Advertisement

Water crisis: ಆಶ್ರಯ ಪ್ಲಾಟ್‌ ಜನರಿಗಿಲ್ಲ ಸೌಲಭ್ಯದಾಶ್ರಯ!

04:55 PM Aug 11, 2023 | Team Udayavani |

ಅಮೀನಗಡ: ಸ್ವಾತಂತ್ರ್ಯ ಬಂದು 75 ವರ್ಷವಾದರೂ ಈ ಜನರಿಗೆ ಕುಡಿಯಲು ನೀರಿಲ್ಲ, ಸಂಚಾರಕ್ಕೆ ಉತ್ತಮ ರಸ್ತೆಯಿಲ್ಲ.
ಬೆಳಕಿಗೆ ವಿದ್ಯುತ್‌ ಕಂಬಗಳಂತೂ ಇಲ್ಲಿ ಇಲ್ಲವೇ ಇಲ್ಲ. ಹೌದು, ಸಮೀಪದ ರಕ್ಕಸಗಿ ಗ್ರಾಮದ ಒಂದನೇ ವಾರ್ಡ್‌ನ ಹೊಸ ಪ್ಲಾಟ್‌ಗಳಲ್ಲಿರುವ 40 ಕುಟುಂಬಗಳು ಎರಡು ದಶಕಗಳಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಇಲ್ಲಿನ ಗ್ರಾಪಂನಲ್ಲಿ ಐದು ಜನ ಸದಸ್ಯರು ಇದ್ದಾರೆ.

Advertisement

ಗ್ರಾಪಂನ ಹೊಸ ಪ್ಲಾಟ್‌ನಲ್ಲಿರುವ ಕುಟುಂಬಗಳಿಗೆ ಇಪ್ಪತ್ತು ವರ್ಷಗಳಿಂದ ಕುಡಿಯುವ ಕುಡಿಯುವ ನೀರು, ರಸ್ತೆ ಹಾಗೂ ವಿದ್ಯುತ್‌ ಸಮಸ್ಯೆ ಇದೆ. ಈ ಎಲ್ಲ ಇಲ್ಲಗಳ ಮದ್ಯೆ ಇಲ್ಲಿನ ಸುಮಾರು 40 ಕುಟುಂಬಗಳು ಬದುಕು ನಡೆಸುತ್ತಿವೆ ಎಂದರೆ ನಂಬಲೇಬೇಕು.

ಕುಡಿಯಲು ನೀರಿಲ್ಲ: ಗ್ರಾಮ ಪಂಚಾಯಿತಿ 1ನೇ ವಾರ್ಡ್‌ನ ಆಶ್ರಯ ಪ್ಲಾಟ್‌ನಲ್ಲಿ ವಾಸಿಸುವ 40 ಕುಟುಂಬಗಳಿಗೆ ಎರಡು ದಶಕಗಳಿಂದ ಕುಡಿಯುವ ನೀರಿನ ಸೌಲಭ್ಯವಿಲ್ಲ. ನೀರಿಗಾಗಿ ವಾರ್ಡ್‌ನ ಜನ ನಿತ್ಯ ಬೇರೆ ವಾರ್ಡ್‌ಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ಇದೆ. ಇದು ಇಲ್ಲಿಯ ನಿವಾಸಿಗಳಿಗೆ ದೊಡ್ಡ ಸವಾಲಾಗಿದೆ. ನೀರಿನ ಸಮಸ್ಯೆಯಿಂದ ವಾರ್ಡ್‌ನ ಜನರಿಗೆ ತೀವ್ರ ತೊಂದರೆಯಾಗಿದ್ದು, ದಶಕಗಳೆ ಕಳೆದರು ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ.ಇದರಿಂದ ನಿವಾಸಿಗಳು ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

ಸರಿಯಾದ ರಸ್ತೆಯೂ ಇಲ್ಲ: ಒಂದು ಕಡೆ ಕುಡಿಯುವ ನೀರಿನ ಸಮಸ್ಯೆ ಒಂದೆಡೆಯಾದರೆ, ಮತ್ತೂಂದೆಡೆ ಕುಡಿಯಲು ನೀರು ತರಲು ಸರಿಯಾದ ರಸ್ತೆಗಳೂ ಇಲ್ಲ. ಮಳೆ ಬಂದರೆ ಸಾಕು, ಇಲ್ಲಿಯ ನಿವಾಸಿಗಳ ಗೋಳು ಹೇಳ ತೀರದು. ರಸ್ತೆಗಳು ಚರಂಡಿಗಳಾಗಿ ಪರಿವರ್ತನೆಯಾಗುತ್ತವೆ. ಅಂತಹ ರಸ್ತೆಯಲ್ಲಿಯೇ ಜನ ನೀರಿಗಾಗಿ ನಿತ್ಯ ಅಲೆಯಬೇಕು. ಇಲ್ಲಿ ಸಮಸ್ಯೆಗಳ ಸರಮಾಲೆಯೇ ಇದ್ದು, ಅದನ್ನು ಸರಿಪಡಿಸುವ ಗೋಜಿಗೆ ಯಾರೂ ಹೋಗದಿರುವುದು ದುರಂತವೇ ಸರಿ.

ವಿದ್ಯುತ್‌ ಸಮಸ್ಯೆ: ಈ ವಾರ್ಡ್‌ನ ಜನರಿಗೆ ವಿದ್ಯುತ್‌ ಸಂಪರ್ಕವೇ ಕೊಟ್ಟಿಲ್ಲ. ಇಲ್ಲಿನ ಜನರೇ ಬೇಡೆ ವಾರ್ಡಿನಲ್ಲಿರುವ ವಿದ್ಯುತ್‌
ಕಂಬಗಳಿಂದ ತಾವೇ ತಂತಿ ಹಾಕಿ, ವಿದ್ಯುತ್‌ ಸಂಪರ್ಕ ಪಡೆದಿದ್ದಾರೆ. ಬೀದಿದೀಪಗಳಂತೂ ಕೇಳಬೇಡಿ. ಯಾವಾಗ ವಿದ್ಯುತ್‌ ವೈಯರ್‌ಗಳು ಕಿತ್ತಿಕೊಂಡು ಬೀಳುತ್ತವೆ-ಇದರಿಂದ ಯಾರಿಗೆ ಅನಾಹುತವಾಗುತ್ತೋ ಎಂಬ ಭಯದಲ್ಲಿಯೇ ಜನ ಬದುಕುವಂತಾಗಿದೆ. ಕೂಡಲೇ ವಾರ್ಡ್‌ನಲ್ಲಿ ವಿದ್ಯುತ್‌ ಕಂಬಗಳನ್ನು ಹಾಕಿಸಬೇಕು ಎಂಬುದು ಜನರ ಆಗ್ರಹವಾಗಿದೆ.

Advertisement

ಪೈಪ್‌ಲೈನ್‌ಗೆ ಸೀಮಿತವಾದ ಜೆಜೆಎಂ: ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಮನೆ ಮನೆಗೆ ನಲ್ಲಿಯ ಮೂಲಕ ನೀರು ಪೂರೈಸಬೇಕು ಎಂಬುದು ಕೇಂದ್ರ ಸರ್ಕಾರದ ಜಲ ಜೀವನ್‌ ಮಿಷನ್‌ (ಜೆಜೆಎಂ) ಯೋಜನೆಯ ಮೂಲ ಉದ್ದೇಶ ಅದರಂತೆ ಗ್ರಾಮದ ಒಂದನೇ ವಾರ್ಡ್‌ ನಲ್ಲಿ ಕೂಡಾ ಜೆಜೆಎಂ ಯೋಜನೆಯ ಮೂಲಕ ಪ್ರತಿ ಮನೆಗಳಿಗೆ ನಳ ಅಳವಡಿಸಲಾಗಿದೆ. ಆದರೆ
ಅದರಲ್ಲಿ ನೀರು ಮಾತ್ರ ಬರುತಿಲ್ಲ, ಪೈಪ್‌ಲೈನ್‌ ಕಿತ್ತುಕಂಡು ಹೋಗುವ ಪರಿಸ್ಥಿತಿ ಇದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ನೋಡುತ್ತಿಲ್ಲ. ಇದರಿಂದ ಯೋಜನೆಯ ಬಗ್ಗೆ ಅಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಜೆಜೆಎಂ ಯೋಜನೆಯಲ್ಲಿ ಮಾಡಿದ ಕಾರ್ಯ ಕೇವಲ ನಳ ಅಳವಡಿಸಲು ಮಾತ್ರ ಸೀಮಿತವಾಗಿವೆ. ನೀರು ಮಾತ್ರ ಬರುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಶಾಶ್ವತ ಪರಿಹಾರಕ್ಕಾಗಿ ಆಗ್ರಹ: ವಾರ್ಡ್ ನಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಇಲ್ಲಿಯ ನಿವಾಸಿಗಳು ಅಧಿಕಾರಿಗಳಿಗೆ ಹಲುವಾರು ಬಾರಿ ಮೌಖಿಕ ಹಾಗೂ ಲಿಖಿತ ಮನವಿ ಮಾಡಿದ್ದಾರೆ. ಜತೆಗೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಜತೆಗೆ ಆಕ್ರೋಶವೂ ವ್ಯಕ್ತಪಡಿಸಿದ್ದಾರೆ. ಆದರೆ, ಸಮಸ್ಯೆ ಮಾತ್ರ ಹಾಗೆಯೇ ಇದೆ.
ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವದ ಆಚರಿಸಿಕೊಂಡ ನಾವು, ಒಂದು ಆಶ್ರಯ ಕಾಲೋನಿಗೆ ಕನಿಷ್ಠ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್‌ ಹಾಗೂ ರಸ್ತೆ ಒದಗಿಸಲು ಆಗಿಲ್ಲ ಎಂದರೆ, ಇದು ಆಡಳಿತ ವ್ಯವಸ್ಥೆಯ ಕೈಗನ್ನಡಿ ಎಂಬ ಬೇಸರದ ಮಾತು ಕೇಳಿ ಬರುತ್ತಿದೆ.

ಒಂದನೇ ವಾರ್ಡ್‌ನ ಆಶ್ರಯ ಪ್ಲಾಟ್‌ನ ಕುಟುಂಬಗಳ ಸಮಸ್ಯೆಯ ಬಗ್ಗೆ, ಜೆಜೆಎಂ ಕಾಮಗಾರಿಯ ಬಗ್ಗೆ ಹಿರಿಯ ಅಧಿಕಾರಿಗಳ
ಗಮನಕ್ಕೆ ತರಲಾಗಿದೆ. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ವಾರ್ಡನಲ್ಲಿ ಹೊಸ ಬೋರವೆಲ್‌ಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಪಂಚಾಯತಿಯ ಅನುದಾನದಡಿ ವಾರ್ಡ್‌ನ ರಸ್ತೆಯ ಕಾಮಗಾರಿ ಕೈಗೊಳ್ಳಲಾಗುವುದು.
ಶಶಿಕಲಾ ಕೊಡತಿ,
ಪಿಡಿಒ, ಗ್ರಾ.ಪಂ, ರಕ್ಕಸಗಿ

*ಎಚ್‌.ಎಚ್‌. ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next