Advertisement
ಇವರು ಮಾಡಿದ್ದೇನು?ತೋಡಿನ ನೀರಿನ ವೇಗವನ್ನೇ ಶಕ್ತಿಯನ್ನಾಗಿಸಿ ನೀರಾವರಿಯ ತಂತ್ರಜ್ಞಾನವನ್ನು ಬಾಳಪ್ಪ ಗೌಡರು ಅಳವಡಿಸಿಕೊಂಡಿದ್ದಾರೆ. ಒಂದಿನಿತೂ ವಿದ್ಯುತ್ ಬಳಸದೆ ಏತ ನೀರಾವರಿ ನಮೂನೆಯಲ್ಲಿ ನೀರು ಹರಿಸುತ್ತಿದ್ದಾರೆ.
ಬಾಳಪ್ಪ ಗೌಡರ ತಂತ್ರಜ್ಞಾನಕ್ಕೆ ಬಳಕೆಯಾಗುವುದೆಲ್ಲವೂ ಹಳೆಯ ವಸ್ತುಗಳೇ. ಬಳಸಿ ಎಸೆದ ಪ್ಲಾಸ್ಟಿಕ್ ಬುಟ್ಟಿಗಳನ್ನು ತುಂಡರಿಸಿ, ಜೋಡಿಸಿ, ಹರಿಯುವ ನೀರಿಗೆ ಮೈಯೊಡ್ಡಿ ಶಕ್ತಿಯನ್ನು ಸೃಷ್ಟಿಸುವ ಫ್ಯಾನ್ ತಯಾರಿಸಿದ್ದಾರೆ. ನೀರನ್ನು ಕೆಳಗಿನಿಂದ ಮೇಲಕ್ಕೆ ಕೊಂಡೊಯ್ಯುವ ಬೆಲ್ಟ್ ಆಗಿ ಹಗ್ಗವನ್ನು ಬಳಸಿಕೊಂಡಿದ್ದಾರೆ. ನೀರನ್ನು ಸಂಗ್ರಹಿಸುವ ಬಕೆಟ್‌ಗಳಾಗಿ ರಬ್ಬರ್ ಟ್ಯಾಪಿಂಗ್‌ಗೆ ಬಳಸುವ ಪ್ಲಾಸ್ಟಿಕ್ ಪಾತ್ರೆಗಳನ್ನು ಅಳವಡಿಸಿದ್ದಾರೆ. ಈ ಪ್ರಾಕೃತಿಕ ನೀರಾವರಿ ಯೋಜನೆಯಲ್ಲಿ ಅವರು ಖರ್ಚು ಮಾಡಿದ್ದು, ಯಂತ್ರದ ಚಾಲನೆಗಾಗಿ ಬಳಸುವ ಬೇರಿಂಗ್ ಖರೀದಿಗೆ ಮಾತ್ರ! ಈ ಯೋಜನೆಗೆ ಕೇವಲ ಒಂದೆರಡು ಸಾವಿರ ರೂ. ಮಾತ್ರ ವೆಚ್ಚವಾಗಿದೆ ಎನ್ನುತ್ತಾರೆ ಬಾಳಪ್ಪ ಗೌಡರು. ಬಕೆಟ್‌ನಿಂದ ಸಿದ್ಧಪಡಿಸಿದ ಫ್ಯಾನನ್ನು ನೀರಿನಲ್ಲಿ ಅಳವಡಿಸಿದ್ದಾರೆ. ಇದಕ್ಕೆ ಜೋಡಿಸಲಾದ ಹಗ್ಗದ ಬೆಲ್ಟ್ ನೀರಿನ ವೇಗಕ್ಕೆ ತಿರುಗುತ್ತದೆ. ತಿರುಗುವಾಗ ಅಲ್ಲಿ ಬಕೆಟ್ ಗಳು ನೀರು ಸಂಗ್ರಹಿಸುತ್ತವೆ. ಬೆಲ್ಟ್ ತಿರುಗಿದಂತೆ ನೀರನ್ನು ಮೇಲಕ್ಕೆ ತಂದು ತೊಟ್ಟಿಗೆ ಸುರಿಯುತ್ತವೆ. ಈ ನೀರು ಪೈಪ್ ಮೂಲಕ ಗಿಡಗಳಿಗೆ ಉಣಿಸಲು ಸರಬರಾಜಾಗುತ್ತದೆ.
Related Articles
ಬಾಳಪ್ಪ ಗೌಡರು ಸ್ವತಃ ತೂಗು ಸೇತುವೆಯನ್ನೂ ನಿರ್ಮಿಸಿದ್ದಾರೆ. ತೋಡಿನ ಎರಡು ಬದಿಗಳಲ್ಲಿ ಅವರ ತೋಟವಿದೆ. ಮಳೆಗಾಲದಲ್ಲಿ ಈ ತೋಡಿನಲ್ಲಿ ವೇಗವಾಗಿ ನೀರು ಹರಿಯುವ ಕಾರಣ ದಾಟಲು ಕಷ್ಟ. ಅದಕ್ಕಾಗಿ 60 ಅಡಿ ಉದ್ದದ ತೂಗು ಸೇತುವೆ ಮಾಡಿದ್ದು, ಏಕಕಾಲಕ್ಕೆ ಒಬ್ಬ ವ್ಯಕ್ತಿ ಸಂಚರಿಸಬಹುದು. ಇದಕ್ಕೂ ಅವರು ಖರ್ಚು ಮಾಡಿದ್ದು ಕೇವಲ 6,000 ರೂ. ಕಬ್ಬಿಣದ ಐದು ಅಡಿ ಅಗಲದ ಪಟ್ಟಿಯನ್ನು ಮಾತ್ರ ಖರೀದಿಸಿದ್ದು, ಉಳಿದಂತೆ ಮನೆಯಲ್ಲಿದ್ದ ನಿರುಪಯುಕ್ತ ವಸ್ತುಗಳನ್ನೇ ಬಳಸಿರುವುದು ವಿಶೇಷ.
Advertisement
ರಕ್ಷಣಾ ಕೋವಿ ಆವಿಷ್ಕಾರಕೃಷಿಗೆ ಉಪಟಳ ಕೊಡುವ ಮಂಗಗಳನ್ನು ಓಡಿಸಲು ಸಶಬ್ದವಾಗಿ ಕಲ್ಲುಗಳ ಮಳೆ ಗೆರೆಯುವ ಕೋವಿಯೊಂದನ್ನು ಅವರು ಆವಿಷ್ಕರಿಸಿದ್ದು, ಪರಿಣಾಮಕಾರಿಯಾಗಿದೆ. ಆಸಕ್ತಿ ಇದ್ದರೆ ಏನೂ ಸಾಧಿಸಬಹುದು
ಏಳನೇ ತರಗತಿ ಕಲಿತಿದ್ದೇನಷ್ಟೇ. ನಾಲ್ಕು ಎಕ್ರೆ ಭೂಮಿಯಲ್ಲಿ ಫಸಲು ಬೆಳೆಸಲು ಹಂಬಲಿಸಿದೆ. ತೋಡಿನಲ್ಲಿ ಹರಿಯುವ ನೀರು ತೋಟಕ್ಕೆ ಸಿಗದಿದ್ದಾಗ ಏತ ನೀರಾವರಿಯ ಸರಳೀಕೃತ ವಿಧಾನ ಅನುಷ್ಠಾನಿಸಿದೆ. ತೂಗು ಸೇತುವೆ ನಿರ್ಮಿಸಿದೆ. ಮಂಗಗಳ ಹಾವಳಿ ತಡೆಯಲು ಕೋವಿ ತಯಾರಿಸಿದೆ. ಅದನ್ನು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕೃಷಿ ಮೇಳದಲ್ಲೂ ಪ್ರದರ್ಶಿಸಿದ್ದೇನೆ. ಕೋವಿಯ ಸ್ವರೂಪವನ್ನು ಕಂಡು ಲಘುವಾಗಿ ಪರಿಗಣಿಸಿದವರು ಅದರ ಶಬ್ದವನ್ನು ಕೇಳಿ ಬೆಚ್ಚಿ ಬಿದ್ದಿದ್ದರು. ಸರಳ ಗ್ಲೈಡರ್ ನಿರ್ಮಿಸುವ ಪ್ರಯತ್ನ ಮಾಡುತ್ತಿದ್ದೇನೆ.
–ಎ. ಬಾಳಪ್ಪ ಗೌಡ,
ತಂತ್ರಜ್ಞಾನ ಆವಿಷ್ಕರಿಸಿದ ಕೃಷಿಕ ಗುರುಮೂರ್ತಿ ಎಸ್. ಕೊಕ್ಕಡ