Advertisement

ಕುಂಟುತ್ತಾ ಸಾಗಿದೆ ನೀರು ತರುವ ಯೋಜನೆ

08:34 PM Mar 27, 2021 | Team Udayavani |

ಆಳಂದ: ಹಿಂದಿನ ರಾಜ್ಯ ಸರ್ಕಾರದಲ್ಲಿ ಅಫಜಲಪುರ ತಾಲೂಕಿನ ಭೀಮಾ ನದಿಯಿಂದ (ಭೋರಿ) ಆಳಂದ ತಾಲೂಕಿನ ಅಮರ್ಜಾ ಅಣೆಕಟ್ಟೆಗೆ ನೀರು ತರುವ ಯೋಜನೆ ಕಾಮಗಾರಿಗೆ ಚಾಲನೆ ದೊರೆತಿತ್ತು. ಈ ಕಾಮಗಾರಿ ಈಗ ಕುಂಟುತ್ತಾ ಸಾಗಿರುವುದು ತೀವ್ರ ಬೇಸರ ತರಿಸಿದೆ.

Advertisement

ಅಫಜಲಪುರ, ಆಳಂದ ತಾಲೂಕಿನ ಕೆರೆಗಳಿಗೆ, ಅಮರ್ಜಾ ಜಲಾಶಯಕ್ಕೆ ಬಳೂಂಡಗಿ ಭೋರಿ ನದಿಯಿಂದ ಒಂದು ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಈ ಯೋಜನೆ ರೂಪಿಸಲಾಗಿದೆ. ಬಳೂಂಡಗಿ ಜಾಕ್‌ವೆಲ್‌ ಹತ್ತಿರ ಜಲಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಇಲಾಖೆಯು ಮಳೆಗಾಲದಲ್ಲಿ ಭೀಮಾ ಬ್ಯಾರೇಜಿನಿಂದ ಕೆರೆಗಳಿಗೆ ನೀರು ತುಂಬಲು ಹಾಗೂ ತಾಲೂಕಿನ ಅಮರ್ಜಾ ಜಲಾಶಯಕ್ಕೆ ನೀರು ತುಂಬಿದರೆ ಆಳಂದ ಮತ್ತು ಕಡಗಂಚಿ ಹತ್ತಿರದ ಕೇಂದ್ರೀಯ ವಿಶ್ವ ವಿದ್ಯಾಲಯ ಇನ್ನಿತರ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಬೇಕೆಂಬ ಉದ್ದೇಶದಿಂದ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ ಯೋಜನೆಗೆ ಭೂಮಿ ಕೊಟ್ಟ ರೈತರಿಗೆ ಸರ್ಕಾರದ ಪರಿಹಾರದ ಹಣ ಇನ್ನೂ ಬಂದಿಲ್ಲ.

2018ರಲ್ಲಿ ಆರಂಭ:

ಈ ಯೋಜನೆಯಿಂದ ಎರಡೂ ತಾಲೂಕಿನ ಅನೇಕ ಗ್ರಾಮಗಳಿಗೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉಪಯೋಗವಾಗಲಿದೆ. ಜಮೀನುಗಳಿಗೆ ಅನುಕೂಲವಾಗಲಿದೆ. ಅಷ್ಟೇ ಅಲ್ಲದೇ ಕೆರೆ ತುಂಬುವ ಯೋಜನೆಗಾಗಿ ಸರ್ಕಾರದಿಂದ ಮಾರ್ಚ್‌ 2018ಕ್ಕೆ 450 ಕೋಟಿ ರೂ. ಗಳಲ್ಲಿ 339 ಕೋಟಿ ರೂ.ಗಳ ವೆಚ್ಚಕ್ಕೆ ಆಡಳಿತಾತ್ಮಕವಾಗಿ ಮಂಜೂರಾತಿ ಪಡೆಯಲಾಗಿತ್ತು. ಈ ಯೋಜನೆಯಿಂದ ಅಫಜಲಪುರದ ಹತ್ತು ಕೆರೆ, ತಾಲೂಕಿನ ಮೂರು ಕೆರೆ, ಅಮರ್ಜಾ ಜಲಾಶಯಕ್ಕೆ ನೀರು ತುಂಬಲು ಉದ್ದೇಶಿಸಲಾಗಿದೆ. ಈ ನೀರು ತುಂಬುವ ಯೋಜನೆಗೆ ಒಂದು ಟಿಎಂಸಿ ಅಡಿ ನೀರು ಬಳಸಿಕೊಳ್ಳಬೇಕಿತ್ತು. ಕೆರೆಗಳಿಗೆ 0.10 ಟಿಎಂಸಿ ಅಡಿ ಅಮರ್ಜಾ ಜಲಾಯಶಕ್ಕೆ, 0.90 ಟಿಎಂಸಿ ಅಡಿ ನೀರು ಬಳಕೆಯಾಗುತ್ತದೆ. 540 ಮೀಟರ್‌ ಇನ್‌ಟೆಕ್‌ ಉದ್ದದ ಕಾಲುವೆ ಇದಾಗಿದ್ದು 42.5 ಕೀಲೋ ಮೀಟರ್‌ ಹೊಂದಿದೆ. ಒಂದೆಡೆ ಭರದಿಂದ ಸಾಗಿರುವ ಪೈಪ್‌ ಅಳವಡಿಸುವ ಕಾಮಗಾರಿ, ಇನ್ನೊಂದೆಡೆ ಪರಿಹಾರಕ್ಕಾಗಿ ಪರಿತಪಿಸುತ್ತಿರುವ ರೈತರು. ಮತ್ತೂಂದೆಡೆ ಕಾಮಗಾರಿಯಿಂದ ಇರುವ ಜಮೀನಿನಲ್ಲಿ ಕೃಷಿ ಕೆಲಸವನ್ನೂ ಮಾಡದಂತ ಪರಿಸ್ಥಿತಿಯನ್ನು ಎರಡೂ ತಾಲೂಕಿನ ರೈತರು ಕಳೆದ ಮೂರು ವರ್ಷಗಳಿಂದ ಅನುಭವಿಸುತ್ತಿದ್ದಾರೆ.

ಈ ಯೋಜನೆ ಕಾಮಗಾರಿಗಾಗಿ ಪೈಪ್‌ಲೈನ್‌ ಅಳವಡಿಸಲು ಅಫಜಲಪುರ, ಬಳೂರ್ಗಿ, ಬಡದಾಳ್‌, ಅರ್ಜುಣಗಿ, ಆಳಂದ ತಾಲೂಕಿನ ಭೂಸನೂರು, ಮಾಡಿಯಾಳ್‌, ಕೋರಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ನೂರಾರು ರೈತರ ಜಮೀನುಗಳನ್ನು ಸ್ವಾ  ಧೀನಪಡಿಸಿಕೊಳ್ಳಲಾಗಿದೆ. ಆದಾಗ್ಯೂ, ನೂರಾರು ರೈತರಿಗೆ ಕೊಡಬೇಕಿದ್ದ ಜಮೀನಿನ ಪರಿಹಾರ ನೀಡದೇ ಅಧಿಕಾರಿಗಳು ಅನ್ನದಾತರ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ.

Advertisement

ರೈತರ ಜಮೀನುಗಳಲ್ಲಿ ರಸ್ತೆ ಮಾಡಿಕೊಂಡು ಬೃಹತ್‌ ಗಾತ್ರದ ಜೆಸಿಬಿ, ಟಿಪ್ಪರ್‌ ಬಳಸಿಕೊಂಡು ಕಾಮಗಾರಿ ನಡೆಯುತ್ತಿರುವುದರಿಂದ ಉಳಿದ ಜಮೀನಿನಲ್ಲಿಯೂ ರೈತರು ಕೃಷಿ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರು ವರ್ಷಗಳಿಂದ ನೂರಾರು ರೈತರು ಜಮೀನು ಪರಿಹಾರ, ಬೆಳೆ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆಯುತ್ತ ಹತ್ತಾರು ಬಾರಿ ಅ ಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಸ್ಪಂದನೆ ದೊರೆಯುತ್ತಿಲ್ಲ.

ಶೇ. 60 ಕಾಮಗಾರಿ: ಉಡುಪಿ ಮೂಲದ ಶಂಕರ್‌ ಎನ್ನುವವರು ಟೆಂಡರ್‌ ಪಡೆದು ಕಾಮಗಾರಿ ಮಾಡುತ್ತಿದ್ದಾರೆ. ಆದಾಗ್ಯೂ, ಒಂದೂವರೆ ವರ್ಷದಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಮೂರು ವರ್ಷ ಕಳೆಯುತ್ತಿದ್ದರೂ ಶೇ. 60ರಷ್ಟು ಮಾತ್ರ ಕಾಮಗಾರಿ ಪೂರ್ಣವಾಗಿದೆ. ಕಾಮಗಾರಿ ವಿಳಂಬ ಆಗುತ್ತಿರುವುದರಿಂದ ಸುತ್ತಲಿನ ರೈತರು ಧೂಳಿನಿಂದ ಅನೇಕ ಸಮಸ್ಯೆ ಎದುರಿಸುವಂತಾಗಿದೆ. ಹೊಲದಲ್ಲಿರುವ ಬೆಳೆಯೂ ಧೂಳಿನಿಂದ ನಾಶವಾಗುತ್ತಿದೆ. ಒಂದೆಡೆ ಕಾಮಗಾರಿ ಶೀಘ್ರ ಮುಗಿಯುತ್ತಿಲ್ಲ. ಮತ್ತೂಂದೆಡೆ ಸಿಗಬೇಕಾದ ಪರಿಹಾರ ಸಿಗದೇ ಅನ್ನದಾತರು ಪರದಾಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next