Advertisement

ನೀರಿಗಾಗಿ ತಹಶೀಲ್ದಾರ್‌ ಕಚೇರಿ ಗಾಜು ಪುಡಿ ಪುಡಿ!

03:45 AM Jan 28, 2017 | Team Udayavani |

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಪುರಾತನ ವಿಜಯನಗರ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ಸಾವಿರಾರು ರೈತರು ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರವೇಶ ದ್ವಾರ ಹಾಗೂ ಕಿಟಿಕಿ ಗಾಜುಗಳನ್ನು ಧ್ವಂಸಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಇಲ್ಲಿನ ರೈತ ಭವನದಿಂದ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ಹೊರಟ ರೈತರು ತಹಶೀಲ್ದಾರ್‌ ಕಚೇರಿ ಆವರಣದ ಒಳಗೆ ಹೋಗಲು ಮುಂದಾದಾಗ ಅವರನ್ನು ಪೊಲೀಸರು ತಡೆದರು. ಆಗ ಆಕ್ರೋಶಗೊಂಡ ರೈತರು ಏಕಾಏಕಿ ಪ್ರವೇಶ ದ್ವಾರ ಮುರಿದು ಒಳ ನುಗ್ಗಿ ಕಚೇರಿಯ ಗಾಜು ಪುಡಿ ಪುಡಿ ಮಾಡಿ, ಅಲ್ಲಿಯೇ ಇದ್ದ ಹೂಕುಂಡಗಳನ್ನು ಪುಡಿಗೈದರಲ್ಲದೆ ಕುರ್ಚಿಗಳನ್ನು ಬಿಸಾಡಿದರು. ನೀರು ಬಿಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದು ಅಲ್ಲಿಯೇ ಕುಳಿತು ಧರಣಿ ಆರಂಭಿಸಿದರು.
ಉಪವಿಭಾಗಾಧಿಕಾರಿ ಪ್ರಶಾಂತ ಕುಮಾರ ಮಿಶ್ರಾ ಹಾಗೂ ತಹಶೀಲ್ದಾರ ಎಚ್‌. ವಿಶ್ವನಾಥ ಅವರು ರೈತರ ಮನವೊಲಿಕೆಗೆ ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಪ್ರತಿಭಟನಾನಿರತರು ಕಾಲುವೆಗೆ ನೀರು ಬಿಟ್ಟು ಬಳಿಕ ಮಾತುಕತೆಗೆ ಬನ್ನಿ ಎಂದು ಆಗ್ರಹಿಸಿದರು.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರನ್ನು ಭೇಟಿ ಮಾಡಿ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಸಮಸ್ಯೆಗೆ ಸ್ಪಂದಿಸಿದ್ದ ಸಚಿವರು ಕೃಷಿ ಜಮೀನಿಗೆ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ನೀರು ಬಿಟ್ಟಿಲ್ಲ. ಹೀಗಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ಪ್ರತಿಭಟನಾನಿರತರು ತಿಳಿಸಿದರು.

ರೈತರ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಶಾಸಕ ಆನಂದಸಿಂಗ್‌, ರೈತರಿಗೆ  ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ. ನೀರು ಹರಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ. ಬಚಾವತ್‌ ಪದ್ಧತಿ ಪ್ರಕಾರ ನಿರಂತರ ನೀರು ದೊರೆಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next