Advertisement

ಅಸಮರ್ಪಕ ನಿರ್ವಹಣೆಯಿಂದ ನೀರು ಸೋರಿಕೆ; ಮಾರೂರು-ತೋರ್ಪು ಕಿಂಡಿ ಅಣೆಕಟ್ಟು

06:25 PM Apr 04, 2023 | Team Udayavani |

ಮೂಡುಬಿದಿರೆ: ತಾಲೂಕಿನ ಪೂರ್ವ ಪರಿಧಿ, ಪುರಸಭೆ ವ್ಯಾಪ್ತಿಯ ನೆತ್ತೋಡಿ ಮಾರೂರು ತೋರ್ಪು ಎಂಬಲ್ಲಿ ಫಲ್ಗುಣಿ ನದಿಯ ಕವಲಿಗೆ ನಿರ್ಮಿಸಿದ ಕಿಂಡಿ ಅಣೆಕಟ್ಟು ಈ ವರ್ಷ ತೊಟ್ಟು ನೀರನ್ನೂ ಹಿಡಿದಿಟ್ಟುಕೊಳ್ಳದೆ ಸಂಪೂರ್ಣ ಬರಿದಾಗಿದೆ.

Advertisement

2019ರಲ್ಲಿ ಕರ್ನಾಟಕ ಸರಕಾರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯವರು ಪಶ್ಚಿಮವಾಹಿನಿ ಯೋಜನೆಯಡಿ 555 ಲಕ್ಷ ರೂ. ವೆಚ್ಚದಲ್ಲಿ ಈ ಕಿಂಡಿ ಅಣೆಕಟ್ಟನ್ನು ಮೂಡುಬಿದಿರೆ ಮತ್ತು ಬೆಳ್ತಂಗಡಿ ವಿಧಾನಸಭೆ ಕ್ಷೇತ್ರ ಜತೆಗೂಡುವಲ್ಲಿ ನಿರ್ಮಿಸಿದ್ದಾರೆ. ಎರಡೂ ಕ್ಷೇತ್ರಗಳಿಗೆ ಜಲ ಲಾಭವಾಗುವ ಯೋಜನೆ ಇದಾಗಿದ್ದು, ಕಾಮಗಾರಿ ನಿಗದಿತ ಸಮಯದೊಳಗೆ ಮುಕ್ತಾಯವಾಗಿತ್ತು.

ಯಾಂತ್ರಿಕವಾಗಿ ಸುಧಾರಿತ ಕ್ರಮವನ್ನು ಅಳವಡಿಸಲಾಗಿರುವ ಈ ಕಿಂಡಿ ಅಣೆಕಟ್ಟಿನ ನಿರ್ವಹಣೆ ಸಮರ್ಪಕವಾಗಿದ್ದು, ಈ ಕಳೆದ ಮೂರು ವರ್ಷಗಳಲ್ಲಿ ಸುತ್ತಲಿನ ಹತ್ತು ಕಿ.ಮೀ. ವ್ಯಾಪ್ತಿಯ ಬಾವಿ, ಬೋರ್‌ವೆಲ್‌, ತೋಡುಗಳಲ್ಲಿ ನೀರಿನ ಒರತೆ ಹೆಚ್ಚಿ ಸಾಮಾನ್ಯ ಬಳಕೆದಾರರಷ್ಟೇ ಅಲ್ಲದೆ ರೈತರು, ತೋಟಗಾರರಿಗೆ ಬಹಳ ಉಪಕಾರವಾಗಿತ್ತು. ಇಲಾಖೆಯವರು ಸಕಾಲದಲ್ಲಿ ಆಗಮಿಸಿ, ಸ್ಥಳೀಯರ ಸಹಕಾರದೊಂದಿಗೆ ಕಿಂಡಿ ಬಾಗಿಲನ್ನು ಮುಚ್ಚುವ, ಮಳೆಗಾಲ ಬಂದಾಕ್ಷಣ
ತೆರೆದುಬಿಡುವ ಕ್ರಮದಿಂದಾಗಿ ಯಾವುದೇ ತೊಂದರೆ ಕಂಡುಬಂದಿರಲಿಲ್ಲ.

ತೀರಾ ವಿಳಂಬವಾಗಿ ಬಂದ ಇಲಾಖೆಯವರು ಈ ಬಾರಿ, ಸುಡುಸುಡು ಬಿಸಿಲು, ನದಿ, ಹೊಳೆ, ತೋಡುಗಳೆಲ್ಲ ಒಣಗಿ ಸೊರಗಿ ಹೋಗಿರುವುದೊಂದೆಡೆಯಾದರೆ, ಕಿಂಡಿ ಅಣೆಕಟ್ಟುಗಳನ್ನು ಸಕಾಲದಲ್ಲಿ ಬಂದ್‌ ಮಾಡದಿರುವುದು ಇನ್ನೊಂದೆಡೆ. ಸ್ಥಳೀಯರು ಅರೋಪಿಸುವಂತೆ ಇಲಾಖೆಯವರು ಕಿಂಡಿಬಾಗಿಲು ಹಾಕಲು ಬರುವಾಗ ತೀರಾ ವಿಳಂಬವಾಗಿತ್ತು. ತಡವಾಗಿ ಬಂದದ್ದು ಊರವರ ಗಮನಕ್ಕೂ ಬಂದಿರಲಿಲ್ಲ. ಹಾಗೆ ಬಂದವರು ಕಿಂಡಿ ಬಾಗಿಲ ಬದಿ, ಕೆಳಗೆ ಅಳವಡಿಸಬೇಕಾಗಿದ್ದ ರಬ್ಬರ್‌ ಪ್ಯಾಕಿಂಗ್‌ ಕೂಡ ಹಾಕಿಲ್ಲ, ಹಾಗಾಗಿ ಇದ್ದ ನೀರು ಸೋರುವುದು ಸಹಜವಾಗಿ ನಡೆಯಿತು. ಊರವರು ಪ್ಲಾಸ್ಟಿಕ್‌ ಮತ್ತಿತರ ಸಾಮಗ್ರಿಗಳನ್ನು ಭರ್ತಿಮಾಡಲು ಪ್ರಯತ್ನಿಸಿದ್ದು ಆ ಪ್ರಯತ್ನವೂ ಫಲಕಾರಿಯಾಗಲಿಲ್ಲ. ಒಟ್ಟಿನಲ್ಲಿ ಇಲಾಖೆಯವರು ಬೇಜ ವಾಬ್ದಾರಿತನದಿಂದ, ಅವ್ಯವಸ್ಥಿತ ನಿರ್ವಹಣೆಯಿಂದ ಇದ್ದ ನೀರೆಲ್ಲ ಸೋರಿ ಹೋಗಿದೆ. ಕಿಂಡಿ ಅಣೆಕಟ್ಟು ಸಹಿತ ಸೇತುವೆಯ ಆ ಬದಿಯಲ್ಲೂ ನೀರಿಲ್ಲ, ಈ ಬದಿಯಲ್ಲೂ ನೀರಿಲ್ಲ.

ಪರಿಣಾಮವಾಗಿ ಈ ಭಾಗದಲ್ಲಿ ಸುಮಾರು 10 ಕಿ.ಮೀ. ವ್ಯಾಪ್ತಿಯ ಬಾವಿ, ಬೋರ್‌ವೆಲ್‌, ತೋಡುಗಳ ಜಲಮೂಲ, ನೀರ ಒರತೆಗೆ ಸಂಚಕಾರವಾಗಿದೆ. ಎಲ್ಲದರ ಜಲಮಟ್ಟ ಕೆಳಮುಖವಾಗಿರುವುದು ಶೋಚನೀಯ. ಈ ಅಣೆಕಟ್ಟು ನಿರ್ಮಾಣ ವಾದ ಬಳಿಕ ಪುರಸಭೆಯ ನೆತ್ತೋಡಿ, ಮಾರೂರು, ಗಂಟಾಲಕಟ್ಟೆ, ಉಳಿದಂತೆ ಅತ್ತ ಬಡೆಕೋಡಿ, ಅರಂಬೋಡಿ, ಕಜೆ, ಶಿರ್ತಾಡಿ ಹೀಗೆ ಹತ್ತು ಕಿ.ಮೀ.ಗೂ ದೂರದೂರುಗಳಲ್ಲಿ ಇಲ್ಲಿನ ನೀರ ಸೆಲೆಯ ಉಪಕಾರ ಎದ್ದು ಕಾಣಿಸುತ್ತಿತ್ತು. ಪ್ರಾಣಿ, ಪಕ್ಷಿಗಳಿಗೂ ಖುಷಿ. ಮಂಗಗಳಿಗೂ ನೀರಾಟದ ಗಮ್ಮತ್ತು. ಮೀನುಗಾರಿಕೆಗೂ ಅನುಕೂಲವೆನಿಸಿತ್ತು.

Advertisement

ಅತ್ತ ಪುಚ್ಚಮೊಗರು ಕಡೆಯಿಂದ ಫಲ್ಗುಣಿ ನದಿಯಿಂದ ಸೆಳೆದು ಮೂಡುಬಿದಿರೆಗೆ ಒದಗಿಸಲಾಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಮಾರೂರು ತೋರ್ಪು ಕಿಂಡಿ ಅಣೆಕಟ್ಟಿನಿಂದಾದರೂ ನೀರು ಪೂರೈಸೋಣವೆಂದರೆ ಆದರ ಕತೆ ಹೀಗಿದೆ.

ಹಾಗಾದರೆ ಲಾಭ ಏನು?
ಬೆಳ್ತಂಗಡಿ ತಾಲೂಕಿನ ಪೆರಿಂಜೆಯಿಂದ ಪೇರಿಗಾಗಿ ಕಿಂಡಿ ಅಣೆಕಟ್ಟು ಸಹಿತ ಸೇತುವೆಯ ಮೂಲಕ ಜನ/ವಾಹನ ಸಂಚಾರಕ್ಕೆ ಬಹಳಷ್ಟು ಅನುಕೂಲವಾಗಿದೆ ಎಂಬುದಕ್ಕಾಗಿ ಎರಡೂ ಕಡೆಯವರು ಸಂತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ನೀರು ಹಿಡಿದಿಡಲಾಗದ ಕಿಂಡಿ ಅಣೆಕಟ್ಟಿನತ್ತ ವಿಷಾದದ ನೋಟ ಹರಿಸುತ್ತಾರಷ್ಟೇ.

*ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next