Advertisement
ಮಂಗಳೂರು: ಮಂಗಳವಾರ ಸುರಿದ ಮಳೆಯಿಂದ ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದೆ ಕೊಟ್ಟಾರ ಚೌಕಿ ಪ್ರದೇಶ ನೆರೆ ಆವರಿಸಿ, ಆವಾಂತರವನ್ನೇ ಸೃಷ್ಟಿಸಿತ್ತು. ಆಳ ಹಾಗೂ ಅಗಲವಾಗಿದ್ದ ಇಲ್ಲಿನ ರಾಜಕಾಲುವೆ ಇಂದು ಪರಿಸ್ಥಿತಿಯ ಕೈಗೊಂಬೆಗೆ ಸಿಲುಕಿ ಅತಿಕ್ರಮಣಕ್ಕೆ ಒಳಗಾಗಿ ಕಿರಿದಾಗುತ್ತಿದೆ. ರಾಜಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸಮರ್ಪಕವಾಗಿ ವ್ಯವಸ್ಥೆ ಇಲ್ಲದೆ, ಅನಿವಾರ್ಯವಾಗಿ ಮಳೆ ನೀರು ರಸ್ತೆಗೆ ಬರುವ ಪರಿಸ್ಥಿತಿ ಇಲ್ಲಿದೆ.
ರಾಜಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಪ್ರತೀ ಮಳೆಗಾಲದ ಮೊದಲು ಹೂಳು ತೆಗೆದು ಸ್ವಚ್ಛಗೊಳಿಸುವ ಪರಿಪಾಠ ಇದೆ. ಆದರೆ, ಕೊಟ್ಟಾರ ಚೌಕಿ ಭಾಗದಲ್ಲಿ ಇದು ಪರಿಪೂರ್ಣ ರೀತಿಯಲ್ಲಿ ನಡೆದಿಲ್ಲ ಎಂಬ ಆರೋಪವಿದೆ. ಜತೆಗೆ, ಇಲ್ಲಿ ರಾಜ ಕಾಲುವೆಯ ಕೆಲವು ಕಡೆಗಳಲ್ಲಿ ಕಾಂಕ್ರೀಟ್ ಪೈಪ್ ಅಳವಡಿಸಲಾಗಿದೆ. ಖಾಸಗಿ ವ್ಯಕ್ತಿಗಳು ತಮ್ಮ ಜಾಗಕ್ಕೆ ತೆರಳಲು ಅನುವಾಗುವ ದೃಷ್ಟಿಯಿಂದ ಕಾಂಕ್ರೀಟ್ ಪೈಪ್ ಹಾಕಿ ಅದರ ಮೇಲೆ ದಾರಿ ಮಾಡಿದ್ದಾರೆ. ಪರಿಣಾಮವಾಗಿ ಸರಾಗವಾಗಿ ಹರಿಯುವ ನೀರು ಪೈಪ್ ಮೂಲಕ ಒತ್ತಡಕ್ಕೆ ಸಿಲುಕಿ ಅನಂತರ ಸರಾಗವಾಗಿ ಹರಿಯಲು ಸಾಧ್ಯವಾಗದೆ ಸಮಸ್ಯೆ ಸೃಷ್ಟಿಯಾಗುತ್ತಿದೆ. ರಾಜಕಾಲುವೆಯ ವಿಸ್ತೀರ್ಣದಷ್ಟು ನೀರು ಪೈಪ್ ಮೂಲಕ ಹರಿಯಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜೇಸಿಬಿ ಅಲ್ಲ; ಸೈಕಲ್ಲೂ ಹೋಗಲಾರದು!
ರಾಜಕಾಲುವೆಯನ್ನು ಸ್ವಚ್ಛಗೊಳಿಸಲು ಅದು ಒಂದು ಜೇಸಿಬಿ ಸರಾಗವಾಗಿ ಸಂಚರಿಸುವಷ್ಟು ವಿಸ್ತೀರ್ಣ ಹೊಂದಿರಬೇಕು. ಆದರೆ, ಕೊಟ್ಟಾರ ವ್ಯಾಪ್ತಿಯಲ್ಲಿ ಸಾಗುವ ರಾಜಕಾಲುವೆಯ ಕೆಲವು ಭಾಗದಲ್ಲಿ ಜೇಸಿಬಿ ಬಿಡಿ, ಸೈಕಲ್‌ನಲ್ಲಿ ಹೋಗಲೂ ಕಷ್ಟವಾಗುತ್ತದೆ. ಯಾಕೆಂದರೆ ಅಲ್ಲಿ ಅಡ್ಡಾದಿಡ್ಡಿ ಸ್ಲ್ಯಾಬ್ ಗಳು, ಕಿರಿದಾದ ಕಾಲುವೆಯಿಂದಾಗಿ ಸ್ವಚ್ಛಗೊಳಿಸುವುದು ಕಷ್ಟಕರವಾಗಿದೆ.
Related Articles
ರಾಜಕಾಲುವೆಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಪರ್ಕಿಸಲು ಕಾಂಕ್ರೀಟ್ ಸ್ಲ್ಯಾಬ್ ಹಾಕಬೇಕು. ಅದೂ ಕೂಡ ರಾಜ ಕಾಲುವೆಯ ನೀರು ಹರಿಯುವ ಜಾಗದಿಂದ ಸ್ಲ್ಯಾಬ್ ಎತ್ತರದಲ್ಲಿರಬೇಕು. ಆದರೆ, ಕೊಟ್ಟಾರ ಚೌಕಿ ವ್ಯಾಪ್ತಿಯ ರಾಜಕಾಲುವೆಯನ್ನು ಪರಿಶೀಲಿಸುವಾಗ ಬೆರಳೆಣಿಕೆ ಸ್ಥಳವನ್ನು ಬಿಟ್ಟು ಉಳಿದ ಎಲ್ಲ ಕಡೆಗಳಲ್ಲಿ ನೀರಿನ ಹರಿವಿಗಿಂತ ಸ್ವಲ್ಪ ಮೇಲೆ ಸ್ಲ್ಯಾಬ್ ಅಳವಡಿಸಲಾಗಿದೆ. ಇದರಿಂದಾಗಿ ಮಂಗಳವಾರದಂತೆ ಬಾರೀ ಮಳೆ ಸುರಿದಾಗ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಅಂತೂ, ಕೊಟ್ಟಾರಚೌಕಿಯಿಂದ ಫಲ್ಗುಣಿ ನದಿಗೆ ಹರಿಯುವ ರಾಜಕಾಲುವೆಯು ಅಕ್ಕ ಪಕ್ಕದ ಕೆಲವರಿಂದ ಮೆಲ್ಲ-ಮೆಲ್ಲನೆ ಅತಿಕ್ರಮಣವೂ ಆಗಿದೆ.
Advertisement
ಹೆದ್ದಾರಿಯ ಸನಿಹದಲ್ಲಿ 2 ರಾಜಕಾಲುವೆಗಳುಕೊಟ್ಟಾರಚೌಕಿ ವ್ಯಾಪ್ತಿಯಲ್ಲಿ ಎರಡು ರಾಜಕಾಲುವೆಗಳಿವೆ. ಅದರಲ್ಲಿ ಒಂದು ಕೊಂಚಾಡಿ, ಉರ್ವಸ್ಟೋರ್‌ನಿಂದ ಬರುವ ಮಳೆ ನೀರು ಕೊಟ್ಟಾರಚೌಕಿಯ ಬಲಭಾಗದ ರಾಜಕಾಲುವೆಯ ಮೂಲಕ ಮಂಗಳೂರು-ಉಡುಪಿ ರಾ.ಹೆ.ಯ ಕೆಳಗಡೆಯಿಂದ ಫಲ್ಗುಣಿ ನದಿ ಸೇರುತ್ತದೆ. ನಾಲ್ಕನೇ ಮೈಲ್ ನಲ್ಲಿ ಕಾವೂರು, ಆಕಾಶಭವನ, ಮಾಲಾಡಿ ವ್ಯಾಪ್ತಿಯ ಮಳೆ ನೀರು ಇದೇ ರಾಜಕಾಲುವೆ ಮೂಲಕ ಫಲ್ಗುಣಿ ಸೇರುತ್ತದೆ. ಈ ಮಧ್ಯೆ, ಕೋಡಿಕಲ್, ಕೋಟ್ಟಾರದಿಂದ ಬರುವ ಮಳೆ ನೀರು ಕೊಟ್ಟಾರಚೌಕಿಯ ಎಡಭಾಗದಿಂದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಹರಿದು ಫಲ್ಗುಣಿ ನದಿಯನ್ನು ಸೇರುತ್ತದೆ. ಇವೆರಡೂ ಒಟ್ಟು ಸೇರಿದರೆ ರಾಜಕಾಲುವೆಗಳು ಸುಮಾರು ಮೂರು ಕಿ.ಮೀ. ನಷ್ಟು ಉದ್ದವಿದೆ. ವ್ಯವಸ್ಥೆ ಕಲ್ಪಿಸಿ
ಈ ಬಾರಿ ರಾಜಕಾಲುವೆಯ ಹೂಳನ್ನು ಸರಿಯಾಗಿ ತೆಗೆಯದ ಹಿನ್ನೆಲೆಯಲ್ಲಿ ನೀರು ಹರಿಯಲು ಅಡ್ಡಿಯಾಯಿತು. ಜತೆಗೆ ಕೊಟ್ಟಾರ ವ್ಯಾಪ್ತಿಯ ರಾಜಕಾಲುವೆಯನ್ನು ಮಳೆಗಾಲಕ್ಕೆ ಸಿದ್ಧಪಡಿಸುವ ಕೆಲಸ ನಡೆದಿರಲಿಲ್ಲ. ಹೀಗಾಗಿ ಬಹಳಷ್ಟು ಸಮಸ್ಯೆ ಉಂಟಾಯಿತು. ಇನ್ನಾದರೂ ರಾಜಕಾಲುವೆ ಅತಿಕ್ರಮಣ ತೆರವುಗೊಳಿಸಿ, ಸರಾಗವಾಗಿ ನೀರು ಹರಿಯಲು ವ್ಯವಸ್ಥೆ ಮಾಡಬೇಕು.
– ಬಾಲಕೃಷ್ಣ ಶೆಟ್ಟಿ, ಕೊಟ್ಟಾರಚೌಕಿ ನಿವಾಸಿ