Advertisement

ಮಳೆ ಬರುವವರೆಗೆ ನೀರಿಗೆ ಕೊರತೆ ಇಲ್ಲ

10:13 AM Apr 20, 2018 | |

ಮಹಾನಗರ: ಕುಡಿಯುವ ನೀರಿನ ಮೂಲವಾಗಿರುವ ತುಂಬೆ ವೆಂಟೆಡ್‌ ಡ್ಯಾಂ ಬೇಸಗೆಯಲ್ಲೂ ಪೂರ್ಣ ಪ್ರಮಾಣದಲ್ಲಿ ತುಂಬಿದ್ದು, ಈ ಬಾರಿ ನಗರಕ್ಕೆ ಕುಡಿಯುವ ನೀರಿನ ಚಿಂತೆ ದೂರವಾಗಿದೆ. ಪ್ರಸ್ತುತ ಎ. 19ರಂದು ತುಂಬೆ ವೆಂಟೆಡ್‌ ಡ್ಯಾಂನ ನೀರಿನ ಮಟ್ಟ 5.9 ಮೀಟರ್‌ ಇದೆ. ಕಳೆದ ವರ್ಷ ಎ. 19 ರಂದು 4.3 ಮೀ. ನೀರು ಸಂಗ್ರಹವಿತ್ತು.

Advertisement

ಗರಿಷ್ಠ 7 ಮೀಟರ್‌ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ತುಂಬೆ ಡ್ಯಾಂನಲ್ಲಿ ಪೂರ್ತಿ ನೀರು ಸಂಗ್ರಹವಾದರೆ ಅಕ್ಕಪಕ್ಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಮೀನು ಮುಳುಗಡೆಯಾಗುವ ಸಾಧ್ಯತೆ ಇದೆ. ಹೀಗಾ ಗಿ ಈ ಬಾರಿ 6 ಮೀ. ನೀರು ಸಂಗ್ರಹ ಮಾಡಲಾಗಿತ್ತು. ಪ್ರಸ್ತುತ ಒಟ್ಟು ಸಂಗ್ರಹಣೆ ಮಾಡಿರುವ ನೀರಿನ ಮಟ್ಟದಲ್ಲಿ 10 ಸೆಂ.ಮೀ. ಮಾತ್ರ ಕಡಿಮೆಯಾಗಿದೆ. ಇದರ ಆಧಾರದಲ್ಲಿ ಮಂಗಳೂರು ನಗರಕ್ಕೆ ಕನಿಷ್ಠ 50 ದಿನಗಳವರೆಗೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ. ಅಂದರೆ ಜೂನ್‌ 20ರವರೆಗೆ ನೀರು ಅಬಾಧಿತವಾಗಿ ಸರಬರಾಜು ಮಾಡಬಹುದು.

ಬೇಸಗೆಯಲ್ಲಿ ಸಾಮಾನ್ಯವಾಗಿ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ದಿನವೊಂದಕ್ಕೆ ಸುಮಾರು 3ರಿಂದ 5 ಸೆಂ.ಮೀ. ನೀರು ಕಡಿಮೆಯಾಗುತ್ತಾ ಹೋಗುತ್ತದೆ.

ತುಂಬೆ ಡ್ಯಾಂನ ಮೇಲ್ಭಾಗದಲ್ಲಿರುವ ಶಂಭೂರು ಎಆರ್‌ಎಂ ಡ್ಯಾಂನಲ್ಲಿ ಪೂರ್ಣ ಪ್ರಮಾಣದಲ್ಲಿ 5 ಮೀಟರ್‌ ನೀರು ಸಂಗ್ರಹವಿದೆ. ಸಾಮಾನ್ಯವಾಗಿ ಮೇ ಮಾಸಾಂತ್ಯಕ್ಕೆ ಮುಂಗಾರು ಮಳೆ ಪ್ರಾರಂಭವಾಗಲಿದ್ದು, ಒಟ್ಟು ಪರಿಸ್ಥಿತಿ ಅವಲೋಕಿಸಿದರೆ ನಗರಕ್ಕೆ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಎದುರಾಗದು.

7 ಮೀ. ನೀರು ಸಂಗ್ರಹವಾದರೆ 90 ದಿನಗಳವರೆಗೆ ನೀರು
ತುಂಬೆ ವೆಂಟೆಡ್‌ಡ್ಯಾಂನ್ನು ಮಂಗಳೂರು ನಗರದ ಮುಂದಿನ 20ರಿಂದ 25 ವರ್ಷಗಳವರೆಗಿನ ನೀರಿನ ಅವಶ್ಯಕತೆಯನ್ನು ಮನಗಂಡು 2009ರಲ್ಲಿ ರೂಪಿಸಲಾಗಿತ್ತು . ಡ್ಯಾಂನ ಎತ್ತರ 12 ಮೀಟರ್‌ ಆಗಿದ್ದು ಗರಿಷ್ಠ ನೀರು 7 ಮೀ.ವರೆಗೆ ನಿಲ್ಲಿಸಬಹುದಾಗಿದೆ. ಆದರೆ 7 ಮೀಟರ್‌ ನೀರು ಸಂಗ್ರಹಿಸಿದರೆ ನದಿಯ ಎರಡೂ ಕಡೆಗಳಲ್ಲಿ ಕೃಷಿ ಭೂಮಿ ಸೇರಿದಂತೆ ಗಣನೀಯ ಪ್ರಮಾಣದಲ್ಲಿ ಪ್ರದೇಶ ಜಲಾವೃತಗೊಳ್ಳುವುದರಿಂದ ಆರಂಭದಲ್ಲಿ ಇಲ್ಲಿ 5 ಮೀಟರ್‌ ಎತ್ತರಕ್ಕೆ 2017 ರಲ್ಲಿ ನೀರು ಸಂಗ್ರಹಿಸಲಾಯಿತು. ಇದರಿಂದ ನದಿಪಾತ್ರದ ಎರಡೂ ಕಡೆಗಳಲ್ಲಿ 19 ಎಕರೆ ಜಾಗ ಜಲಾವೃತವಾಗಿದೆ. 

Advertisement

ಈ ವರ್ಷ 6 ಮೀಟರ್‌ ನೀರು ಸಂಗ್ರಹ ಮಾಡಲಾಗಿದೆ. ಗರಿಷ್ಠ ಮಟ್ಟ 7 ಮೀಟರ್‌ ನೀರು ಸಂಗ್ರಹಿಸಿದರೆ ಸುಮಾರು 85 ರಿಂದ 90 ದಿನಗಳವರೆಗೆ ನಗರಕ್ಕೆ ಕುಡಿಯುವ ನೀರು ಅಬಾಧಿತವಾಗಿ ಸರಬರಾಜು ಮಾಡಬಹುದಾಗಿದೆ. 6 ಮೀಟರ್‌ವರೆಗೆ ನೀರು ಸಂಗ್ರಹವಿದ್ದರೆ ಒಳಹರಿವ ಸ್ಥಗಿತಗೊಂಡ 55 ರಿಂದ 60 ದಿನಗಳವರೆಗೆ ನೀರು ಪೂರೈಕೆ ಮಾಡಬಹುದಾಗಿದೆ. ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರು ಕಡಿಮೆಯಾದರೆ ಎಎಂಆರ್‌ ಡ್ಯಾನಿಂದ ನೀರು ಬಿಟ್ಟು ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ನೇತ್ರಾವತಿ ನದಿಯಲ್ಲಿ ಫೆಬ್ರವರಿ ಮಧ್ಯಭಾಗದವರೆಗೆ ಒಳಹರಿವು ಇರುತ್ತದೆ.

ನೀರು ಸಂಗ್ರಹ ಪ್ರಮಾಣ; ಪೂರೈಕೆ ಸಾಮರ್ಥ್ಯ
ನಗರಕ್ಕೆ ದಿನಂಪ್ರತಿ 160 ಎಂಎಲ್‌ಡಿ ನೀರು ಸರಬರಾಜಾಗುತ್ತಿದೆ. ಈ ಪ್ರಮಾಣವನ್ನು ಲೆಕ್ಕಹಾಕಿ 4 ಮೀ.ಎತ್ತರಕ್ಕೆ ನಿಲ್ಲಿಸಿದರೆ 5.21 ಮಿಲಿಯನ್‌ ಕ್ಯುಬಿಕ್‌ ಮೀಟರ್‌ ನೀರು ಸಂಗ್ರಹ ಮಾಡಿ 23 ದಿನಗಳವರೆಗೆ ನಗರಕ್ಕೆ ನೀರು ಪೂರೈಕೆ ಮಾಡಬಹುದಾಗಿದೆ. 4.50 ಮೀ.ಎತ್ತರಕ್ಕೆ ಸಂಗ್ರಹಿಸಿದರೆ 6.40 ಮಿಲಿಯನ್‌ ಕ್ಯುಬಿಕ್‌ ಮೀಟರ್‌ ನೀರು ಸಂಗ್ರಹವಾಗುತ್ತದೆ ಮತ್ತು 30 ದಿನಗಳವರೆಗೆ ಪೂರೈಕೆ ಮಾಡಬಹುದಾಗಿದೆ. 5 ಮೀ. ಎತ್ತರಕ್ಕೆ ನೀರು ನಿಲ್ಲಿಸಿದರೆ 7.71 ಮಿಲಿಯನ್‌ ಕ್ಯುಬಿಕ್‌ ಮೀಟರ್‌ ನೀರು ಸಂಗ್ರಹವಾಗುತ್ತದೆ. ಇದು 40 ದಿನಗಳವರೆಗೆ ಸಾಕಾಗುತ್ತದೆ.5.50 ಮೀ. ಎತ್ತರಕ್ಕೆ ಸಂಗ್ರಹ ಮಾಡಿದರೆ 9.17 ಮಿಲಿಯನ್‌ ಕ್ಯುಬಿಕ್‌ ಮೀಟರ್‌ ನೀರು ಸಂಗ್ರಹವಾಗುತ್ತದೆ. ಇದರಿಂದ 48 ದಿನಗಳವರೆಗೆ ನೀರು ಪೂರೈಕೆ ಮಾಡಬಹುದು. 6 ಮೀ. ಎತ್ತರಕ್ಕೆ ನಿಲ್ಲಿಸಿದರೆ 10.83 ಮಿಲಿಯನ್‌ ಕ್ಯುಬಿಕ್‌ ಮೀಟರ್‌ ನೀರು ದಾಸ್ತಾನು ಆಗಿ 55 ದಿನಗಳವರೆಗೆ ಪೂರೈಕೆ ಮಾಡಬಹುದಾಗಿದೆ. 7 ಮೀಟರ್‌ ಎತ್ತರಕ್ಕೆ ನೀರು ನಿಲ್ಲಿಸಿದರೆ 14.73 ಮಿಲಿಯನ್‌ ಕ್ಯುಬಿಕ್‌ ಮೀಟರ್‌ ನೀರು ಸಂಗ್ರಹವಾಗಿ 85 ದಿನಗಳವರೆಗೆ ನೀರು ಪೂರೈಕೆ ಮಾಡಬಹುದಾಗಿದೆ.

1956ರಲ್ಲಿ ನಗರಕ್ಕೆ ಮೊದಲ ಬಾರಿ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಟಾನಗೊಂಡಿತು. ಆಗ 1,80,000 ಜನಸಂಖ್ಯೆಯನ್ನು ಅಂದಾಜಿಸಿಕೊಂಡು ಈ ಯೋಜನೆ ಸಿದ್ದಪಡಿಸಲಾಗಿತ್ತು. ಆಗ ಬೇಡಿಕೆ ಇದ್ದದ್ದು 10 ಎಂಎಲ್‌ಡಿ ನೀರಿಗೆ . 1971 ರಲ್ಲಿ ನೀರಿನ ಬೇಡಿಗೆ 81.70 ಎಂಎಲ್‌ಡಿಗೇರಿತು. ಈಗ ಇದು 137 ಎಂಎಲ್‌ಡಿಗೆ ತಲುಪಿದೆ.

ಕಳೆದ ವರ್ಷ4.3 ಮೀಟರ್‌
ಕಳೆದ ವರ್ಷ ತುಂಬೆ ವೆಂಟೆಡ್‌ ಡ್ಯಾಂನಲ್ಲಿ 5 ಮೀಟರ್‌ ನೀರು ಸಂಗ್ರಹ ಮಾಡಲಾಗಿದ್ದು ಎ. 19ರಂದು 4.3 ಮೀಟರ್‌ ನೀರು ಸಂಗ್ರಹವಿತ್ತು. ಬೇಸಗೆಯಲ್ಲಿ ನೀರಿನ ಕೊರತೆ ಎದುರಾಗುವ ಆತಂಕ ಕಾಡಿದ್ದರೂ ಮೇ ತಿಂಗಳಿನಲ್ಲಿ ಸುರಿದ ಮಳೆ ನೆರವಿಗೆ ಬಂದಿತ್ತು. 2016ರಲ್ಲಿ ತುಂಬೆಯ ಹಳೆಯ ವೆಂಟೆಡ್‌ ಡ್ಯಾಂನ ನೀರು ಸಂಗ್ರಹ ಸಾಮರ್ಥ್ಯ 4 ಮೀಟರ್‌ ಆಗಿದ್ದು , ಎಪ್ರಿಲ್‌ನಲ್ಲಿ ನೀರಿನ ಮಟ್ಟ ತೀವ್ರ ಕುಸಿಯಲು ಆರಂಭಗೊಂಡ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಕೊರತೆ ಗಂಭೀರವಾಗಿ ಕಾಡಿತ್ತು.

ಮಳೆ ನೆರವು
ಈ ಬಾರಿ ಎಪ್ರಿಲ್‌ ತಿಂಗಳಿನಲ್ಲಿ ನೇತ್ರಾವತಿ ನದಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದು ನೀರಿನ ಸಮಸ್ಯೆ ನೀಗಿಸುವಲ್ಲಿ ಸಹಕಾರಿಯಾಗಿದೆ. ನೇತ್ರಾವತಿ ನದಿಯಲ್ಲಿ ಕ್ಷೀಣಗೊಂಡಿದ್ದ ಒಳಹರಿವು ಇದರಿಂದ ಹೆಚ್ಚಳವಾಗಿದ್ದು, ಎಆಂಆರ್‌ ಡ್ಯಾಂಗೆ ಈ ವರೆಗೆ ಸುಮಾರು 20 ಸೆಂ.ಮೀ. ನೀರು ಹರಿದು ಬಂದಿದೆ. ಮಳೆಯಾಗಿರುವುದರಿಂದ ನದಿ ಪಕ್ಕದಲ್ಲಿರುವ ಅಡಿಕೆ ತೋಟ ಸಹಿತ ಕೃಷಿಗೆ ನದಿ ನೀರಿನ ಬಳಕೆ ಕಡಿಮೆಯಾಗಿದೆ. ಇದು ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟವನ್ನು ಕಾಯ್ದು ಕೊಳ್ಳುವಲ್ಲಿ ಸಹಕಾರಿಯಾಗಿದೆ. 

 ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next