Advertisement
ಕಳೆದೊಂದು ದಶಕದಿಂದ ಚಿಲಿ ದೇಶ ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ಅಲ್ಲಿ ಕುಡಿಯಲೂ ನೀರು ಸಿಗುತ್ತಿಲ್ಲ.
ಮಧ್ಯ ಚಿಲಿಯಲ್ಲಂತೂ ಪರಿಸ್ಥಿತಿ ಆತಂಕಕಾರಿಯಾಗಿದೆ. ಇಲ್ಲಿ ಸುಮಾರು 4 ಲಕ್ಷ ಕುಟುಂಬಗಳಿದ್ದು 15 ಲಕ್ಷ ಜನರಿದ್ದಾರೆ. ಇವರಲ್ಲಿ ಪ್ರತಿಯೊಬ್ಬರಿಗೂ 50 ಲೀ. ನೀರು ನಿತ್ಯವೂ ಬೇಕಾಗುತ್ತದೆ. ಅದಕ್ಕೆ ಸಂಪೂರ್ಣವಾಗಿ ಟ್ಯಾಂಕರ್ ನೀರನ್ನೇ ಅವಲಂಬಿಸಿದ್ದಾರೆ. ಆದರೆ ಇಲ್ಲಿ ಉಳ್ಳವರಿಗಷ್ಟೇ ನೀರು ಸಿಗುತ್ತದೆ. ಅದಕ್ಕೆ ಹೆಚ್ಚುವರಿ ಹಣ ತೆರಬೇಕು. ಇದರಿಂದ ಬಡವರಿಗೆ ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ ಎನ್ನುವುದು ಜನರ ಸಾಮಾನ್ಯ ಆರೋಪವಾಗಿದೆ. ಕೋವಿಡ್‌ನಿಂದ ಪಾರಾಗಲು ಆಗಾಗ್ಗೆ ಕೈ ತೊಳೆಯಬೇಕು ಎಂದು ಹೇಳುತ್ತಾರೆ. ಆದರೆ ಕೈ ತೊಳೆಯಲು ಬಿಡಿ, ಅಡುಗೆಗೆ ನೀರಿಲ್ಲದ ಸ್ಥಿತಿ ನಮ್ಮದು ಎನ್ನುತ್ತಾರೆ ಇಲ್ಲಿನ ಮಹಿಳೆಯೊಬ್ಬರು. ಇವರು ನದಿ ಬದಿಯಲ್ಲಿ ಮನೆ ಹೊಂದಿದ್ದರೂ ಆ ನದಿ ಬರಿದಾಗಿ ಎಷ್ಟೋ ಸಮಯವಾಯಿತಂತೆ. ಇನ್ನೊಂದು ಸಮಸ್ಯೆ ಎಂದರೆ ಇಲ್ಲಿ ನೀರಿಗಾಗಲಿ, ಕೋವಿಡ್ ಪರಿಸ್ಥಿತಿಗಾಗಲಿ ಮುನ್ನೆಚ್ಚರಿಕೆ ಎಂಬುದೇ ಇಲ್ಲ. ಪರೀಕ್ಷೆ ನಡೆಸುವ ಸಂಖ್ಯೆಯೂ ಅತಿ ಕಡಿಮೆ ಇದೆ. ಕೋವಿಡ್ ಭೀತಿ ಹುಟ್ಟಿಸಿದ್ದರೂ, ಆಡಳಿತ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಕ್ಕೆ ಹೋಗಿಲ್ಲ. ಅದೇನಿದ್ದರೂ ಕೋವಿಡ್‌ನ ಪರಿಸ್ಥಿತಿಗಿಂತಲೂ ನೀರಿಲ್ಲದ ಪರಿಸ್ಥಿತಿ ಹೆಚ್ಚು ಆತಂಕ ಹುಟ್ಟಿಸಿದೆ ಎನ್ನುತ್ತಾರೆ ಆ ಮಹಿಳೆ.
Related Articles
Advertisement
ನೀರಿನ ಟ್ಯಾಂಕರ್‌ಗಳು ಇಡೀ ದಿನ ನಿರಂತರ ಓಡಾಡುತ್ತಿದ್ದರೂ, ಇವುಗಳಿಂದ ಮನೆಗಳಲ್ಲಿನ ಡ್ರಮ್‌ಗಳನ್ನು ತುಂಬಿಸುವುದು ಸಾಧ್ಯವಾಗುತ್ತಿಲ್ಲ. ಕಾರಣ ನೀರಿನ ಬೇಡಿಕೆ ಅಷ್ಟೊಂದು ಇದೆ. ವಾಲ್ಪರೈಸೋ ನದಿ ಸಂಪೂರ್ಣ ಒಣಗಿ ಹೋಗಿದ್ದು ನೀರಿನ ಕುರುಹು ಇದರಲ್ಲಿ ಒಂಚೂರೂ ಇಲ್ಲದಂತಾಗಿದೆ ಎಂದು ನದೀ ತೀರದ ಜನರು ಹೇಳುತ್ತಾರೆ. ಮೊದಲು ಈ ನದಿಯಲ್ಲಿ ಮೀನುಗಾರಿಕೆಯನ್ನೂ ನಡೆಸುತ್ತಿದ್ದರಂತೆ. ಆದರೆ ಈಗ ಹನಿ ನೀರಿಲ್ಲದೆ ಇದು ಭಣಗುಡುತ್ತಿದೆ. ಇನ್ನು ಇಲ್ಲಿನ ಕಾಲುವೆಗಳು ಬರಿದಾಗಿವೆ. ಅವುಗಳಲ್ಲೂ ನೀರು ಕಂಡು ವರ್ಷಗಳಾದವರು ಎನ್ನುತ್ತಾರೆ ಸ್ಥಳೀಯರು.
ಜನರಲ್ಲಿ ಆಕ್ರೋಶ ಸರಕಾರ ನೀರಿನ ಬಗ್ಗೆಯೂ ಗಮನ ಹರಿಸಿಲ್ಲ, ಕೋವಿಡ್-19 ಬಗ್ಗೆಯಂತೂ ಮೊದಲೇ ಇಲ್ಲ ಎನ್ನುವ ಆಕ್ರೋಶ ಇಲ್ಲಿನವರದ್ದು. ಸರಕಾರ ಯಾವುದೇ ಮುಂಜಾಗ್ರತೆ ಕೈಗೊಂಡಿಲ್ಲ ಎನ್ನುತ್ತಾರೆ ಇಲ್ಲಿನವರು. ಕೈತೊಳೆಯಬೇಕೆಂದು ಹೇಳುತ್ತಾರೆ, ಆದರೆ ಸೋಪು ಇಟ್ಟುಕೊಂಡು ಏನು ಮಾಡುವುದು ನೀರೇ ಇಲ್ಲದಿದ್ದರೆ ಎಂದು ಇಲ್ಲಿನವರೊಬ್ಬರು ಸರಕಾರವನ್ನು ಪ್ರಶ್ನಿಸುತ್ತಾರೆ. ನೀರಿಲ್ಲದಿದ್ದರಿಂದ ಇಲ್ಲಿನವರಲ್ಲಿ ಆಕ್ರೋಶ ಇನ್ನಷ್ಟು ಹೆಚ್ಚಾಗಿದ್ದು, ಸರಕಾರ ಮೊದಲು ನೀರು ಕೊಡಲಿ ಇದರೊಂದಿಗೆ ಕೋವಿಡ್ ಬಗ್ಗೆಯೂ ಜಾಗ್ರತೆ ವಹಿಸಲಿ ಎನ್ನುತ್ತಾರೆ.