Advertisement

ಓಡುವ ಮಳೆ ನೀರನ್ನು ಹರಿಯುವಂತೆ ಮಾಡಿದ ತರುಣ

08:17 PM Jul 12, 2017 | Karthik A |

ಸವಣೂರು: ಕೃಷಿ ಅಭಿಯಾನ, ಕೃಷಿ ಮಾಹಿತಿ ಕಾರ್ಯಾಗಾರ, ಸಭೆ ಸಮಾರಂಭಗಳಲ್ಲಿ ನೀರಿನ ಸಂರಕ್ಷಣೆ ಕುರಿತಾದ ಭಾಷಣ, ಪತ್ರಿಕೆಗಳಲ್ಲಿ ನೀರಿನ ಮಹತ್ವ, ನೀರಿಂಗಿಸುವಿಕೆ ಕುರಿತಾದ ವರದಿಗಳು ನಿರಂತರವಾಗಿ ಪ್ರಕಟವಾಗುತ್ತವೆ. ಆದರೆ, ನೀರಿಂಗಿಸುವಿಕೆಯ ಬಗೆಗೆ ನೈಜ ಕಾಳಜಿ ಯಾರಿಗಿದೆ ಅನ್ನುವುದನ್ನು ಮಾತ್ರ ತಿಳಿಯುವುದು ಕಷ್ಟ. ಹಿರಿಯರು ಹೇಳುವ ಮಾತೊಂದಿತ್ತು, ದುಡ್ಡನ್ನು ನೀರಿನಂತೆ ಖರ್ಚು ಮಾಡಬೇಡಿ ಎಂದು. ಮುಂದಿನ ದಿನಗಳಲ್ಲಿ ಅದು ನೀರನ್ನು ದುಡ್ಡಿನಂತೆ ಖರ್ಚು ಮಾಡಬೇಡಿ ಎಂದು ಬದಲಾಗಬಹುದು. ಅದಕ್ಕೆಂದೇ ತನ್ನ ನೆಲೆಯಲ್ಲಿ ನೀರಿಂಗಿಸುವಿಕೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಯೋಗೀಶ್‌ ಕಾಯರ್ಗ.

Advertisement


ಸುರಿಯುವ ಮಳೆಯನ್ನು ಹಿಡಿಯುತ್ತಿರುವ ಸವಣೂರು ಗ್ರಾಮದ ಯೋಗೀಶ್‌ ಕಾಯರ್ಗ, ತಮ್ಮ ಮನೆಯ ಛಾವಣಿಯಿಂದ ಹರಿಯುವ ಮಳೆ ನೀರಿಗೆ ಪೈಪ್‌ ಅಳವಡಿಸಿ ಅಂಗಳದಲ್ಲಿರುವ ಬಾವಿಗೆ ಹರಿಸಿ ನೀರು ಸಂರಕ್ಷಿಸುತ್ತಿದ್ದಾರೆ. ಇದು ಅನೇಕರಿಗೆ ನೀರಿಂಗಿಸಲು ಪ್ರೇರಣೆ, ಸ್ಫೂರ್ತಿ ನೀಡಿದೆ. ಪೈಪ್‌ ಅಳವಡಿಸಿ ಸುಲಭ ವಿಧಾನದ ಮೂಲಕ ಛಾವಣಿ ನೀರನ್ನು ನೇರವಾಗಿ ಬಾವಿಗಿಳಿಸಬಹುದು ಎಂಬ ಯೋಚನೆ ಹೊಳೆಯಿತು. ಇದರಿಂದ ಅಂಗಳ ತುಂಬೆಲ್ಲ ನೀರು ಹರಿಯುವುದು ತಪ್ಪಿತು. ಕೃಷಿಯಲ್ಲಿ ನನಗೆ ಚಿಕ್ಕಂದಿನಿಂದಲೇ ಅಪಾರ ಆಸಕ್ತಿ. ನಮ್ಮ ತೋಟಗಳಲ್ಲಿ ಅನೇಕ ಇಂಗುಗುಂಡಿಗಳನ್ನು ನಿರ್ಮಿಸಿ ನೀರಿಂಗಿಸುತ್ತಿದ್ದೇನೆ. ಈಗಲೂ ಸಾವಯವ ಕೃಷಿ ಪದ್ಧತಿಯನ್ನೇ ಅವಲಂಬಿಸಿದ್ದು ಭತ್ತ, ತರಕಾರಿ ಬೆಳೆಯುತ್ತಿದ್ದೇವೆ ಎನ್ನುತ್ತಾರೆ ಯೋಗೀಶ್‌.

ಕೃಷಿಯಲ್ಲೇ ಖುಷಿ
ತನ್ನ ಪ್ರೌಢಶಾಲಾ ದಿನಗಳಿಂದ ತಂದೆಗೆ ಕೃಷಿ ಕಾರ್ಯಗಳಲ್ಲಿ ಸಹಕರಿಸುತ್ತಿದ್ದ ಯೋಗೀಶ್‌, ಬೇಸಾಯದ ಕಡೆ ಒಲವು ಹೊಂದಿದ್ದರು. ತರಕಾರಿಗಳನ್ನು ಬೆಳೆಸುತ್ತಿದ್ದರು. ಪ್ರಸ್ತುತ ಪುತ್ತೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರೂ ತಮ್ಮ ಬಿಡುವಿನ ವೇಳೆಯನ್ನು ಕೃಷಿ ಕಾರ್ಯಗಳಿಗೆ ಮೀಸಲಿಟ್ಟಿದ್ದಾರೆ. ರವಿವಾರವಂತೂ ಇಡೀ ದಿನ ಗದ್ದೆ – ತೋಟದಲ್ಲೇ ಕೆಲಸ. ಈಗಲೂ ಭತ್ತದ ಬೇಸಾಯವನ್ನು ಕೈಬಿಡದಿರುವುದೇ ಇವರ ಕೃಷಿ ಪ್ರೀತಿಗೆ ನಿದರ್ಶನ.

– ಪ್ರವೀಣ್‌ ಕುಮಾರ್‌


ಮನೆ ಛಾವಣಿಗೆ ಪೈಪ್‌ ಅಳವಡಿಸಿರುವುದು.

Advertisement

Udayavani is now on Telegram. Click here to join our channel and stay updated with the latest news.

Next