Advertisement

ಸದ್ಯಕ್ಕಿಲ್ಲ ನೀರು-ಮೇವುಸಮಸ್ಯೆ; ಮುಂದೆ..?

06:21 AM Feb 25, 2019 | Team Udayavani |

ಹೊನ್ನಾಳಿ: ತಾಲೂಕು ಕೇಂದ್ರ ಮತ್ತು ತಾಲೂಕಿನ ಅನೇಕ ಗ್ರಾಮಗಳು ತುಂಗಭದ್ರಾ ನದಿ ಸಮೀಪದಲ್ಲಿರುವುದರಿಂದ ವರ್ಷದ ಬಹುತೇಕ ಸಮಯ ತಾಲೂಕಿನಲ್ಲಿ ನೀರಿನ ಕೊರತೆ ಕಾಡುವುದಿಲ್ಲ. ಆದರೆ ಬೇಸಿಗೆ ಆರಂಭವಾಗುತ್ತಿದ್ದಂತೆ ತಾಲೂಕಿನ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ.

Advertisement

ತಾಲೂಕಿನ ಹೊನ್ನೂರು ಒಡ್ಡರಹಟ್ಟಿ, ಚೀಲಾಪುರ, ತರಗಹಳ್ಳಿ, ಕ್ಯಾಸಿನಕೆರೆ, ಸಿಂಗಟಗೆರೆ, ಬನ್ನಿಕೋಡು, ಮುಕ್ತೇನಹಳ್ಳಿ, ಕೆಂಗಲಹಳ್ಳಿ, ಅರಕೆರೆ ಎಕೆ ಕಾಲೋನಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಪ್ರಾರಂಭವಾಗಿದೆ. ಚೀಲಾಪುರದ ಸಾರ್ವಜನಿಕ ಕೊಳವೆ ಬಾವಿಗಳಲ್ಲಿ ನೀರಿನ ಕೊರತೆಯಾಗಿದ್ದು ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ತಾಲೂಕು ಆಡಳಿತ ಮಾಡಿದೆ.

ಕಳೆದ ಸಾಲಿನಲ್ಲಿ ಮುಂಗಾಗಿ ಉತ್ತಮವಾಗಿ ಆರಂಭವಾದರೂ ನಂತರ ಕೈಕೊಟ್ಟ ಕಾರಣ ಹಾಗೂ ಹಿಂಗಾರಿ ಸಂಪೂರ್ಣವಾಗಿ ಕೈಕೊಟ್ಟ ಕಾರಣ ಕೆರೆ ತುಂಬುವಷ್ಟು ಮಳೆಯಾಗದೇ ಅರ್ಧಂಬರ್ಧ ತುಂಬಿದ್ದ ಮಳೆಯಾಶ್ರಿತ ಕೆರೆಗಳು ಈಗಾಗಲೇ ಬತ್ತುವ ಹಂತ ತಲುಪಿವೆ. ಹೀಗಾಗಿ ಕೊಳವೆಬಾವಿಗಳಲ್ಲಿನ ನೀರು ಕೂಡ ಬತ್ತಿವೆ.

ತಾಲೂಕಿನಲ್ಲಿ ಅಳವಡಿಸಲಾದ 85ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೊಳವೆ ಬಾವಿಗಳಿಂದ ಅವುಗಳಿಗೆ ನೀರು ಪೂರೈಸಲಾಗುತ್ತದೆ. ಈ ಕೊಳವೆಬಾವಿಗಳ ನೀರು ಬತ್ತಿದರೆ ಸಮಸ್ಯೆ ಶುರುವಾಗಲಿದೆ ಎಂದು ಗ್ರಾಮಗಳ ಜನತೆ ಹೇಳುತ್ತಾರೆ. 

ತಾಲೂಕಿನಲ್ಲಿ 25 ಚೆಕ್‌ಡ್ಯಾಂಗಳಿರುವುದು ಕೂಡ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣದಿರಲು ಒಂದು ಕಾರಣ. ತುಂಗಭದ್ರಾ ನದಿಗೆ ಹೊಂದಿಕೊಂಡಿರುವ ಮರಿಗೊಂಡನಹಳ್ಳಿ, ಚೀಲೂರು, ಹರಳಹಳ್ಳಿ, ದಿಡಗೂರು, ಸಾಸ್ವೆಹಳ್ಳಿ, ಉಜ್ಜಿನಿಪುರ, ಹೊನ್ನಾಳಿ, ಬಳ್ಳೇಶ್ವರ, ಬೇಲಿಮಲ್ಲೂರು, ಕೋಟೆಮಲ್ಲೂರು ಗ್ರಾಮಗಳ ಜನ ನದಿ ನೀರನ್ನು ಬಳಸುತ್ತಿದ್ದಾರೆ.

Advertisement

ಬರ ಕಾಮಗಾರಿಗೆ 50 ಲಕ್ಷ ರೂ.: ಹೊನ್ನಾಳಿ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲಾಗಿದೆ. ಬರ ಕಾಮಗಾರಿಗಳಿಗಾಗಿ 50 ಲಕ್ಷ ರೂ. ಬಿಡುಗಡೆಯಾಗಿದೆ. ತಾಲೂಕಿನಲ್ಲಿ ಮೇವಿನ ಸಮಸ್ಯೆ ಇಲ್ಲದ ಕಾರಣ ಅನುದಾನವನ್ನು ಕೊಳವೆಬಾವಿ ತೋಡಿಸಲು ಹಾಗೂ ಪೈಪ್‌ಲೈನ್‌ ಅಳವಡಿಸಲು ಬಳಸಲಾಗುತ್ತಿದೆ. ತಾಲೂಕಿನಲ್ಲಿ ತೀವ್ರ ತೊದರೆಗೊಳಗಾದ ಗ್ರಾಮಗಳನ್ನು ಗುರ್ತಿಸಿ ಈಗಾಗಲೇ 30 ಕೊಳವೆ ಬಾವಿಗಳನ್ನು ತೋಡಿಸಲಾಗಿದೆ ಎಂದು ತಾ.ಪಂ ಇಒ ಕೆ.ಸಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.

ತಾಲೂಕಿನಲ್ಲಿ ನೀರು ಮತ್ತು ಮೇವಿನ ಸಮಸ್ಯೆಯಾಗಬಾರದು ಎಂದು ಈಗಾಗಲೇ 6 ಬಾರಿ ಅಧಿಕಾರಿಗಳ ಸಭೆ ನಡೆಸಿ ಗ್ರಾಮಗಳ ಸಮಸ್ಯೆ ಅರಿಯಲು ಸೂಚಿಸಿದ್ದೇನೆ. ಬೇಸಿಗೆಯಲ್ಲಿ ಉಂಟಾಗಬಹುದಾದ ನೀರಿನ ಸಮಸ್ಯೆ ಬಗೆಹರಿಸಲು ಎಲ್ಲಾ ಮುಂಜಾಗೃತಾ ಕ್ರಮ ಕೈಗೊಳ್ಳಲಾಗುವುದು.  
ಎಂ.ಪಿ. ರೇಣುಕಾಚಾರ್ಯ, ಶಾಸಕರು, ಹೊನ್ನಾಳಿ ಕ್ಷೇತ್ರ.

ಕಳೆದ ವರ್ಷ ಮುಂಗಾರು ಮಳೆ ಉತ್ತಮವಾಗಿ ಹಿಂಗಾರು ಮಳೆ ಕೈಕೊಟ್ಟ ಕಾರಣ ಬೇಸಿಗೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರಿನ ಸಮಸ್ಯೆ ಉದ್ಭವಿಸಬಹುದು. ಸರ್ಕಾರ ಎಲ್ಲಾ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. 
 ಕಡದಕಟ್ಟೆ ಜಗದೀಶ್‌, ತಾಲೂಕು ರೈತ ಸಂಘದ ಅಧ್ಯಕ್ಷ

ಹೊನ್ನಾಳಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದ್ದು ಬರ ಪರಿಹಾರ ನಿಧಿಯಲ್ಲಿ ಸಮಸ್ಯೆ ಇರುವ ಹಳ್ಳಿಗಳಲ್ಲಿ ಕೊಳವೆಬಾವಿಗಳನ್ನು ತೋಡಲು ಸೂಚಿಸಲಾಗಿದೆ. ಗ್ರಾಮದಲ್ಲಿ ನೀರು ಲಭ್ಯವಿಲ್ಲದಿದ್ದರೆ ಖಾಸಗಿಯಾಗಿ ನೀರು ಪಡೆದು ನೀರೊದಗಿಸುವ ಕೆಲಸ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಮೇವಿನ ಸಮಸ್ಯೆ ಇಲ್ಲ.
 ತುಷಾರ ಬಿ.ಹೊಸೂರು, ತಹಶೀಲ್ದಾರ್‌, ಹೊನ್ನಾಳಿ

„ಎಂ.ಪಿ.ಎಂ ವಿಜಯಾನಂದಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next