Advertisement

ಕಲ್ಲಂಗಡಿ ಬೆಳೆ : ಹೆಕ್ಟೇರ್‌ಗೆ 20 ಸಾವಿರ ರೂ. ಸಹಾಯಧನ, ಜಿಲ್ಲೆಯಲ್ಲಿ 107 ಹೆಕ್ಟೇರ್‌ ಬೆಳೆ ನಿರೀಕ್ಷೆ

11:05 PM Dec 10, 2022 | Team Udayavani |

ಕುಂದಾಪುರ: ಕಲ್ಲಂಗಡಿ ಬೆಳೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಬೆಳೆಗೆ ಉತ್ತೇಜನ ಕೊಡುವ ಸಲುವಾಗಿ ಬೆಳೆಗಾರರಿಗೆ ತೋಟಗಾರಿಕಾ ಇಲಾಖೆಯಿಂದ ಸಹಾಯನ ಧನ ಸಿಗಲಿದೆ. ಈ ಬಾರಿ ಪ್ರತೀ ಹೆಕ್ಟೇರ್‌ಗೆ ರೈತರು 20 ಸಾವಿರ ರೂ. ಸಬ್ಸಿಡಿ ಸಹಾಯಧನವನ್ನು ಪಡೆಯಬಹುದು.

Advertisement

ಉಡುಪಿ ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಬೈಂದೂರು ಹೋಬಳಿ ವ್ಯಾಪ್ತಿಯಲ್ಲಿ ಈ ಬಾರಿ 107 ಹೆಕ್ಟೇರ್‌ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ ಬೆಳೆಯುವ ನಿರೀಕ್ಷೆ ಹೊಂದಲಾಗಿದೆ. ಹಿಂದೆಲ್ಲ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರು ಸುಮಾರು 100ರಿಂದ 150 ಹೆಕ್ಟೇರ್‌ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯನ್ನು ಬೆಳೆಯುತ್ತಾರೆ. ಆದರೆ ಕಳೆದೆರಡು ವರ್ಷಗಳಿಂದ ಬೆಳೆ ಪ್ರಮಾಣ ಕುಂಠಿತಗೊಂಡಿತ್ತು. ಈ ಬಾರಿ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗುವ ನಿರೀಕ್ಷೆಯಿದೆ.

ಸಬ್ಸಿಡಿಗೆ ಏನು ಮಾಡಬೇಕು?
ಸಬ್ಸಿಡಿ ಸಹಾಯಧನವನ್ನು ಪಡೆಯಲು ರೈತರು ಕನಿಷ್ಠ ಅರ್ಧ ಎಕರೆಯಲ್ಲಿ ಕಲ್ಲಂಗಡಿ ಬೆಳೆಯನ್ನು ಬೆಳೆಸಿರಬೇಕು. ಜಾಗದ ಆರ್‌ಟಿಸಿ, ಬ್ಯಾಂಕ್‌ ಖಾತೆ ವಿವರ, ಪಡಿತರ ಕಾರ್ಡ್‌, ಫ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಣಿಯಾಗಿದ್ದರೆ ಬಾಕಿ ದಾಖಲೆಗಳ ಅಗತ್ಯವಿಲ್ಲ. ಈ ಎಲ್ಲ ದಾಖಲೆಗಳನ್ನು ತೋಟಗಾರಿಕೆ ಇಲಾಖೆಗೆ ಸಲ್ಲಿಸಬೇಕು. ಈ ಹಿಂದೆ ಸಬ್ಸಿಡಿ ಅಥವಾ ಯಾವುದಾದರೂ ಸಹಾಯಧನ ಪಡೆದಿದ್ದರೆ ಅಂತವರಿಗೆ ಈ ಸಬ್ಸಿಡಿ ಸಿಗಲ್ಲ. ಈವರೆಗೆ ಯಾವುದೇ ಸಹಾಯಧನ ಪಡೆಯದಿದ್ದವರಿಗೆ ಮಾತ್ರ ಈ ಸಹಾಯಧನ ಸಿಗಲಿದೆ. ಇದರಲ್ಲಿ ಕಲ್ಲಂಗಡಿ ಬೆಳೆಗೆ ಬೇಕಾದ ಪ್ಲಾಸ್ಟಿಕ್‌ ಮರ್ಚಿನ್‌ ಸಹ ಸಿಗಲಿದೆ.

ಕಿರಿಮಂಜೇಶ್ವರ ಗ್ರಾಮ ಗರಿಷ್ಠ
ಬೈಂದೂರು ತಾಲೂಕಿನಲ್ಲಿ ಕಿರಿಮಂಜೇಶ್ವರ ಗ್ರಾಮದಲ್ಲಿ ಗರಿಷ್ಠ ಸರಾಸರಿ 36.59 ಹೆಕ್ಟೇರ್‌ ಬೆಳೆಯಲಾಗುತ್ತಿದೆ. ಇನ್ನುಳಿದಂತೆ ಕಂಬದಕೋಣೆ, ಹೇರೂರು, ನಂದನವನ, ಕೆರ್ಗಾಲು, ಉಪ್ಪುಂದ, ಬಿಜೂರು, ಶಿರೂರು, ನಾವುಂದ ಸಹಿತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಲ್ಲಂಗಡಿ ಬೆಳೆ ಬೆಳೆಯುತ್ತಾರೆ. ಕುಂದಾಪುರ, ಬೈಂದೂರು ಭಾಗದಲ್ಲಿ ಕಲ್ಲಂಗಡಿ ಹಣ್ಣು ಸಾಮಾನ್ಯವಾಗಿ ಮಾರ್ಚ್‌, ಎಪ್ರಿಲ್‌ ವೇಳೆಗೆ ಕೊಯ್ಲಿಗೆ ಬರುತ್ತದೆ. ಈ ಬಾರಿಯ ಬೆಳೆ ಪ್ರಕ್ರಿಯೆ 101-15 ದಿನಗಳ ಹಿಂದೆಯೇ ಶುರುವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾದಿಂದಾಗಿ ಮಾರ್ಚ್‌, ಎಪ್ರಿಲ್‌, ಮೇ ವೇಳೆಗೆ ಲಾಕ್‌ಡೌನ್‌ ಜಾರಿಯಾಗಿ ದ್ದರಿಂದ ಬೆಳೆದ ಹಣ್ಣುಗಳನ್ನು ಮಾರಾಟ ಮಾಡ ಲಾಗದೇ, ಕೆಲವು ಹಣ್ಣಿಗೆ ಬೇಡಿಕೆಯಿದ್ದರೂ, ನಿರೀಕ್ಷಿತ ಬೆಲೆ ಇಲ್ಲದೇ, ನಷ್ಟದಲ್ಲಿಯೇ ಮಾರಾಟ ಮಾಡಿದ ಪ್ರಸಂಗವೂ ನಡೆದಿತ್ತು. ಈ ವರ್ಷ ಈ ಪರಿಸ್ಥಿತಿ ಸುಧಾರಣೆಯಾಗುವ ಆಶಾಭಾವ ರೈತರದ್ದಾಗಿದೆ.

ಉತ್ತಮ ಸೀಸನ್‌ ನಿರೀಕ್ಷೆ
ಚಳಿ ಇರುವುದರಿಂದ ಈ ಬಾರಿ ವಾತಾವರಣ ಉತ್ತಮವಾಗಿದೆ. ಇನ್ನು ಮಳೆ ಬರಬಾರದು. ಹಾಗಾದರೆ ಉತ್ತಮ ಬೆಳೆಯ ನಿರೀಕ್ಷೆ ಇಟ್ಟುಕೊಳ್ಳಬಹುದು. ಕಳೆದ ಬಾರಿಗಿಂತ ಈ ಬಾರಿ ಸ್ವಲ್ಪ ಮಟ್ಟಿಗೆ ಹೆಚ್ಚಿನ ಬೆಳೆ ಬೆಳೆಸಲಾಗಿದೆ. ಈ ಭಾಗದಲ್ಲಿ ನಾಮಧಾರಿ, ಕೆಲವರು ಸುಪ್ರೀತ್‌ ತಳಿಗಳನ್ನು ಬೆಳೆಯುತ್ತಾರೆ. ಈ ಬಾರಿ ಉತ್ತಮ ಸೀಸನ್‌ನ ನಿರೀಕ್ಷೆ ರೈತರದ್ದು.
– ಪುಂಡರೀಕ ಮಧ್ಯಸ್ಥ , ನರಸಿಂಹ ದೇವಾಡಿಗ, ಕಿರಿಮಂಜೇಶ್ವರ, ಬೆಳೆಗಾರರು

Advertisement

ಸಬ್ಸಿಡಿ ಸಹಾಯಧನ
ಕಲ್ಲಂಗಡಿ ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆಯಿಂದ ಪ್ರೋತ್ಸಾಹಧನನ್ನು ನೀಡಲಾಗುತ್ತಿದೆ. ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಒಮ್ಮೆ ಸಬ್ಸಿಡಿ ಪಡೆದುಕೊಂಡವರಿಗೆ ಈ ಅವಕಾಶವಿಲ್ಲ. ಈ ಬಾರಿ ಉತ್ತಮ ಬೆಳೆ ನಿರೀಕ್ಷೆಯಿದೆ.
– ನಿಧೀಶ್‌ ಕೆ.ಜೆ., ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next