ಪಣಜಿ: ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ತಿರುಗಿಸಲು ಬಿಡುವುದಿಲ್ಲ. ಇದು ಗೋವಾ ಸರ್ಕಾರದ ಧೋರಣೆಯಾಗಿದ್ದು ನಮ್ಮ ಅಭಿಪ್ರಾಯವನ್ನು ನ್ಯಾಯಾಧಿಕರಣದ ಎದುರು ಮಂಡಿಸಿದ್ದೇವೆ ಎಂದು ಗೋವಾ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ.
ಪೊಂಡಾ ಕ್ಷೇತ್ರದ ಶಾಸಕ ರವಿ ನಾಯ್ಕ ಕೇಳಿದ್ದ ಪ್ರಶ್ನೆಗೆ ಮುಖ್ಯಮಂತ್ರಿ ಪರ್ರಿಕರ್ ಲಿಖೀತ ಉತ್ತರ ನೀಡಿದ್ದಾರೆ. ಮಹದಾಯಿ ನದಿಯಲ್ಲಿ 113.50 ಟಿಎಂಸಿ ನೀರಿದೆ. ಗೋವಾಕ್ಕೆ ಇದರಲ್ಲಿ ಎಷ್ಟು ಪಾಲಿದೆ ಎಂಬುದು
ನಿರ್ಧರಿಸಬೇಕಿದೆ.
ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡರೆ ಅದರ ವ್ಯತಿರಿಕ್ತ ಪರಿಣಾಮ ಗೋವಾದ ಮೇಲಾಗಲಿದೆ. ಗೋವಾ ಸರ್ಕಾರವು ಮಹದಾಯಿ ನದಿ ನೀರು ಹಾಗೂ ನದಿ ಹರಿಯುವ ಪ್ರದೇಶದ ಸಮಗ್ರ ಅಭ್ಯಾಸ ನಡೆಸಿದೆ. ಇದರಿಂದಾಗಿ ಮಹದಾಯಿ ನದಿ ನೀರಿನ ವಿಷಯದಲ್ಲಿ ಗೋವಾ ಸರ್ಕಾರದ ನಿರ್ಣಯ ದೃಢವಾಗಿದೆ. ನಾವು ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ತಿರುಗಿಸಿಕೊಳ್ಳಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.