ಅಂಕೋಲಾ: ತಾಲೂಕು ಆಸ್ಪತ್ರೆಯಲ್ಲಿ ಕಳೆದೊಂದು ವರ್ಷದಿಂದ ಡಯಾಲಿಸಿಸ್ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು ಕಳೆದ 15ದಿನಗಳಿಂದ ನೀರಿನ ಕೊರತೆಯಿಂದ ರೋಗಿ ಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಪುರಸಭೆಯಿಂದ ಬರುವ ನೀರು ಆಸ್ಪತ್ರೆಯ ಎಲ್ಲಾ ಕೊಠಡಿಗಳಿಗೆ, ವಸತಿ ಮನೆಗಳಿಗೆ ಹೋಗಿ ನಂತರ ಬರುವುದರೊಳಗಾಗಿ ಅತೀ ಅವಶ್ಯವಾದ ಡಯಾಲಿಸಿಸ್ ಕೇಂದ್ರಕ್ಕೆ ನೀರು ಸಾಲುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಮನವಿ ಸ್ವೀಕರಿಸಿದ ವೈದ್ಯಾಧಿಕಾರಿ ಮಹೇಂದ್ರಕುಮಾರ್ ನಾಯಕ ಮಾತನಾಡಿ ನಾವು ಪ್ರತಿದಿನ 10000 ಲೀಟರ್ ಟ್ಯಾಂಕರ್ ನೀರು ಖರೀದಿಸುತ್ತೇವೆ. ಅಲ್ಲದೆ ಪುರಸಭೆಗೆ ತಿಳಿಸಿ ಕೊಳವೆ ಬಾವಿ ಅಳವಡಿಸಲು ಅನುಮತಿಗೆ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಕೂಡಲೇ ನೀರನ್ನು ಪೂರೈಸುವ ಕಾರ್ಯ ಮಾಡುತ್ತೇವೆ ಎಂದರು.
Advertisement
ಡಯಾಲಿಸಿಸ್ ಕೇಂದ್ರ ಆರಂಭವಾದ ದಿನದಿಂದಲೇ ಅನೇಕ ಸಮಸ್ಯೆಗಳಿದ್ದು, ತಾಲೂಕಿನಲ್ಲಿ ಪ್ರತಿನಿತ್ಯ ಒಟ್ಟು 18 ರೋಗಿಗಳಿಗೆ ಚಿಕಿತ್ಸೆ ನೀಡುವ ಅಗತ್ಯವಿದೆ. ಕೇವಲ ನಾಲ್ಕು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೇಗಾದರೂ ಮಾಡಿ ನೀರು ಪೂರೈಸಿ ಎಂದು ಪಿತಾಂಬರ ಪಾಲೇಕರ್ ಮತ್ತು ರೋಗಿಯ ಸಂಬಂಧಿಕರು ಸೇರಿ ವೈದ್ಯಾಧಿಕಾರಿ ಮಹೇಂದ್ರಕುಮಾರ ನಾಯಕರಿಗೆ ಮನವಿ ಸಲ್ಲಿಸಿದರು. ಬಿಆರ್‌ಎಸ್ ಒಪ್ಪಿಗೆಯಂತೆ ತಾಲೂಕು ಆಸ್ಪತ್ರೆ ಅವರು ಕೇವಲ ವಿದ್ಯುತ್ ಮತ್ತು ನೀರನ್ನು ಪೂರೈಸಬೇಕು ಉಳಿದ ಎಲ್ಲ ವ್ಯವಸ್ಥೆಯನ್ನು ಈ ಸಂಸ್ಥೆ ನೋಡಿಕೊಳ್ಳುತ್ತದೆ. ಆದರೆ ನೀರನ್ನು ಪೂರೈಸಲಾಗದೆ ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ.