ಮುದ್ದೇಬಿಹಾಳ: ನೀರಾವರಿ ಯೋಜನೆಗಳಿಗೆ ಲಕ್ಷಾಂತರ ಎಕರೆ ಫಲತ್ತಾದ ಜಮಿನು ಕಳೆದುಕೊಂಡ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಸಾವಿರಾರು ರೈತರಿಗೆ ಈ ಸರ್ಕಾರ ಅನ್ಯಾಯ ಮಾಡಿದೆ. ಸಂತ್ರಸ್ತ ರೈತರ ಜಮೀನುಗಳಿಗೆ ಕನಿಷ್ಠ ಒಂದು ಬೆಳೆಗಾದರೂ ನೀರು ಹರಿಸದೆ ತಾರತಮ್ಯ ಅನುಸರಿಸಿದೆ. ನವೆಂಬರ್ 14ರಂದು ಕಾಲುವೆಯಲ್ಲಿ ನೀರು ಹರಿಸುವುದನ್ನು ಬಂದ್ ಮಾಡುವ ತೀರ್ಮಾನ ಕೈಬಿಟ್ಟು ಮಾರ್ಚ್ 31ರವರೆಗೂ ಆಲಮಟ್ಟಿ ಜಲಾಶಯ ವ್ಯಾಪ್ತಿಯ ಎಲ್ಲ ಜಮೀನುಗಳಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿಯಲ್ಲಿ ತೀರ್ಮಾನ ಪ್ರಕಟಿಸಬೇಕು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಒತ್ತಾಯಿಸಿದ್ದಾರೆ.
ಮುದ್ದೇಬಿಹಾಳ ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾಲುವೆಗಳಿಗೆ ನೀರು ಹರಿಸಬೇಕು ಮತ್ತು ಎಲ್ಲ ಕೆರೆ ತುಂಬಿಸಬೇಕು ಎಂದು ಆಗ್ರಹಸಿ ರೈತರೊಂದಿಗೆ ಮುದ್ದೇಬಿಹಾಳದಿಂದ ಆಲಮಟ್ಟಿವರೆಗೆ ಪಾದಯಾತ್ರೆಗೆ ಶುಕ್ರವಾರ ಚಾಲನೆ ನೀಡಿ, ನಂತರ ಬಸವೇಶ್ವರ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳನ್ನು ಈ ಸರ್ಕಾರ ಮರೆತಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಉಕ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಬೇಕು. ಈ ಪಾದಯಾತ್ರೆ ಸರ್ಕಾರಕ್ಕೆ ಒಂದು ಎಚ್ಚರಿಕೆ ಗಂಟೆಯಾಗಿದೆ. ಒಂದು ವೇಳೆ ಮೊದಲಿನ ನಿರ್ಲಕ್ಷ್ಯ ಮುಂದುವರಿದಲ್ಲಿ ಇಡಿ ಉತ್ತರ ಕರ್ನಾಟಕದ ರೈತರನ್ನು ಒಟ್ಟುಗೂಡಿಸಿ ಬೆಳಗಾವಿ ಅಧಿವೇಶನಕ್ಕೂ ಮುನ್ನ ಬೃಹತ್ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈಗಾಗಲೇ ಪೂರ್ಣಗೊಂಡಿರುವ ಕಾಲುವೆ ಜಾಲಗಳ ಮೂಲಕ ನೀರು ಹರಿಸಬೇಕು ಮತ್ತು ಎಲ್ಲ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು. ಶನಿವಾರ ಆಲಮಟ್ಟಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಸಚಿವ ಶಿವಾನಂದ ಪಾಟೀಲ ಉಸ್ತುವಾರಿಯಲ್ಲಿ ನಡೆಯಲಿದೆ. ಸಭೆಯಲ್ಲಿ ಬೇಡಿಕೆಗಳ ಬಗ್ಗೆ ತೀರ್ಮಾನ ಪ್ರಕಟಿಸಬೇಕು. ಬೆಳಗಾವಿ ಅಧಿವೇಶನ ಪ್ರಾರಂಭಗೊಳ್ಳುವುದರ ಒಳಗಾಗಿ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆ ಪೂರ್ಣಗೊಳಿಸುವ ಬದ್ಧತೆ ಪ್ರದರ್ಶಿಸಬೇಕು. ಇಲ್ಲವಾದಲ್ಲಿ ಈ ಜಿಲ್ಲೆಯ 2-3 ಸಾವಿರ ರೈತರು ನನ್ನ ಜೊತೆ ನಡೆಯಲು ಗಟ್ಟಿಗರಾದಲ್ಲಿ ಇಡಿ ಉತ್ತರ
ಕರ್ನಾಟಕದ ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ಮತ್ತೋಮ್ಮೆ ಹೋರಾಟಕ್ಕೆ ಧುಮುಕುತ್ತೇನೆ ಎಂದು ಶಾಸಕರು ಘೋಷಿಸಿದರು.
ಆಲಮಟ್ಟಿ ಡ್ಯಾಂನಲ್ಲಿ 123 ಟಿಎಂಸಿ, ನಾರಾಯಣಪುರದಲ್ಲಿ 30 ಟಿಎಂಸಿ ನೀರು ಇದೆ. 20 ವರ್ಷಗಳಲ್ಲಿ ನಮ್ಮ ತಾಲೂಕಿಗೆ ಹರಿಬಿಟ್ಟದ್ದು ಕೇವಲ 3-4 ಟಿಎಂಸಿ ಮಾತ್ರ. ಇದು ನಮ್ಮ ದುರಂತ. ನಮ್ಮ ರೈತರ ದುರ್ದೈವದ ಸಂಗತಿಯಾಗಿದೆ. ಆಲಮಟ್ಟಿಯಿಂದ ನಾರಾಯಣಪುರದವರೆಗೆ ಅತಿ ಹೆಚ್ಚು ಭೂಮಿ ಕಳಕೊಂಡವರು ಈ ತಾಲೂಕಿನ ಜನರು. ಈ ಜನರಿಗೆ ಹೊಳೆದಂಡೆಯಲ್ಲಿದ್ದರೂ ಕುಡಯುವ ನೀರು ಇಲ್ಲದ ಧಾರುಣ ಸ್ಥಿತಿ ಇದೆ. ಈ ಸ್ಥಿತಿ ಹೋಗಲಾಡಿಸಲು ಸರ್ಕಾರ ಮುಂದಾಗಬೇಕು. ಈ ಭಾಗದ ಸಂಪೂರ್ಣ ನೀರಾವರಿಗೆ ಆದ್ಯತೆ ಮೇರೆಗೆ ನೀರು ಕೊಡಬೇಕು.
ಈಗಿನ ಹೋರಾಟ ಆರಂಭ ಮಾತ್ರ ಎಂದರು. ಸಾನ್ನಿಧ್ಯ ವಹಿಸಿದ್ದ ಯರಝರಿ ಯಲ್ಲಾಲಿಂಗ ಮಠದ ಮಲ್ಲಾರಲಿಂಗ ಮಹಾಸ್ವಾಮಿಗಳು, ಬಿಜೆಪಿ ಧುರೀಣ ಶಿವಶಂಕರಗೌಡ ಹಿರೇಗೌಡರ ಮಾತನಾಡಿದರು. ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ ಮತ್ತು ಬಸವರಾಜ ಮುರಾಳ, ಪ್ರಮುಖರಾದ ಹೇಮರಡ್ಡಿ ಮೇಟಿ, ಮಲಕೇಂದ್ರಗೌಡ ಪಾಟೀಲ, ಬಿ.ಪಿ. ಕುಲಕರ್ಣಿ, ಪ್ರಭು ಕಡಿ, ಬಾಬುಲಾಲ್ ಓಸ್ವಾಲ್, ಬಸವರಾಜ ನಂದಿಕೇಶ್ವರಮಠ, ರಾಜಶೇಖರ ಹೊಳಿ, ರಾಜು ಬಳ್ಳೊಳ್ಳಿ, ಬಸವರಾಜ ಗುಳಬಾಳ, ವಾಣಿ ಗೌಡರ, ಮನೋಹರ ತುಪ್ಪದ, ಬಿ.ಜಿ. ಜಗ್ಗಲ್ ಇದ್ದರು.