Advertisement
ಚಾಮರಾಜನಗರ ಪಟ್ಟಣದ ಪಕ್ಕವೇ ಇರುವ ಸೋಮವಾರಪೇಟೆ ಗ್ರಾಮ ನಗರಸಭೆಗೆ ಸೇರ್ಪಡೆಯಾಗಿ ದಶಕಗಳೇ ಕಳೆದಿವೆ. ಸೋಮವಾರಪೇಟೆ ಬಡಾವಣೆ ನಗರಸಭೆ ಒಂದನೇ ವಾರ್ಡಿಗೆ ಸೇರಿದೆ. ರಾಷ್ಟ್ರೀಯ ಹೆದ್ದಾರಿ 209 ಹಾದು ಹೋಗುವ ಪಕ್ಕದಲ್ಲೇ ಹೊಸ ಬಡಾವಣೆ ಇದೆ. ಈ ಬಡಾವಣೆಯಲ್ಲಿ ಹೆಚ್ಚಾಗಿ ಲಿಂಗಾಯತರು, ಕುಂಬಾರರು ವಾಸಿಸುತ್ತಿದ್ದಾರೆ. ಈ ಬಡಾವಣೆ ಸೇರಿದಂತೆ ಅಕ್ಕಪಕ್ಕದ ಸುಮಾರು ನೂರಾರು ಮನೆಗಳಿಗೆ ಕಾವೇರಿ ಕುಡಿಯುವ ನೀರಿನ ನಲ್ಲಿ ಸಂಪರ್ಕವೇ ಇಲ್ಲ.
Related Articles
Advertisement
ಒಂದು ಮನೆಗೂ ನಲ್ಲಿ ಸಂಪರ್ಕವಿಲ್ಲ: ನಮ್ಮ ಬಡಾವಣೆ ವಾರ್ಡ್ ನಂ. 1ಕ್ಕೆ ಸೇರಿದೆ. ಪಕ್ಕದ ಬಡಾವಣೆಗಳ ಮನೆಗಳಿಗೆ ಕಾವೇರಿ ನೀರು ಸರಬರಾಜಾಗುತ್ತದೆ. ನಮ್ಮ ಬಡಾವಣೆಗೆ ಕಾವೇರಿ ನೀರು ಸರಬರಾಜಿಲ್ಲ. ಕನಿಷ್ಠ ಬೋರ್‌ವೆಲ್ ನೀರು ಕೂಡ ಮನೆಗೆ ಸಂಪರ್ಕ ಇಲ್ಲ. ನಾವು ಬಿಂದಿಗೆ ಹಿಡಿದು ಹೊತ್ತು ನೀರು ಸಂಗ್ರಹಿಸಬೇಕಾಗಿದೆ ಎಂದು ಬಡಾವಣೆಯ ನಿವಾಸಿ ಗಂಗೆ ತಮ್ಮ ಅಳಲು ತೋಡಿಕೊಂಡರು.
ಅಧಿಕಾರಿಗಳ ನಿರ್ಲಕ್ಷ್ಯ: ನಿವಾಸಿ ಬಸವಣ್ಣ ಮಾತನಾಡಿ, ನಗರಸಭೆಗೆ ನಮ್ಮಿಂದ ಮನೆ ಕಂದಾಯ, ನೀರಿನ ಕಂದಾಯ ಎಲ್ಲ ಕಟ್ಟಿಸಿಕೊಳ್ಳುತ್ತಾರೆ. ಆದರೆ ಕಾವೇರಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಲ್ಲ ಎಂದು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರಸಭಾ ಸದಸ್ಯರಿಗೆ, ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಟ್ಯಾಂಕ್ ನಿರ್ಮಾಣವಾಗಿಲ್ಲ. ಹಾಗಾಗಿ ನೀರು ಪೂರೈಸುತ್ತಿಲ್ಲ. ರೈಸಿಂಗ್ ಮೇನ್‌ನಿಂದಲಾದರೂ ಸಂಪರ್ಕ ಕಲ್ಪಿಸಿ ನೀರು ಪೂರೈಸಿ ಎಂದರೂ ನಿರ್ಲಕ್ಷ್ಯ ವಹಿಸಲಾಗಿದೆ. ನಮ್ಮ ಬವಣೆ ಕೇಳುವವರಾರು? ಎಂದು ಪ್ರಶ್ನಿಸಿದರು.
ನಮ್ಮ ಬಡಾವಣೆಯಲ್ಲಿ ಕುಡಿಯುವ ನೀರಿಗೆ ಬಹಳ ತೊಂದರೆಯಾಗಿದೆ. ಈಗ ಬೇಸಿಗೆ ಬೇರೆ ಇದ್ದು, ಬಿರು ಬಿಸಲಿನಲ್ಲಿ ನೀರು ಹೊತ್ತು ತರುವುದು ಸಹ ಕಷ್ಟದ ಕೆಲಸವಾಗಿದೆ. ಹತ್ತಿರದಲ್ಲೇ ಕಾವೇರಿ ನೀರು ಸರಬರಾಜಾಗುವ ಕೊಳವೆ ಹಾದು ಹೋಗಿದೆ. ಟ್ಯಾಂಕ್ ನಿರ್ಮಿಸಿ, ಅಥವಾ ನೇರ ಸಂಪರ್ಕ ನೀಡಿ ನಮ್ಮ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ನಗರಸಭೆ ಅಧಿಕಾರಿಗಳು ಕಲ್ಪಿಸಿಕೊಡಬೇಕು. -ಶಿವಣ್ಣ, ಹೊಸ ಬಡಾವಣೆ, ಸೋಮವಾರಪೇಟೆ. ಸೋಮವಾರಪೇಟೆ ಹೊಸ ಬಡಾವಣೆಗೆ ಕಾವೇರಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಅಥವಾ ಅಲ್ಲಿರುವ ಬೋರ್‌ವೆಲ್ ನೀರಿನ ಸಂಪರ್ಕವನ್ನೇ ಮನೆಗಳಿಗೆ ನಲ್ಲಿಯ ಮೂಲಕ ನೀಡಲಾಗುವುದು.
-ಎಂ. ರಾಜಣ್ಣ, ಆಯುಕ್ತ, ನಗರಸಭೆ.