Advertisement

ಕೆಎಂಎಫ್ನಿಂದ ಜಲಮೇವು

12:31 PM Sep 20, 2017 | |

ಹುಬ್ಬಳ್ಳಿ: ನಿರಂತರ ಬರದಿಂದಾಗಿ ರೈತರು ತತ್ತರಿಸಿದ್ದಾರೆ. ಮೇವಿನ ಕೊರತೆಯಿಂದ ದನಕರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಮೇವು ಅಲಭ್ಯತೆಯಿಂದ ಗೋವುಗಳನ್ನು ಮಾರಾಟ ಮಾಡುವುದನ್ನು ತಡೆಯುವ ಉದ್ದೇಶದಿಂದ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ರೈತರಿಗೆ ಮಣ್ಣು ಬಳಸದೇ ಕೇವಲ ನೀರಿನಿಂದ ಮೇವು ಬೆಳೆಸುವ ಹೈಡ್ರೋಪ್ರಾನಿಕ್ಸ್‌ ಪದ್ಧತಿಗೆ ಉತ್ತೇಜನ ನೀಡಲು ಮುಂದಾಗಿದೆ. 

Advertisement

ಉತ್ತರ ಕರ್ನಾಟಕದಲ್ಲಿ ಮೇವಿನ ಕೊರತೆಯಿಂದ ರೈತರು ಹಸು, ಎತ್ತು, ಎಮ್ಮೆಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಮೇವಿನ ಕೊರತೆ ನೀಗಿಸಲು ರೈತರಿಗೆ ಹೊಸ ತಂತ್ರಜ್ಞಾನ ತಲುಪಿಸಲು ಕೆಎಂಎಫ್ ನಿರ್ಧರಿಸಿದೆ. ಸಾಮಾನ್ಯವಾಗಿ ಮೇವು ಬೆಳೆಯಲು ಕನಿಷ್ಟ 90 ದಿನಗಳು ಬೇಕು.

ಆದರೆ ನೂತನ ತಂತ್ರಜ್ಞಾನದಿಂದ ಕೇವಲ 9-10 ದಿನಗಳಲ್ಲಿ ಮೇವು ಬೆಳೆದು ಹಸಿರು ಮೇವನ್ನೇ ದನಕರುಗಳಿಗೆ ನೀಡಬಹುದಾಗಿದೆ. ಹಲವು ಕೃಷಿ ತಜ್ಞರು ವಿನೂತನ ಪದ್ಧತಿ ಮೂಲಕ ಮೇವು ಬೆಳೆದು ಸಾಧನೆ ಮಾಡಿದ್ದಾರೆ. ಪ್ರಾಯೋಗಿಕವಾಗಿ ಬೆಳಗಾವಿ, ವಿಜಯಪುರ ಜಿಲ್ಲೆಗಳ ರೈತರಿಗೆ ಹೈಡ್ರೋಪ್ರಾನಿಕ್ಸ್‌ ಘಟಕಗಳನ್ನು ವಿತರಿಸುತ್ತಿದೆ.

ಅತ್ಯಲ್ಪ ಪ್ರಮಾಣದ ನೀರು ಬಳಕೆ ಮಾಡಿಕೊಂಡು ಮೇವು ಬೆಳೆಯುವ ತಂತ್ರಜ್ಞಾನ ಹಲವೆಡೆ ಬಳಕೆಯಲ್ಲಿದ್ದು, ರೈತರಿಗೆ ಇದನ್ನು ಪರಿಚಯಿಸಲು ಹಾಗೂ ಈ ಮೂಲಕ ಹಾಲು ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ಗುರಿ ಕೆಎಂಎಫ್ನದ್ದಾಗಿದೆ. 

ಸಹಾಯಧನ: ವಿಜಯಪುರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 200 ಹೈಡ್ರೋಪ್ರಾನಿಕ್ಸ್‌ ಘಟಕಗಳಿಗೆ ಸಹಾಯಧನ ನೀಡಲಾಗುತ್ತಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ 50 ಹೈಡ್ರೋಪ್ರಾನಿಕ್ಸ್‌ ಘಟಕಗಳನ್ನು ಆರಂಭಿಸಲು ಸಹಾಯಧನ ನೀಡಲು ತೀರ್ಮಾನ ಕೈಗೊಂಡಿದೆ. ಪ್ರತಿ ತಾಲೂಕಿನ 5 ಆಸಕ್ತ ರೈತರಿಗೆ ಸಹಾಯಧನ ನೀಡಲಾಗುವುದು. ಒಂದು ಘಟಕ ನಿರ್ಮಾಣಕ್ಕೆ 30,000 ರೂ. ವೆಚ್ಚ ತಗಲುತ್ತದೆ. ಅದರಲ್ಲಿ ಶೇ.50ರಷ್ಟನ್ನು ರೈತರಿಗೆ ಕೆಎಂಎಫ್ ನೀಡುತ್ತದೆ. 

Advertisement

ಏನಿದು ಹೈಡ್ರೋಪ್ರಾನಿಕ್ಸ್‌?: ಮಣ್ಣು ಬಳಸದೇ ಅತ್ಯಲ್ಪ ಪ್ರಮಾಣದ ನೀರು ಬಳಸಿಕೊಂಡು ಮೇವು ಬೆಳೆಯುವ ತಂತ್ರಜ್ಞಾನ ಇದಾಗಿದೆ. ಈ ಪದ್ಧತಿ ಮೂಲಕ ಪೋಷಕಾಂಶಗಳುಳ್ಳ ಮೇವು ಪಡೆಯಬಹುದಾಗಿದೆ. ಮಣ್ಣಿನಲ್ಲಿ 1 ಕೆ.ಜಿ. ಮೇವು ಬೆಳೆಯಲು ಕನಿಷ್ಟ 80 ಲೀಟರ್‌ ನೀರು ಬೇಕು.

ಆದರೆ ಹೈಡ್ರೋಪ್ರಾನಿಕ್ಸ್‌ನಿಂದ 3-4 ಲೀಟರ್‌ ನೀರಿನಲ್ಲಿ ಇದೇ ಪ್ರಮಾಣದ ಮೇವನ್ನು 10 ದಿನಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಮೇವಿನಲ್ಲಿ ವಿಟಮಿನ್‌, ಖನಿಜಾಂಶ ಹಾಗೂ ಕಿಣ್ವಗಳಿರುವುದರಿಂದ ಬರಡು ದನಗಳ ಗರ್ಭಧಾರಣೆ ಪ್ರಮಾಣ ಹೆಚ್ಚಿಸಲು ಸಾಧ್ಯ. ಬೆಳೆದ ಮೇವನ್ನು ಬೇರು ಸಹಿತ ದನಕರುಗಳಿಗೆ ನೀಡಬಹುದಾಗಿದೆ. 

* ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next