ಚಿತ್ರದುರ್ಗ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಎದುರಾಗಿರುವ ಜಲಕ್ಷಾಮದಿಂದ ಮಧ್ಯ ಕರ್ನಾಟಕದ ದೇಗುಲಗಳೂ ಹೊರತಾಗಿಲ್ಲ.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ, ಹಿರಿಯೂರು ತಾಲೂಕಿನ ವದ್ದೀಕೆರೆ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನ, “ದಕ್ಷಿಣ ಕಾಶಿ’ ಖ್ಯಾತಿಯ ತೇರುಮಲ್ಲೇಶ್ವರಸ್ವಾಮಿ, ವಾಣಿವಿಲಾಸ ಸಾಗರದ ಕಣಿವೆ ಮಾರಮ್ಮ ದೇವಿ, ಹೊಸದುರ್ಗ ತಾಲೂಕಿನ ಗವಿ ರಂಗನಾಥಸ್ವಾಮಿ, ಹಾಲುರಾಮೇಶ್ವರ,
ಕೂನಿಕೆರೆ ಆಂಜನೇಯ ಸ್ವಾಮಿ ದೇವಸ್ಥಾನ, ಹೊಳಲ್ಕೆರೆ ತಾಲೂಕಿನ ಎಚ್.ಡಿ.ಪುರದ ಹೊರಕೆ ರಂಗನಾಥಸ್ವಾಮಿ, ಕೊಳಾಳ್ ಕೆಂಚಾವಧೂತ ದೇವಸ್ಥಾನ ಸೇರಿದಂತೆ ಈ ಭಾಗದ ದೇವಸ್ಥಾನಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ನೀರಿನ ಬರ ಎದುರಾಗಿದ್ದರಿಂದ ಕ್ಷೇತ್ರಗಳಿಗೆ ಬರುವ ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ.
ವದ್ದೀಕೆರೆ ಸಿದ್ದಪ್ಪನ ದೇವಸ್ಥಾನದಲ್ಲಿ ಮಜ್ಜನ ಬಾವಿ ಬತ್ತಿ ಹೋಗಿ ನಾಲ್ಕೈದು ತಿಂಗಳಾಗಿದ್ದು, ದೇವರ ಪೂಜೆಗೆ ಕೊಳವೆಬಾವಿ ಕೊರೆಸಲಾಗಿದೆ. ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿ ಮಜ್ಜನ ಬಾವಿ ಬತ್ತಿ ಹೋಗಿದ್ದು, ಭಕ್ತರಲ್ಲಿ ಆತಂಕ ಸೃಷ್ಟಿಸಿದೆ. ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ರೈತರೊಬ್ಬರ ಖಾಸಗಿ ಕೊಳವೆಬಾವಿಯೇ ಭಕ್ತರಿಗೆ ಆಸರೆಯಾಗಿದೆ.
ಕಣಿವೆ ಮಾರಮ್ಮ ದೇವಾಲಯ ಸಮೀಪದ ಜಲ್ದಿ ಹೊಳೆ ಸಂಪೂರ್ಣವಾಗಿ ಬತ್ತಿದ್ದರಿಂದ ಚಳ್ಳಕೆರೆಗೆ ನೀರು ಪೂರೈಕೆ ಮಾಡುವ ಪೈಪ್‌ಲೈನ್‌ಗೆ ದೇವಸ್ಥಾನದ ಟ್ಯಾಂಕ್ ಸಂಪರ್ಕ ಕಲ್ಪಿಸಲಾಗಿದೆ. ಹೊಸದುರ್ಗ ಸಮೀಪದ ಸುಕ್ಷೇತ್ರ ಹಾಲುರಾಮೇಶ್ವರದಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿದ್ದರಿಂದ ದೇವಸ್ಥಾನದ ಆವರಣದಲ್ಲೇ ನಾಲ್ಕು ಕೊಳವೆಬಾವಿ ಕೊರೆಸಲಾಗಿದೆ.