Advertisement

ವಿದ್ಯುತ್‌ ಇದ್ದರೆ ನೀರು: ಇಲ್ಲದಿದ್ದರೆ ಹನಿ ನೀರಿಗೂ ಹಾಹಾಕಾರ

10:12 AM Mar 18, 2020 | mahesh |

ಸುಳ್ಯ ನಗರದಲ್ಲಿ ನೀರಿಗಾಗಿ ಮರಳು ಕಟ್ಟ, ಕೊಳವೆ ಬಾವಿಗಳ ಅವಲಂಬನೆ ಮಾಡಬೇಕಿದೆ. ನಗರದಲ್ಲಿ 4,100ಕ್ಕೂ ಅಧಿಕ ಕುಟುಂಬಗಳು ಇವೆ. ನದಿ, ಕೊಳವೆಬಾವಿ, ಮನೆ ಬಾವಿ ಇಲ್ಲಿನ ನೀರಿನ ಮೂಲ.
ಸುಳ್ಯ: ನಗರದ ಅಂಚಿನಲ್ಲೇ ಹರಿಯುವ ಪಯಸ್ವಿನಿ ನದಿ ಕಳೆದ ಬಾರಿಗಿಂತ ಉತ್ತಮ ಸ್ಥಿತಿಯಲ್ಲಿದ್ದರೂ ನೀರಿದೆ ಎಂದು ನಗರ ನಿವಾಸಿಗಳು ನಿಟ್ಟುಸಿರುವ ಬಿಡುವ ಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಇಲ್ಲಿ ವಿದ್ಯುತ್ತಿದ್ದರೆ ಮಾತ್ರ ನೀರು; ಇಲ್ಲದಿದ್ದರೆ ಹನಿ ನೀರಿಗೂ ಹಾಹಾಕಾರ.

Advertisement

ವಿದ್ಯುತ್‌ ಕೈಕೊಟ್ಟರೆ ಮನೆ-ಮನೆಗೆ ನೀರು ಹರಿಸುವುದು ಅಸಾಧ್ಯವಾಗುತ್ತಿದೆ. ಇದಕ್ಕೆ ಕಾರಣ ಪಂಪ್‌ ಆಧಾರಿತ ಮರಳು ಕಟ್ಟ ಮತ್ತು ಕೊಳವೆಬಾವಿ ನೀರನ್ನೇ ನಂಬಿರುವುದು. ಹಾಗಾಗಿ ವಿದ್ಯುತ್‌ ಕೈ ಕೊಡದಿರಲಿ ಅನ್ನುವುದೇ ಇಲ್ಲಿನವರ ಮೊದಲ ಬೇಡಿಕೆ.

ಹೇಗಿದೆ ಸ್ಥಿತಿ?
ನಗರದಲ್ಲಿ 4,100ಕ್ಕೂ ಅಧಿಕ ಕುಟುಂಬಗಳು ಇವೆ. ಇಲ್ಲಿನವರಿಗೆ ಪಯಸ್ವಿನಿ ನದಿ ಮತ್ತು ಕೊಳವೆಬಾವಿ, ಕೆಲವೆಡೆ ಮನೆ ಬಾವಿ ನೀರಿನ ಮೂಲಗಳು. ಈ ಬಾರಿ ಪಯಸ್ವಿನಿ ನದಿ ಇನ್ನೂ ಪೂರ್ತಿಯಾಗಿ ಬತ್ತಿಲ್ಲ. ಕಲ್ಲುಮುಟ್ಲು ಬಳಿ ನಿರ್ಮಿಸಲಾದ ಮರಳು ಕಟ್ಟದಲ್ಲಿ ನೀರು ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಸಂಗ್ರಹ ಉತ್ತಮವಾಗಿಯೇ ಇದೆ. ನಗರದ ನೀರಿನ ಬಳಕೆ ಅಂಕಿ-ಅಂಶ ಆಧಾರದಲ್ಲಿ ದಿನವೊಂದಕ್ಕೆ ವ್ಯಕ್ತಿಯೊರ್ವನಿಗೆ 75 ರಿಂದ 80 ಲೀ. ನೀರು ಪೂರೈಕೆ ಆಗುತ್ತಿದ್ದು, ಸುಮಾರು 40ರಿಂದ 50 ಲೀ. ಕೊರತೆ ಇದೆ.

ಕ್ರಿಯಾಯೋಜನೆ
ನಗರ ಪಂಚಾಯತ್‌ನಲ್ಲಿ ಬೇಸಗೆ ನಿರ್ವಹಣೆಗೆಂದು ಪ್ರತ್ಯೇಕ ಅನುದಾನ ಮೀಸಲಿರಿಸುವುದಿಲ್ಲ. ಈ ಬಾರಿಯೂ ಪಯಸ್ವಿನಿ ನದಿಯ ಕಲ್ಲುಮುಟ್ಲು ಬಳಿ 5 ಲಕ್ಷ ರೂ. ವೆಚ್ಚದಲ್ಲಿ ಮರಳು ಕಟ್ಟ ನಿರ್ಮಿಸಲಾಗಿದೆ. ಬರ ಪರಿಹಾರ ಯೋಜನೆಯಡಿ 27 ಲಕ್ಷ ರೂ. ವೆಚ್ಚದಲ್ಲಿ ಪೈಪ್‌ ಲೈನ್‌ ಮಾರ್ಗ, ಕೊಳವೆಬಾವಿ ಕೊರೆಯಲಾಗಿದೆ ಎಂದು ನ.ಪಂ. ಎಂಜಿನಿಯರ್‌ ಇಲಾಖೆ ಮಾಹಿತಿ ನೀಡಿದೆ.

ಶಾಶ್ವತ ಯೋಜನೆ ಇಲ್ಲ
ಪಯಸ್ವಿನಿ ನದಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಹಲವು ವರ್ಷಗಳ ಹಿಂದೆ 65.5 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಅನುಷ್ಠಾನಿಸುವ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆ ಆಗಿದ್ದರೂ ಅದಕ್ಕೆ ಅನುದಾನ ಬಿಡುಗಡೆ ಆಗಿಲ್ಲ. ಹಳೆ ಕಾಲದ ಶುದ್ಧೀಕರಣ ಘಟಕವು ಸಮರ್ಪವಾಗಿಲ್ಲದ ಕಾರಣ ಶುದ್ಧವಿಲ್ಲದ ನೀರು ನಳ್ಳಿ ಮೂಲಕ ಮನೆ ಸೇರುತ್ತಿದೆ. ಈ ಬಗ್ಗೆ ನಗರ ನಿವಾಸಿಗಳ ಅಳಲಿಗೆ ಸ್ಪಂದನೆ ಸಿಕ್ಕಿಲ್ಲ. ಇದಕ್ಕೆ ಪರಿಹಾರ ಕಲ್ಪಿಸಬೇಕಿದ್ದ ಶಾಶ್ವತ ಕುಡಿಯುವ ನೀರಿನ ಯೋಜನೆ ಬಗ್ಗೆ ವಿಚಾರಿಸಿದರೆ, ಕಡತ ಸರಕಾರದ ಹಂತದಲ್ಲಿದೆ ಎಂಬ ಉತ್ತರವಷ್ಟೇ ಬರುತ್ತಿದೆ. ಹೀಗಾಗಿ ಮರಳು ಚೀಲ ಕಟ್ಟವೇ ಇಲ್ಲಿಗೆ ಗತಿಯಾಗಿದೆ.

Advertisement

ಸಿದ್ಧತೆ ನಡೆದಿದೆ
ಬೇಸಗೆಯ ಕುಡಿಯುವ ನೀರಿಗೆಂದು ಪ್ರತ್ಯೇಕ ಅನುದಾನ ಇಲ್ಲ. ಲಭ್ಯ ಇರುವ ಅನುದಾನದಲ್ಲೇ ಅಗತ್ಯವಿದ್ದಾಗ ಬಳಸಲಾಗುತ್ತದೆ. ಮರಳು ಕಟ್ಟ ಬಳಸಿ ನೀರು ಸಂಗ್ರಹಿಸಲಾಗಿದೆ.
– ಮತ್ತಡಿ, ಮುಖ್ಯಾಧಿಕಾರಿ ನ.ಪಂ., ಸುಳ್ಯ

27 ಲಕ್ಷ ರೂ. ಬಳಕೆ
ಪೈಪ್‌ಲೈನ್‌, ಕೊಳವೆಬಾವಿಗೆ 27 ಲಕ್ಷ ರೂ. ಅನುದಾನ ವ್ಯಯಿಸಲಾಗಿದೆ. ಬಾಡಿಗೆ ರೂಪದಲ್ಲಿ ಟ್ಯಾಂಕರ್‌ ಕಾದಿರಿಸಲಾಗಿದೆ. ವಿದ್ಯುತ್‌ ಸಮರ್ಪಕವಾಗಿದ್ದರೆ ನೀರಿನ ಪೂರೈಕೆಗೆ ತೊಂದರೆ ಉಂಟಾಗದು.
– ಶಿವಕುಮಾರ್‌, ಎಂಜಿನಿಯರ್‌, ನ.ಪಂ. ಸುಳ್ಯ

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next