ನೆಲಮಂಗಲ: ಬೆಟ್ಟದ ತಪ್ಪಲಿನಲ್ಲಿ ಇತಿಹಾಸ ಪ್ರಸಿದ್ಧ ದೇವಾಲಯ, ಹನಿ ನೀರಿಲ್ಲದೇ ಒಣಗಿ ನಿಂತಿರುವ ಕೊಳವೆ ಬಾವಿಗಳು, ನೆಲ್ಲಿಗಳು ಇದು ತಾಲೂಕಿನ ಶಿವಗಂಗೆ ಗ್ರಾಮದಲ್ಲಿ ಕಂಡು ಬರುವ ದೃಶ್ಯಗಳು. ದಕ್ಷಿಣ ಕಾಶಿ ಎಂದೇ ಕರೆಯುವ ಗವಿಗಂಗಾಧರೇಶ್ವರ ಪುಣ್ಯಕ್ಷೇತ್ರದಲ್ಲಿ (ಶಿವಗಂಗೆ ಬೆಟ್ಟ) ಸಾಕ್ಷಾತ್ ಪರಮಶಿವನ ಜೊತೆಯಲ್ಲಿ ಗಂಗೆಯೂ ನೆಲೆಸಿದ್ದು, ಈ ಗ್ರಾಮದಲ್ಲಿ ಇದುವರೆಗೂ ನೀರಿಗಾಗಿ ಬರ ಬಂದಿರಲಿಲ್ಲ. ಆದರೆ, ಈ ಬಾರಿಯ ಬಿರು ಬೇಸಿಗೆಯಿಂದ ಇದ್ದ ನೀರು ಇಂಗಿಹೋಗಿದೆ.
ಗ್ರಾಮದ ಪ್ರತಿ ಮನೆಯಲ್ಲೂ ಬಾವಿಗಳಿವೆ. ಆದರೆ, ಯಾವುದರಲ್ಲೂ ಹನಿನೀರಿಲ್ಲ. ಬಿಸಿಲಿನ ಪ್ರತಾಪಕ್ಕೆ ನೀರು ಸಿಗದೆ ಗ್ರಾಮಸ್ಥರು ಜೀವ ಜಲಕ್ಕಾಗಿ ಪರದಾಡುತ್ತಿದ್ದಾರೆ. ದೇವರ ಪೂಜೆಗೂ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಗ್ರಾಪಂನಿಂದ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಆದರೆ, ಅದೂ ಸಾಕಾಗದೆ ಜನರು ಹಣ ಕೊಟ್ಟು ಟ್ಯಾಂಕರ್ ನೀರು ಖರೀದಿ ಮಾಡಿ ದಿನನಿತ್ಯ ಬಳಸುವಂತಾಗಿದೆ.
ಈ ಗ್ರಾಮದಲ್ಲಿ ಸಾಕ್ಷಾತ್ ಗಂಗೆಮಾತೆ ವಾಸವಾಗಿದ್ದಾಳೆಂದು ಹೇಳಲಾಗುತ್ತೆ. ಈ ಪುಣ್ಯಕ್ಷೇತ್ರದಲ್ಲಿ ಎಂದೂ ನೀರು ಬತ್ತಿಹೋಗಿರುವ ಉದಾಹರಣೆಗಳೇ ಇಲ್ಲ. ಪೂರ್ವಿಕರ ಕಾಲದಿಂದಲೂ ಈ ಗ್ರಾಮದಲ್ಲಿನ ಪ್ರತಿ ಮನೆಯಲ್ಲಿಯೂ ಬಾವಿಗಳಿದ್ದು, ಕೈಗೆಟಕುವಷ್ಟು ನೀರು ತುಂಬಿ ತುಳುಕುತ್ತಿತ್ತು. ಆದರೆ, ಈ ಬಾರಿ ಭೀಕರ ಬರಗಾಲದ ಕಾರಣ ನೀರಿನ ಅಭಾವ ಉಂಟಾಗಿದೆ. ಗ್ರಾಮಸ್ಥರಲ್ಲದೇ, ದೇವಾಲಯಕ್ಕೆ ಬರುವಂತಹ ಭಕ್ತರು ನೀರಿಗಾಗಿ ಪರದಾಡುವಂತಾಗಿದೆ.
ಸದ್ಯ ಗ್ರಾಮಸ್ಥರು ಟ್ಯಾಂಕರ್ ಮೂಲಕ ಹಣಕೊಟ್ಟು ನೀರು ತರಿಸಿಕೊಳ್ಳುತ್ತಿದ್ದು, ಪ್ರತಿ ತಿಂಗಳು ನೀರಿಗಾಗಿ ಎರಡು ಮೂರು ಸಾವಿರ ರೂ.ಖರ್ಚು ಮಾಡುತ್ತಿದ್ದಾರೆ, ಗ್ರಾಪಂ ಅಧಿಕಾರಿಗಳು ದೇವಾಲಯಕ್ಕೆ ಬರುವಂತಹ ಭಕ್ತರಿಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಬೇಸಿಗೆ ಗಂಗೆ ವಾಸವಿರುವ ಶಿವಗಂಗೆ ಪುಣ್ಯ ಕ್ಷೇತ್ರದಿಂದಲೇ ಗಂಗೆ ಮಾಯವಾಗುವಂತೆ ಮಾಡಿದೆ, ಆದಷ್ಟು ಬೇಗ ವರುಣ ಕರುಣೆ ತೋರಲಿ ಅಂತ ಗ್ರಾಮಸ್ಥರು ಗವಿ ಗಂಗಾಧರೇಶ್ವರನನ್ನು ಜಪಿಸುತ್ತಿದ್ದಾರೆ.