ಬನಹಟ್ಟಿ : ಕಳೆದ ಹಲವಾರು ದಿನಗಳಿಂದ ಮಹಾರಾಷ್ಟ್ರದಲ್ಲಿನ ಮಳೆ ಮತ್ತು ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುತ್ತಿರುವುದರಿಂದ ಬಾಘಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ 4 ಲಕ್ಷ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಹರಿದು ಬರುತ್ತಿತ್ತು. ಇಂದು ಶುಕ್ರವಾರ ಅದರ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಸಂತ್ರಸ್ತರಲ್ಲಿ ನೆಮ್ಮದಿ ಮೂಡಿಸಿದೆ.
ಗುರುವಾರ ಯಾವುದೇ ರೀತಿಯ ಏರಿಳಿತವಾಗದಿದ್ದರೂ ಇಂದು ಶುಕ್ರವಾರ ಸುಮಾರು 70 ಸಾವಿರ ಕ್ಯೂಸೆಕ್ಸ್ ನಷ್ಟು ನೀರು ಕಡಿಮೆಯಾಗಿರುವುದು ಈ ಭಾಗದ ಜನರಿಗೆ ಹಾಗೂ ರೈತರಿಗೆ ನಿರಾಳತೆ ಮೂಡಿಸಿದೆ.
ಪ್ರತಿ ವರ್ಷ ಕೃಷ್ಣಾ ನದಿ ತುಂಬಿ ಹರಿದು ಹಿನ್ನೀರಿನಿಂದ ಸಂಕಷ್ಟಕ್ಕೆ ಒಳಗಾಗುವ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಮೊದಲೇ ಕೋವಿಡ್‌ನಿಂದಾಗಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಒದ್ದಾಡುತ್ತಿರುವಾಗ ಪ್ರವಾಹ ರೈತರ ಬದುಕನ್ನು ಕೊಚ್ಚಿಕೊಂಡು ಹೋಗಿದೆ. ಆ ನಿಟ್ಟಿನಲ್ಲಿ ಸರಕಾರ ಇದರ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ಮಾಡಿ ಸಂತ್ರಸ್ತರಿಗೆ ಸರಿಯಾದ ರೀತಿಯಲ್ಲಿ ಶಾಶ್ವತ ಪರಿಹಾರದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಈ ಭಾಗದ ಜನರ ಹಾಗೂ ರೈತರ ಅಭಿಪ್ರಾಯವಾಗಿದೆ. ಪ್ರತಿ ವರ್ಷ ಹಿನ್ನಿರಿನ ಸಂಕಷ್ಟದಿAದ ನೊಂದಿರುವ ಜನರು ಶಾಶ್ವತ ಪರಿಹಾರವಬೊಂದೆ ಇದಕ್ಕೆ ಮಾರ್ಗ ಎನ್ನುತ್ತಿದ್ದಾರೆ.
ಇದನ್ನೂ ಓದಿ :ಕರ್ನಾಟಕದ ಬಂಡೀಪುರ ಸೇರಿ ದೇಶದ 14 ಹುಲಿ ಅಭಯಾರಣ್ಯಗಳಿಗೆ CATS ಮಾನ್ಯತೆ
ಇಂದು ಶುಕ್ರವಾರ ಹಿಪ್ಪರಗಿ ಜಲಾಶಯಕ್ಕೆ 3 ಲಕ್ಷ 42ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಬೀಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 527.5 ಮೀ ಇದೆ. ಘಟಪ್ರಭಾ ನದಿ ಹಾಗೂ ಕೃಷ್ಣಾ ನದಿ ನೀರಿನ ಪ್ರಮಾಣ ಇಳಿಮುಖವಾಗುತ್ತಿದೆ ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ ತಿಳಿಸಿದ್ದಾರೆ.