Advertisement

ಕೊನೆ ಭಾಗಕ್ಕೆ ತಲುಪದ ನೀರು

04:40 PM Aug 14, 2017 | |

ಯಾದಗಿರಿ: ಬೆಳೆ ಬೆಳೆಯಲು ಸಮರ್ಪಕ ಮಳೆ ಇಲ್ಲ. ಇನ್ನೊಂದೆಡೆ ನಾರಾಯಣಪುರ ಜಲಾಶಯದಿಂದ ಕಾಲುವೆಗೆ ಹರಿಯುವ
ನೀರು ಕೊನೆ ಭಾಗಕ್ಕೆ ತಲುಪದ ಹಿನ್ನೆಲೆಯಲ್ಲಿ ರೈತರು ಕಂಗಲಾಗಿದ್ದಾರೆ. ಬಸವಸಾಗರ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿದರೂ ಕೊನೆ ಭಾಗದ ರೈತರಿಗೆ ಸಮಪರ್ಕವಾಗಿ ನೀರು ದೊರೆಯದ ಪರಿಣಾಮ ಹಾಗೂ ನಿರ್ಧಿಷ್ಟ ಪ್ರಮಾಣದಲ್ಲಿ ಮಳೆಯಾಗದೆ ರೈತರು ಬೆಳೆದ ಬೆಳೆಗಳು ಕುಂಠಿತಗೊಂಡಿವೆ. ಜಿಲ್ಲೆಯ ಸುರಪುರ ಹಾಗೂ ಶಹಾಪುರ ತಾಲೂಕಿನ ಸುಮಾರು ಶೇ. 25ರಷ್ಟು
ಪ್ರದೇಶ ನೀರಾವರಿ ಸೌಲಭ್ಯದಿಂದ ವಂಚಿತಗೊಂಡಿದ್ದು, ಸುರಪುರ ತಾಲೂಕಿನ ಖಾನಾಪುರ, ಚಂದ್ರಾಪುರ, ಶೆಳ್ಳಗಿ, ಮುಷ್ಠಳ್ಳಿ,
ಚೌಡೇಶ್ವರಹಾಳ, ಕರ್ನಾಳ, ಕುಪ್ಪಗಲ್‌, ಶಹಾಪುರ ತಾಲೂಕಿನ ಬೊಮ್ಮನಹಳ್ಳಿ, ಹುನ ಗುಂಟಗಿ, ಅನವಾರ, ಐಕೂರ, ವಡಗೇರಾ ಸೇರಿದಂತೆ ಇತರೆ ಕೊನೆ ಭಾಗದ ಗ್ರಾಮಗಳಲ್ಲಿ ಹತ್ತಿ, ತೊಗರಿ, ಶೇಂಗಾ, ಸೂರ್ಯಪಾನ ಬೆಳೆಗಳನ್ನು ಬೆಳೆಯಲಾಗಿದೆ. ಆದರೆ ನೀರಿನ ಕೊರತೆಯಿಂದ ಬೆಳೆಗಳು ಒಣಗುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎರಡೂಮೂರು ವರ್ಷಗಳಿಂದ
ಮಳೆ ಇಲ್ಲದೆ ಬರಗಾಲ ಸೃಷ್ಟಿಯಾಗಿದ್ದು, ಕಾಲುವೆಗಳಿಗೆ ಹರಿಯುವ ನೀರು ನಮ್ಮ ಗ್ರಾಮಗಳಿಗೆ ತಲುಪುತ್ತಿಲ್ಲ. ಇದರಿಂದ ಬೆಳಗಳಿಗೆ ನೀರಿಲ್ಲದೆ ಒಣುತ್ತಿದ್ದು, ಈ ಭಾಗದ ರೈತರಿಗೆ ಸಾಕಷ್ಟು ಸಮಸ್ಯೆ ಆಗಿದೆ ಎಂದು ಬೊಮ್ಮನಹಳ್ಳಿ ಗ್ರಾಮದ ಹಣಮಂತರಾಯ ತಳಹಳ್ಳಿ ಅಳಲು ತೋಡಿಕೊಂಡಿದ್ದಾರೆ. ನಾರಾಯಣಪುರ ಜಲಾಶಯದಲ್ಲಿ ನೀರಿದ್ದು, ಕಾಲವೆಗಳಿಗೆ ಹರಿಸಲಾಗುವ ನೀರು ಕೊನೆ ಭಾಗದ ರೈತರಿಗೆ ತಲುಪುವುದಿಲ್ಲ. ಈಗ ನೀರಾವರಿ ಸಲಹಾ ಸಮಿತಿ ಕಾಲುವೆಗಳಿಗೆ ನೀರು ಹರಿಸುವ ಕುರಿತು ಇದೇ ಮೊದಲ ಬಾರಿಗೆ
ಮುಂಗಾರು ಹಂಗಾಮಿನಲ್ಲಿ ವಾರಬಂದಿ ತೀರ್ಮಾನ ಕೈಗೊಂಡಿರುವುದರಿಂದ ಎಲ್ಲ ರೈತರಿಗೆ ನೀರಿನ ಸಮಸ್ಯೆ ಉದ್ಭವಿಸಲಿದೆ.
ಆದ್ದರಿಂದ ವಾರಬಂದಿ ನಿರ್ಧಾರ ಕೈಬಿಡಲು ರೈತರು ಆಗ್ರಹಿಸಿದ್ದಾರೆ. ನಾರಾಯಣಪುರದ ಬಸವಸಾಗರ ಜಲಾಶಯದ ಗರಿಷ್ಠ ನೀರಿನ ಸಂಗ್ರಹ 33.313 ಟಿಎಂಸಿ ಇದ್ದು, ಈಗ 27.172 ಟಿಎಂಸಿ ನೀರಿದ್ದರೂ ನೀರಾವರಿ ಸಲಹಾ ಸಮಿತಿ ವಾರಬಂದಿ ನಿರ್ಧಾರ
ಕೈಗೊಂಡಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಈಗ ನಾರಾಯಣಪುರ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಆ. 17ರ ನಂತರ ವಾರಬಂದಿ ನಿರ್ಧಾರ ಕೈಗೊಂಡಿರುವುದು ಸಮಂಜಸವಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿ ಕಾರಿಗಳು
ಈಗಲಾದರೂ ಎಚ್ಚೆತ್ತುಕೊಂಡು ರೈತರ ಸಮಸ್ಯೆಗೆ ಸ್ಪಂದಿಸುವವರೇ ಕಾಯ್ದು ನೋಡಬೇಕಿದೆ.

Advertisement

ರಾಜೇಶ ಪಾಟೀಲ್‌ ಯಡ್ಡಳ್ಳಿ

ನೀರಾವರಿ ಸಲಹಾ ಸಮಿತಿ ಕ್ರಮಕ್ಕೆ ರೈತರ ವಿರೋಧ ವಿದೆ ನಾರಾಯಣಪುರ ಜಲಾಶಯದಲ್ಲಿ ಸಾಕಷ್ಟು ನೀರಿದ್ದು, ಕಾಲುವೆಗಳಿಗೆ ನೀರು ಹರಿಸಬೇಕು. ಕೊನೆ ಭಾಗದ ರೈತರಿಗೆ ನೀರು ತಲುಪುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇನ್ನೂ ಕಾಲುವೆಗಳಿಗೆ ನೀರು ಹರಿಸುವ ಕುರಿತು ವಾರಬಂದಿ ನಿರ್ಧಾರ ಕೈಗೊಂಡಿರುವ ನೀರಾವರಿ ಸಲಹಾ ಸಮಿತಿ ಕ್ರಮಕ್ಕೆ ರೈತರ ವಿರೋಧವಿದ್ದು, ಈ ಕುರಿತು. 22ರಂದು ಉಗ್ರ ಹೋರಾಟ ಹಮ್ಮಿಕೊಳ್ಳಲಾಗಿದೆ.

ಮಲ್ಲಿಕಾರ್ಜುನ ಸತ್ಯಂಪೇಟೆ, ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next