Advertisement

ಜಲಮೂಲ ವೃದ್ಧಿಸಿಕೊಳ್ಳಲು ನಿರ್ಲಕ್ಷ್ಯಿಸಿದ್ರೆ ಆಪತ್ತು!

11:15 AM Apr 06, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ 2020ರಲ್ಲಿ ಸುರಿದ ಸಮೃದ್ಧ ಮಳೆ ಮತ್ತು ಕೋವಿಡ್ ಸೋಂಕಿನಿಂದ ಕುಸಿದಿರುವ ವಾಣಿಜ್ಯ ಚಟುವಟಿಕೆಗಳಿಂದಾಗಿ ಈ ಬಾರಿ ನಗರದಲ್ಲಿ ನೀರಿನ ಕೊರತೆ ಕಳೆದ ವರ್ಷಗಳಂತೆ ಕಾಡಿಲ್ಲ. ಆದರೆ, ನಗರದ ಹೊರ ವಲಯ ಸೇರಿದಂತೆ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ನೀರಿಗೆ ಪರದಾಟ ಮುಂದುವರಿದಿದೆ.

Advertisement

ಇದೇ ಸಂದರ್ಭದಲ್ಲಿ ಅನಿಶ್ಚಿತವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಈಗಲೇ ಜಲಮೂಲಗಳನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡದಿದ್ದರೆ, ಮುಂದಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವುದು ಖಚಿತ ಎನ್ನುತ್ತಾರೆ ತಜ್ಞರು.

ಮೊದಲ ಹಂತದಲ್ಲಿ ಕಾವೇರಿ ನೀರನ್ನು ನಗರಕ್ಕೆತರಲು 1974 ಯೋಜನೆರೂಪಿಸಿಕೊಳ್ಳಲಾಯಿತು. ಅಂದಿ ನಿಂದ ಹಂತ -ಹಂತವಾಗಿ ಕಾವೇರಿ ನೀರು ಬಳಸಿಕೊಳ್ಳಲಾಗುತ್ತಿದ್ದು, ಇದೀಗ ಐದನೇ ಹಂತದಲ್ಲಿ ಕಾವೇರಿ ನೀರು ಬಳಸಿಕೊಳ್ಳುವ ಯೋಜನೆ ಪ್ರಗತಿಯಲ್ಲಿದೆ. ನಗರಕ್ಕೆ 2012ರಿಂದ ಕಾವೇರಿಯ ಮೂಲಕ (1440 ಎಂಎಲ್‌ಡಿ – ಪ್ರತಿ ದಿನ ಮಿಲಿಯನ್‌ ಲೀಟರ್‌) 144 ಕೋಟಿ ರೂ. ಲೀಟರ್‌ ನೀರು ಬರುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 10 ಎಂಎಲ್‌ಡಿ ನೀರು ಬಳಸಿಕೊಳ್ಳುವ ನಿಟ್ಟಿನಲ್ಲಿ ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಪ್ರಸಕ್ತ ವರ್ಷದಲ್ಲಿ ನೀರು ಕೊರತೆ ಇಲ್ಲ: ಕಬಿನಿಯಲ್ಲಿ 9 ಟಿಎಂಸಿ ಮತ್ತು ಕೆಆರ್‌ಎಸ್‌ನಲ್ಲಿ 23 ಟಿಎಂಸಿ ನೀರು ಸೇರಿದಂತೆ ಒಟ್ಟು 32 ಟಿಎಂಸಿಯಷ್ಟು ನೀರು ಇರುವುದರಿಂದ ಈ ಬಾರಿಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ನೀರು ಕೊರತೆ ಆಗುವುದಿಲ್ಲ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್‌ ಡಾ.ಬಿ.ಎಂ. ಸೋಮಶೇಖರ್‌ ತಿಳಿಸಿದ್ದಾರೆ.

ನಗರಕ್ಕೆ ಬೇಸಿಗೆಯಲ್ಲಿ ಅವಶ್ಯವಿರುವಷ್ಟು ನೀರು ಲಭ್ಯವಿರುವ ಹಿನ್ನೆಲೆಯಲ್ಲಿ ಈ ಬಾರಿ ಸಮಸ್ಯೆ ಆಗುವುದಿಲ್ಲ. 110 ಹಳ್ಳಿಗಳಲ್ಲಿ 49 ಹಳ್ಳಿಗಳಿಗೂ ಜಲಮಂಡಳಿ ನೀರು ಸರಬರಾಜು ಮಾಡುತ್ತಿದೆ. ಎಲ್ಲಿ ನೀರು ಸರಬರಾಜು ಮಾಡಲು ಸಾಧ್ಯವಿಲ್ಲವೋ ಆ ನಿರ್ದಿಷ್ಟಪ್ರದೇಶಗಳಲ್ಲಿ ಜಲಮಂಡಳಿಯ 60 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು “ಉದಯವಾಣಿ’ಗೆ ಮಾಹಿತಿ ನೀಡಿದರು.

Advertisement

ಬೋರ್‌ವೆಲ್‌ಗಳಲ್ಲೂ ಬೇಸಿಗೆಯಲ್ಲಿ ನೀರು ಖಾಲಿ:

ನಗರದ 9,167 ಬೋರ್‌ವೆಲ್‌ಗಳಲ್ಲಿ ಈ ಬೇಸಿಗೆ ಸಂದರ್ಭದಲ್ಲಿ 650 ಬೋರ್‌ವೆಲ್‌ಗಳಲ್ಲಿ ನೀರು ಬತ್ತಿದೆ. ಮುಂದಿನ ದಿನಗಳಲ್ಲಿ ನಗರದ ಬೋರ್‌ವೆಲ್‌ಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲ ಕಾಯಿಲೆಗೂ ಒಂದೇ ಔಷಧಿ ಬಳಸಿದಂತೆ ನಗರದಲ್ಲಿ ಎಲ್ಲ ರೀತಿಯ ಬಳಕೆಗೂ ಕಾವೇರಿ ನೀರು ಬಳಸುವುದು ಎಲ್ಲ ಕಾಯಿಲೆಗೂ ಒಂದೇ ಔಷಧಿ ಬಳಸಿದಂತೆ ಎನ್ನುತ್ತಾರೆ ರೈನ್‌ಮ್ಯಾನ್‌ ಎಂದೇ ಖ್ಯಾತಿ ಗಳಿಸಿರುವ ಹಾಗೂ ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಸಲಹೆಗಾರ ಶಿವಕುಮಾರ್‌. ಮನೆಗಳಲ್ಲಿ ಶೇ.40ರಷ್ಟು ನೀರು ಶೌಚಾಲಯಕ್ಕೆ ಬಳಸಲಾಗುತ್ತಿದೆ. ಇದಕ್ಕೆ ಈಗಾಗಲೇ ಬಳಸಿರುವ ನೀರು ಬಳಸಬೇಕು. ನಗರದಲ್ಲಿ ಅಂದಾಜು ಶೇ.80ರಷ್ಟು ನೀರು ಕೊಳಚೆ ಆಗಿ ಹೊರಕ್ಕೆ ಹೋಗುತ್ತದೆ. ಈ ಪ್ರಮಾಣದ ನೀರು ಸಂಸ್ಕರಣೆ ಮಾಡಿ ಮರು ಬಳಸಬೇಕು. ಭವಿಷ್ಯದ ದೃಷ್ಟಿಯಿಂದ ನಗರದಲ್ಲಿ ಕೊಳಚೆ ನೀರು ಸಂಸ್ಕರಣೆ ಮಾಡಿ ಬಳಸುವುದಕ್ಕೆ ಆದ್ಯತೆ ನೀಡಬೇಕು. ಕೇವಲ ಡ್ಯಾಂ ನೀರು ಬಳಸುತ್ತೇವೆ ಎನ್ನುವುದು ಮುಂದಿನ ದಿನಗಳಲ್ಲಿ ಆಗುವುದಿಲ್ಲ. ಮಳೆನೀರು ಕೊಯ್ಲು, ಅಂತರ್ಜಲ ಮಟ್ಟ ವೃದ್ಧಿಗೆ ಆದ್ಯತೆ ನೀಡಬೇಕು. ಭವಿಷ್ಯದ ದೃಷ್ಟಿಯಿಂದ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

31 ಎಸ್‌ಟಿಪಿಗಳು :

ನಗರದಲ್ಲಿ ಒಟ್ಟು 31 ಕೊಳಚೆ ನೀರು ಶುದ್ಧೀಕರಣ ಘಟಕಗಳ ಮೂಲಕ (ಎಸ್‌ಟಿಪಿ) 1162.5 ಎಂಎಲ್‌ಡಿನೀರು ಸಂಸ್ಕರಣೆ ಮಾಡಲು ಜಲಮಂಡಳಿ ಕ್ರಮವಹಿಸಿದೆ.ಫೆಬ್ರವರಿಯಲ್ಲಿ 766.08 ಎಂಎಲ್‌ಡಿ ನೀರು ಸಂಸ್ಕರಿಸಲಾಗಿದ್ದು, ಇದರಲ್ಲಿ 9.82 ಎಂಎಲ್‌ಡಿ ನೀರು ಮಾರಾಟ ಮಾಡಲಾಗಿದೆ. ಸಂಸ್ಕರಣೆ ಮಾಡಿದ 556.62 ಎಂಎಲ್‌ಡಿ ನೀರು ಮರು ಬಳಕೆಮಾಡಲಾಗುತ್ತಿದೆ ಎಂದು ಜಲಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಳಿದಂತೆ ಕೊಳಚೆ ನೀರು ಶುದ್ಧೀಕರಣ ಮರುಬಳಕೆಯಿಂದಲೇ ಜಲಮಂಡಳಿಗೆ 66.44 ಲಕ್ಷರೂ. ಆದಾಯವೂ ಬಂದಿದೆ.

ವೈಜ್ಞಾನಿಕತೆಗೆ ಆದ್ಯತೆ ನೀಡಿ :

ಬೆಂಗಳೂರು ಮಳೆ ವಿಷಯದಲ್ಲಿ ಅದೃಷ್ಟ ಮಾಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮಳೆಪ್ರಮಾಣ ಈಗ ಇರುವಷ್ಟೇ ಇರುತ್ತದೆ ಎಂದು ಹೇಳಲುಸಾಧ್ಯವಿಲ್ಲ ಎಂದು ಪರಿಸರ ತಜ್ಞ ಡಾ. ಕ್ಷಿತಿಜ್‌ ಅರಸ್‌ ಅಭಿಪ್ರಾಯಪಟ್ಟರು.

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next