ಕೊಟ್ಟೂರು: ತಾಲೂಕಿನ ಕಾಳಾಪುರ ಗ್ರಾಮ ಗ್ರಾಮ ಪಂಚಾಯಿತಿ ಕ್ಷೇತ್ರವಾಗಿದ್ದರೂ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ 4 ಗ್ರಾಮಗಳ ಪೈಕಿ ಕಾಳಾಪುರ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ.
ಗ್ರಾಮ ಪಂಚಾಯತಿ ಕೇಂದ್ರವಾಗಿರುವ ಕಾಳಾಪುರ ಗ್ರಾಮದಲ್ಲಿ ಗ್ರಾಪಂಗೆ ಒಳಪಟ್ಟಿರುವ ಒಂದು ಬೋರ್‌ವೆಲ್ ಇದೆ. ಇದರಿಂದ ಗ್ರಾಮದ ಜನರಿಗೆ ಸಮರ್ಪಕವಾಗಿ ನೀರೋದಗಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ 500 ರಿಂದ 600 ಅಡಿಗಳಷ್ಟು ಬೋರ್ ಕೊರೆದರೂ ಸಹ ನೀರು ಬರುತ್ತಿಲ್ಲ. ಇಲ್ಲಿಯವರೆಗೆ ಸುಮಾರು ಒಟ್ಟು 4 ಬೋರ್ ಕೊರೆಯಿಸಲಾಗಿದೆ ಆದರೂ ಸಹ ಇಲ್ಲಿ ನೀರು ಸಿಕ್ಕಿಲ್ಲ.
ಗ್ರಾಮಸ್ಥರು ಪಂಚಾಯಿತಿಗೆ ಸಾಕಷ್ಟು ಬಾರಿ ಅಭಿವೃದ್ಧಿ ಅಧಿಕಾರಿ ಅವರಿಗೆ ದೂರು ನೀಡಿದರೂ ಸಹ ಪ್ರಯೋಜನವಾಗಿಲ್ಲ. ಕುಡಿಯಲು ನೀರು ಬಗ್ಗೆ ಕೇಳಿದರೆ ಅಸಡ್ಡೆ ಮಾತನ್ನು ಹೇಳಿ ಸುಮ್ಮನಾಗುತ್ತಾರೆ. ಇದರಿಂದ ಇವತ್ತಿಗೂ ಗ್ರಾಮದಲ್ಲಿ ಕುಡಿಯುವ ನೀರು ಕೊಡುವವರು ಯಾರು? ಇಷ್ಟೆಲ್ಲಾ ಮುಂದುವರೆದರೂ ಇನ್ನೂ ನಾವು ಕೊಡಗಳನ್ನು ತೆಗೆದುಕೊಂಡು ಹೋಗಿ 2 ಕಿ.ಮೀ ದೂರದಿಂದ ನೀರು ತರಬೇಕು. ನಮ್ಮ ಬವಣೆಯನ್ನು ತಪ್ಪಿಸುವವರು ಯಾರು? ಎಂದು ಜನರು ಅಳಲು ತೋಡಿಕೊಂಡಿದ್ದಾರೆ.
“ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಕುಡಿಯಲು ನೀರು ಯೋಗ್ಯವಾಗಿಲ್ಲ. ಮನೆಯನ್ನು ನಡೆಸಲು ದುಡಿಯಬೇಕು. ಆದರೆ ಬದುಕಲು ಪರಿತಪಿಸುವಂತಾಗಿದೆ. ದುಡಿಯುವುದನ್ನು ಬಿಟ್ಟು ಬರೀ ನೀರಿಗಾಗಿ ಹೋರಾಡಬೇಕಾಗಿದೆ. ಇಡೀ ದಿನ ತಳ್ಳೊ ಬಂಡಿ ಹಿಡಿದು ಸಾಲು ನಿಂತು ನೀರು ತುಂಬಿಸುವುದೇ ನಮ್ಮ ಕಾಯಕವಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.
ಜಾನುವಾರುಗಳಿಗೆ ಬೇಸಿಗೆಯ ಕುಡಿಯಲು ನೀರಿಲ್ಲ. ಊರಿಂದ ಹೊರ ನಡೆದು ನೀರು ತಂದರೆ ಮಾತ್ರ ಜಾನುವಾರುಗಳಿಗೆ ನೀರು. ಗ್ರಾಮಕ್ಕೆ ಮೇಲಾಧಿಕಾರಿಗಳು ಭೇಟಿ ನೀಡಿ ಕುಡಿಯಲು ಜೀವ ಜಲ ನೀಡಬೇಕು ಎಂದು ಕಾಳಾಪುರದ ಜನತೆ ಆಗ್ರಹಿಸಿದ್ದಾರೆ.
ಎಂ. ರವಿಕುಮಾರ