Advertisement

ಪಾಂಡವಪುರ ತಾಲೂಕಲ್ಲಿ ಅಂತರ್ಜಲ ಕುಸಿತ ! ಕೆಲ ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ

08:42 PM Apr 09, 2021 | Team Udayavani |

ಪಾಂಡವಪುರ: ತಾಲೂಕಿನಲ್ಲಿ ಅಂತರ್ಜಲ ಕುಸಿತದಿಂದ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಖಾಸಗಿ ಕೊಳವೆ ಬಾವಿ ಹಾಗೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

Advertisement

ನೀರಿನ ವ್ಯವಸ್ಥೆ ಸುಧಾರಣೆಯಲ್ಲಿದೆ: ಕೆಆರ್‌ಎಸ್‌ ಜಲಾಶಯದಿಂದ ಪಾಂಡವಪುರ ತಾಲೂಕಿನ ಕೆಲ ಹಳ್ಳಿಗಳ ಮಾರ್ಗದಲ್ಲಿ ವಿಶ್ವೇಶ್ವರಯ್ಯ ನಾಲೆ ಮೂಲಕ ಕಾವೇರಿ ನೀರು ಹರಿಯುತ್ತಿದೆ. ವಿಶ್ವೇಶ್ವರಯ್ಯ ನಾಲೆ ಮಾರ್ಗದ ಗ್ರಾಮಗಳಿಗೆ ನೀರಿನ ವ್ಯವಸ್ಥೆ ಸುಧಾರಣೆಯಲ್ಲಿದೆ. ಫಲವತ್ತಾದ ಭೂಮಿಯಾಗಿ ಪರಿವರ್ತನೆಗೊಂಡಿದೆ. ಆದರೆ, ವಿಶ್ವೇಶ್ವರಯ್ಯ ನಾಲೆ ಇಲ್ಲದ ತಾಲೂಕಿನ ಅನೇಕ ಗ್ರಾಪಂ ವ್ಯಾಪ್ತಿಗೆ ಸೇರಿದ ಹಳ್ಳಿಗಳಲ್ಲಿ ನೀರಿ ಗಾಗಿ ಬವಣೆ ಹೆಚ್ಚಾಗಿ ನೀರಿಗಾಗಿ ಹಾಹಾಕಾರ ಉಂಟಾ ಗುತ್ತಿದೆ. ಕುಡಿಯುವ ನೀರು ಸೇರಿದಂತೆ ದಿನ ಬಳ ಕೆಯ ನೀರಿಗಾಗಿ ಪರದಾಡುವಂಥ ಸ್ಥಿತಿ ನಿರ್ಮಾಣಗೊಂಡಿದೆ.

ತಾಲೂಕಿನ ಮೇಲುಕೋಟೆ ಹೋಬ ಳಿಯ ಬಳಘಟ್ಟ ಗ್ರಾಮ ಪಂಚಾಯ್ತಿಗೆ ಸೇರಿದ ಚಲ್ಲರಹಳ್ಳಿ ಕೊಪ್ಪಲು, ಬಿ.ಕೊಡಗಹಳ್ಳಿ, ಕನಗೋನ ಹಳ್ಳಿ, ಎಂ.ಆರ್‌.ಕೊಪ್ಪಲು, ತಾಳೆಕೆರೆ, ಸಂಗಾಪುರ ಗ್ರಾಮಗಳಲ್ಲಿ ಇಂದಿಗೂ ನೀರಿಗಾಗಿ ದಿನನಿತ್ಯ ಪರದಾಡುತ್ತಿದ್ದಾರೆ. ಟ್ಯಾಂಕರ್‌ ಮೂಲಕ ಸರಬರಾಜು: ಕೆಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೊಲದಲ್ಲಿರುವ ಖಾಸಗಿ ಕೊಳವೆ ಬಾವಿಯನ್ನು ಪ್ರತಿ ತಿಂಗಳಿಗೆ 16 ರಿಂದ 19 ಸಾವಿರ ರೂ. ಬಾಡಿಗೆ ಪಡೆದುಕೊಂಡು ಸಮೀಪದ ಸಾವಿರ ಜನಸಂಖ್ಯೆಯುಳ್ಳ ಗ್ರಾಮಗಳಿಗೆ ಜಿಪಿಎಸ್‌ ಅಳವಡಿಸಿರುವ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಉರಿಯುವ ಬಿಸಿಲು ಹೆಚ್ಚಾಗಿರುವುದರಿಂದ ಕೊಳವೆಬಾವಿ ನೀರಿದ್ದರೂ ಅನೇಕ ಗ್ರಾಮಗಳಲ್ಲಿ ಇಲ್ಲಿಯವರೆಗೆ ನೀರಿನ ಬವಣೆ ಮಾತ್ರ ನೀಗಿಲ್ಲ. ಅನೇಕ ಗ್ರಾಮಗಳಲ್ಲಿ ಕೃಷಿಗಾಗಿ ಕೊಳವೆಬಾವಿ ಕೊರೆಸಿದರೆ 500 ಅಡಿಯಿಂದ ಸಾವಿರ ಅಡಿಯಷ್ಟು ಆಳದಲ್ಲೂ ನೀರು ಸಿಗುತ್ತಿಲ್ಲ. ಕೊಳವೆ ಬಾವಿ ವಿಫಲವಾಗಿ ಆರ್ಥಿಕ ನಷ್ಟಕ್ಕೊಳಗಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿವೆ.

ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಸಂಪೂರ್ಣ ಕುಸಿದು ಹೋಗಿದೆ. ಅನೇಕ ಕೊಳವೆ ಬಾವಿಯಲ್ಲಿ ನೀರಿಲ್ಲದೆ ಮುಚ್ಚಲಾಗಿದೆ. ಅಂತರ್ಜಲ ಪಾತಾಳ ಸೇರಿದ ಹಿನ್ನೆಲೆಯಲ್ಲಿ ಕೆಲವು ಕೊಳವೆ ಬಾವಿಗಳಲ್ಲಿ ಕೆಲ ತಿಂಗಳಲ್ಲೇ ನೀರು ಬತ್ತಿ ಹೋಗಿದೆ. ಅಂತರ್ಜಲ ಕುಸಿತ: ತಾಲೂಕಿನ ಅನೇಕ ಹಳ್ಳಿಗಳಲ್ಲಿ ಕೃಷಿ ಕೊಳವೆ ಬಾವಿಯಲ್ಲಿರುವ ಅಲ್ಪ ಸ್ವಲ್ಪ ನೀರನ್ನು ರೈತರು ಜನರಿಗೆ ಪೂರೈಕೆ ಮಾಡುತ್ತಿದ್ದಾರೆ. ಆದರೆ ವಿದ್ಯುತ್‌ ಅಭಾವದಿಂದ ನೀರಿಗಾಗಿ ಜನರು ಪರದಾಡುವುದು ತಪ್ಪುತ್ತಿಲ್ಲ. ಸಾಕಷ್ಟು ಪಂಪ್‌ಸೆಟ್‌ ಕೊಳವೆಬಾವಿಗಳೂ ಸಹ ಒಣಗಿ ಹೋಗಿವೆ.

Advertisement

ಜಲ ಇರುವ ಕಡೆಗಳಲ್ಲೂ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಹೀಗಾಗಿ ಸಮಸ್ಯೆ ಜಟಿಲವಾಗಿ ಹಳ್ಳಿಯ ಬದುಕಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಮಳೆಯ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ಅನೇಕ ಗ್ರಾಪಂ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿದೆ. ನೀರಾವರಿ ಜಲಾನಯನ ಪ್ರದೇಶ ದಲ್ಲಿ ಮಾತ್ರ ಕೃಷಿ ಚಟುವಟಿಕೆ ಉತ್ತಮವಾಗಿದೆ. ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದಿಂದ ತಾಲೂಕಿನಾದ್ಯಂತ ಹಗಲು 4 ಗಂಟೆ ಹಾಗೂ ರಾತ್ರಿ 3 ಗಂಟೆ ಕಾಲ ವಿದ್ಯುತ್‌ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಿದ್ಯುತ್‌ ತೊಂದರೆಯಿಂದ ನೀರಿನ ಪೂರೈಕೆಯಲ್ಲೂ ವ್ಯತ್ಯಾಸದಿಂದ ತೊಂದರೆ ಉಂಟಾಗುತ್ತಿದೆ.

ಕುಮಾರಸ್ವಾಮಿ, ಪಾಂಡವಪುರ

Advertisement

Udayavani is now on Telegram. Click here to join our channel and stay updated with the latest news.

Next