್ಚು ಅನಿವಾರ್ಯವಾಗಿದ್ದು ನೀರು ಬತ್ತಿದ್ದರಿಂದ ಕೃಷಿಕರು ಕಂಗಾಲಾಗಿದ್ದಾರೆ. ಅಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಹೀಗಾಗಿ ನೀರಿನ ಬಳಕೆ ಹಾಗೂ ನೀರಿನ ಬಗ್ಗೆ ಗ್ರಾಮಸ್ಥರು ಜಾಗಗೊಳ್ಳಬೇಕಾಗಿದ್ದು, ಜಲಕ್ಷಾಮ ತಲೆದೋರುವ ಮುನ್ನವೇ ಪರ್ಯಾಯ ಕ್ರಮಗಳನ್ನು ಕೈಗೊಂಡರೆ ಒಳಿತು. ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಯ ಕುರಿತು ಸಂಬಂಧಿಸಿದ ಅಧಿಕಾರಿಗಳು ಲಕ್ಷ್ಯ ವಹಿಸಿದರೆ ಸಮಸ್ಯೆ ಕೊಂಚ ಮಟ್ಟಿಗೆ ಸರಿಹೋಗಬಹುದು ಎನ್ನುವುದು ಬಹುತೇಕ ಕೃಷಿಕರ ಅಭಿಪ್ರಾಯ. ಮಿತ ಬಳಕೆ ಮಾಡಬೇಕು
ಶಾಂಭವಿ ನದಿಯ ಎಲ್ಲಾ ಕಿಂಡಿ ಅಣೆಕಟ್ಟು ಸಹಿತ ದೊಡ್ಡ ಅಣೆಕಟ್ಟುಗಳ ನಿರ್ವಹಣೆಗಾಗಿ ಜಪ್ರತಿನಿಧಿಗಳು, ಇಲಾಖೆ ಹಾಗೂ ಗ್ರಾಮಸ್ಥರು ಸಹಕರಿಸಬೇಕು. ಈ ಮೂಲಕ ನೀರಿನ ಸಂಗ್ರಹಣೆ ಸಾಧ್ಯ, ನೀರನ ಮಿತ ಬಳಕೆಯ ಬಗ್ಗೆಯೂ ಯೋಚಿಸಬೇಕಾಗಿದೆ. ಇಲ್ಲದಿದ್ದಲ್ಲಿ ಮಳೆಯೇ ಆಧಾರ.
ಸುಧಾಕರ ಸಾಲ್ಯಾನ್ ಸಂಕಲಕರಿಯ, ಕೃಷಿಕ