ಈಶ್ವರಮಂಗಲ : ಸಮರ್ಪಕ ಚರಂಡಿ ನಿರ್ಮಿಸದ ಹಿನ್ನೆಲೆಯಲ್ಲಿ ಈಶ್ವರಮಂಗಲ ಪೇಟೆ ಹಾಗೂ ಗೋಳಿತ್ತಡಿ ಬಸ್ ತಂಗುದಾಣದ ಬಳಿ ಮೋರಿ ಮತ್ತು ಚರಂಡಿ ಎರಡೂ ಬ್ಲಾಕ್ ಆಗಿ ಹರಿದು ಬಂದ ಮಳೆನೀರು ರಸ್ತೆ ಮೇಲೆ ಶೇಖರಣೆಗೊಂಡು ಕೃತಕ ನೆರೆ ನಿರ್ಮಾಣಗೊಳ್ಳುತ್ತಿದೆ. ನೆಟ್ಟಣಿಗೆ ಮುಟ್ನೂರು ಗ್ರಾ.ಪಂ. ವ್ಯಾಪ್ತಿಯ ಈಶ್ವರಮಂಗಲದ ವಿಜಯ ಬ್ಯಾಂಕ್ ಸಮೀಪದ ಚರಂಡಿಯಲ್ಲಿ ನೀರು ಹರಿಯದೆ ರಸ್ತೆಗೆ ಬರುತ್ತಿದೆ. ಇದರಿಂದ ವಿದ್ಯಾರ್ಥಿಗಳು, ವಾಹನ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಸುಳ್ಯಪದವು ಜಿ.ಪಂ. ರಸ್ತೆಯಲ್ಲಿ ಈಶ್ವರಮಂಗಲ ಪೇಟೆಯಿಂದ 700 ಮೀ. ದೂರದ ಗೋಳಿತ್ತಡಿ ಎಂಬಲ್ಲಿ ಈ ಅವ್ಯವಸ್ಥೆ ಉಂಟಾಗಿದೆ. ರಸ್ತೆಗೆ ಹಾಕಲಾಗಿರುವ ಮೋರಿ ಹಾಗೂ ಚರಂಡಿ ಕಸಕಡ್ಡಿ, ಮಣ್ಣಿನಿಂದ ತುಂಬಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆ ಮೇಲೆಯೇ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಸಾಗುವುದು ಅಪಾಯಕಾರಿ. ಅಧಿಕಾರಿಗಳು ಎಚ್ಚೆತ್ತು, ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಶಾಲಾ ಮಕ್ಕಳಿಗೆ ಕಾದಿದೆ ಅಪಾಯ
ಜೋರು ಮಳೆ ಸುರಿಯುತ್ತಿದ್ದರೆ ಕೆಸರು ನೀರು ರಸ್ತೆ ಮೇಲೆ ತುಂಬಿಕೊಂಡಿರುತ್ತದೆ. ಯಾವುದು ರಸ್ತೆ, ಎಲ್ಲಿ ಗುಂಡಿ ಎಂಬುದೇ ತಿಳಿಯುತ್ತಿಲ್ಲ. ಇದೇ ದಾರಿಯಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ನಾಗರಿಕರು ನಡೆದುಕೊಂಡು ಬರುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಗುಂಡಿಗೆ ಬೀಳುವ ಅಪಾಯವಿದೆ. ಅದರಲ್ಲೂ ಚಿಕ್ಕ ಮಕ್ಕಳು ನೀರಿನಲ್ಲಿ ಆಟವಾಡಲು ಹೋಗಿ ಅಪಾಯ ತಂದುಕೊಳ್ಳಬಹುದು. ಇಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಳ್ಳದಂತೆ ಮಾಡಬೇಕಿದೆ.
ತಾಲೂಕಿನ ಪ್ರತಿಯೊಂದು ರಸ್ತೆಯೂ ಮಳೆಗಾಲದಲ್ಲಿ ನಾದುರಸ್ತಿ ಕಾಣಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಕಾರಣವಾಗಿದೆ. ಹೆಚ್ಚಿನ ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ. ಹೀಗಿರುವಾಗ ಮಳೆ ನೀರು ರಸ್ತೆ ಮೇಲೆ ಹರಿಯಬೇಕಷ್ಟೆ. ಸರಿಯಾದ ಚರಂಡಿ ವ್ಯವಸ್ಥೆ ಮಾಡದಿರುವ ರಸ್ತೆಗೆ ಬಿಲ್ ಮಾಡದೆ ತಡೆ ಹಿಡಿಯಬೇಕಾಗಿದೆ.ಗೋಳಿತ್ತಡಿಯಲ್ಲಿ ರಸ್ತೆಗೆ ಆಳವಡಿಸಿದ ಮೋರಿಯಲ್ಲಿ ತ್ಯಾಜ್ಯಗಳು ತುಂಬಿರುವ ಪರಿಣಾಮ ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ತೋಡಿನಂತೆ ಹರಿದುಹೋಗುತ್ತಿರುತ್ತದೆ. ಕೆಲವು ವರ್ಷಗಳ ಹಿಂದೆ ನಾಲ್ಕು ವರ್ಷದ ಬಾಲಕಿ ಈ ಸ್ಥಳದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಳು. ಇಂತಹ ಘಟನೆಗಳು ಕಣ್ಣ ಮುಂದೆ ಇರುವಾಗ ಮೋರಿಗಳ ದುರಸ್ತಿಗೆ ಗಮನ ಹರಿಸಬೇಕಿದೆ.
ಪ್ರಯತ್ನ ವಿಫಲ
ಕಳೆದ ತಿಂಗಳಲ್ಲಿ ಗೋಳಿತಡಿ-ಕುತ್ಯಾಳ ರಸ್ತೆ ಅಭಿವೃದ್ಧಿಗೊಂಡಿದ್ದು, ಡಾಮರು ಕಾಮಗಾರಿ ವೇಳೆ ಚರಂಡಿ ಸಮರ್ಪಕವಾಗಿ ಮಾಡದೆ ಕೃತಕ ನೆರೆಗೆ ಕಾರಣವಾಗಿದೆ. ಕಳೆದ ವರ್ಷವೂ ಕೃತಕ ನೆರೆ ಉಂಟಾಗಿತ್ತು. ಈ ವರ್ಷ ಸ್ವಲ್ಪ ಜಾಸ್ತಿಯೇ ಆಗಿದ್ದು, ಪಾದಚಾರಿಗಳಿಗೆ, ವಾಹನ ಸವಾರರಿಗೆ ಅಪಾಯ ತರುವಂತಿದೆ. ಗೋಳಿತ್ತಡಿಯಲ್ಲಿ ಬುಧವಾರ ಸಂಜೆ ಮೋರಿಯ ಒಳಗೆ ಇರುವ ಕಸ ಮತ್ತು ಮಣ್ಣು ತೆಗೆಯಲು ನಡೆಸಿದ ಪ್ರಯತ್ನ ವಿಫಲವಾಗಿದೆ.
-ದಿನೇಶ್ ರೈ ಕುತ್ಯಾಳ ಸ್ಥಳೀಯ ನಿವಾಸಿ
ಮಾಧವ ನಾಯಕ್ ಕೆ.