ಬಿಸಿಲ ಧಗೆ ಭೂಮಿಯನ್ನು ಸುಡುತ್ತಿದೆ. ಹನಿ ನೀರಿಗೂ ಹಾಹಾಕಾರ ಶುರುವಾಗುತ್ತಿದೆ. ನದಿ, ಕೆರೆ, ಹಳ್ಳ-ಕೊಳ್ಳ, ತೊರೆಗಳು ಬರಿದಾಗುತ್ತಿದೆ. ಈಗ ಇದೇ ವಿಷಯವನ್ನು ಇಟ್ಟುಕೊಂಡು ಕನ್ನಡದಲ್ಲಿ ‘ಅಘ್ಯರ್ಂ’ ಎನ್ನುವ ಹೆಸರಿನಲ್ಲಿ ಚಿತ್ರವೊಂದು ತಯಾರಾಗುತ್ತಿದೆ. ಇತ್ತೀಚೆಗೆ ತನ್ನ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ‘ಅಘ್ಯರ್ಂ’ ಚಿತ್ರತಂಡ, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಇತ್ತೀಚೆಗೆ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಪತ್ರಿಕಾಗೋಷ್ಟಿ ನಡೆಸಿದ ಚಿತ್ರತಂಡ, ‘ಅಘ್ಯರ್ಂ’ನ ವಿಶೇಷತೆಗಳ ಬಗ್ಗೆ ಮಾತನಾಡಿತು. ‘ಶ್ರೀಪರಮೇಶ್ವರಿ ಆರ್ಟ್ಸ್’ ಬ್ಯಾನರ್‌ನಲ್ಲಿ ಶ್ರೀನಿವಾಸ್ ವೈ (ಆಡಿಟರ್ ಶ್ರೀನಿವಾಸ್) ‘ಅಘ್ಯರ್ಂ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಶ್ರೀನಿವಾಸ್, ‘ಇಂದಿನ ದಿನಗಳಲ್ಲಿ ಬಹುತೇಕ ವಸ್ತುಗಳನ್ನು ಉತ್ಪತ್ತಿ ಮಾಡಬಹುದು. ಆದರೆ ನೀರನ್ನು ಮಾತ್ರ ಉತ್ಪತ್ತಿ ಮಾಡಲು ಆಗುವುದಿಲ್ಲ. ಪ್ರಕೃತಿದತ್ತವಾಗಿ ಬಂದಿರುವ ನೀರನ್ನು ಅದರ ಮಹತ್ವ ಅರಿಯದೆ ಅನಗತ್ಯವಾಗಿ ಪೋಲು ಮಾಡುತ್ತಿದ್ದೇವೆ. ಮುಂದೊಂದು ದಿನ ನಮ್ಮ ಈ ತಪ್ಪಿಗೆ ಸಾಕಷ್ಟು ಬೆಲೆ ತೆರಬೇಕಾಗುತ್ತದೆ. ಇದೇ ವಿಷಯವನ್ನು ಅಘ್ಯರ್ಂ ಚಿತ್ರ ನಿರ್ಮಿಸಿ, ನಿರ್ದೇಶಿಸಲು ಪ್ರೇರಣೆಯಾಯಿತು ಎಂದರು.ಇದೇ ವೇಳೆ ಮಾತನಾಡಿದ ಹಿರಿಯ ಸಾಹಿತಿ ಡಾ. ಹೆಚ್.ಎಸ್ ವೆಂಕಟೇಶಮೂರ್ತಿ, ‘ಇಂದಿನ ದಿನಗಳಲ್ಲಿ ಇಂಥ ವಿಷಯಗಳನ್ನು ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ತರುವುದು ಸಾಹಸದ ವಿಷಯ. ಒಂದು ಒಳ್ಳೆಯ ವಿಷಯ ಸಿನಿಮಾವಾಗಿ ಪ್ರೇಕ್ಷಕರ ಮುಂದೆ ಬರುತ್ತಿರುವುದು ಖುಷಿಯ ವಿಷಯ. ಚಿತ್ರದಲ್ಲಿ ಒಂದು ಹಾಡನ್ನು ಬರೆಯಲು ಅವಕಾಶ ಸಿಕ್ಕಿದೆ. ಚಿತ್ರ ನೋಡುಗರಿಗೆ ಇಷ್ಟವಾಗಲಿದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಉಳಿದಂತೆ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ‘ಅಘ್ಯರ್ಂ’ ಚಿತ್ರದ ಚಿತ್ರೀಕರಣದ ಬಗ್ಗೆ ತಮ್ಮ ಅನಿಸಿಕೆ, ಅನುಭವಗಳನ್ನು ಹಂಚಿಕೊಂಡರು. ಇನ್ನು ‘ಅಘ್ಯರ್ಂ’ ಚಿತ್ರದಲ್ಲಿ ರಾಜೇಶ್ ರಾವ್, ಅಶ್ವಿನಿ ಗೌಡ, ಸ್ಪರ್ಶಾ ಶಣೈ, ಆನಂದ್, ನಾಗರಾಜ ಮೂರ್ತಿ ಇತರರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಶ್ರೀನಿವಾಸ್ ಕೌಶಿಕ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ನಾಗರಾಜ ಅದವಾನಿ ಚಿತ್ರದ ದೃಶ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಚಿತ್ರಕ್ಕೆ ಸಂಜೀವ ರೆಡ್ಡಿ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ಹಿರಿಯ ಸಾಹಿತಿ ಡಾ. ಹೆಚ್.ಎಸ್ ವೆಂಕಟೇಶಮೂರ್ತಿ ಸಾಹಿತ್ಯವನ್ನು ಒದಗಿಸಿದ್ದು, ಪಳನಿ ಡಿ. ಸೇನಾಪತಿ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.