ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗಾಗಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಪರಿಶೀಲನೆಗಾಗಿ ಜಿಲ್ಲೆಯಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಕೇಂದ್ರ ಜಲಶಕ್ತಿ ತಂಡ, ಗುರುವಾರ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಖುದ್ದು ಭೇಟಿ ನೀಡಿ ಜಿಲ್ಲಾಡಳಿತ ಜಲಮೂಲಗಳ ಸಂರಕ್ಷಣೆಗೆ ಕೈಗೊಂಡಿರುವ ಕಾಮಗಾರಿಗಳನ್ನು ವೀಕ್ಷಿಸಿತು.
ಜಿಲ್ಲಾಡಳಿತ ಭವನದಲ್ಲಿ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯ ಅಂತರ್ಜಲ, ಜಲಮೂಲಗಳ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡಿದ್ದ ಕೇಂದ್ರದ ಜಲಶಕ್ತಿ ಅಭಿಯಾನದ ನೋಡಲ್ ಅಧಿಕಾರಿಯಾಗಿರುವ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನದ ಅಪರ ಕಾರ್ಯದರ್ಶಿ ಪಂಕಜ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಜಿಲ್ಲೆಯ ವಿವಿಧ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಹಲವು ಕಾರ್ಯಕ್ರಮ: ಕೇಂದ್ರ ಸರ್ಕಾರ ಗುರುತಿಸಿರುವ ಅಂತರ್ಜಲ ಅತಿ ಬಳಕೆ ಜಿಲ್ಲೆಗಳ ಪೈಕಿ ಚಿಕ್ಕಬಳ್ಳಾಪುರ ಸಹ ಒಂದಾಗಿದ್ದು, ಜಿಲ್ಲೆಯಲ್ಲಿ ಅಂತರ್ಜಲ ಪರಿಸ್ಥಿತಿ ತೀವ್ರ ಹದಗೆಟ್ಟು ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಲಶಕ್ತಿ ಅಭಿಯಾನದ ಮೂಲಕ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸುವ ಸಂಬಂಧ ಹಲವು ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗಿದೆ. ಇದಕ್ಕೆ ಪೂರಕವಾಗಿ ಜಲ ಸಂರಕ್ಷಣೆ ಆಂದೋಲನವನ್ನು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಕೈಗೊಳ್ಳುವ ಸಲುವಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಪರ ಕಾರ್ಯದರ್ಶಿ ಪಂಕಜ್ ಕುಮಾರ್ ನೇತೃತ್ವದಲ್ಲಿ ತಂಡ ಜಿಲ್ಲೆಗೆ ಆಗಮಿಸಿದೆ.
ವೀಕ್ಷಣೆ: ಅಧಿಕಾರಿಗಳ ಸಭೆ ನಡೆಸಿದ ಬಳಿಕ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೊಳ್ಳಟ್ಟ ಗ್ರಾಮದ ಕಲ್ಯಾಣಿ, ಮಾಳಮಾಚನಹಳ್ಳಿ ಗ್ರಾಮ ಪಂಚಾಯತ್‌ನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಸ್ಥಾನದ ಹತ್ತಿರ ಇರುವ ನಡು ತೋಪು, ಹೇಮಾರ‌್ಲಹಳ್ಳಿಯ ಅರಣ್ಯೀಕರಣ ಮತ್ತು ಗ್ರಾಮೀಣ ಉದ್ಯಾನವನವನ್ನು ಕೇಂದ್ರದ ಜಲಶಕ್ತಿ ತಂಡದ ಸದಸ್ಯರು ಖುದ್ದು ವೀಕ್ಷಿಸಿದರು. ನಂತರ ಹೊಸಪೇಟೆ ಗ್ರಾಮ ಪಂಚಾಯತ್‌ನ ಸುಂಡ್ರಹಳ್ಳಿಯಲ್ಲಿ ಸಮೀಪ ನಿರ್ಮಿಸಲಾಗಿರುವ ಮಲ್ಟಿ ಆರ್ಚ್ ಚೆಕ್‌ಡ್ಯಾಂ ಹಾಗೂ ಮಳಮಾಚನಹಳ್ಳಿಯ ಕಲ್ಯಾಣಿಯನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕೇಂದ್ರ ಜಲಶಕ್ತಿ ಅಭಿಯಾನದ ತಂಡ ಸದಸ್ಯರಾದ ಕೇಂದ್ರ ಆಯುಷ್ ಸಚಿವಾಲಯದ ನಿರ್ದೇಶಕ ಶಶಿ ರಂಜನ್ ಕುಮಾರ್, ಕೇಂದ್ರ ಅಂತರ್ಜಲ ಮಂಡಳಿಯ ತಾಂತ್ರಿಕ ಅಧಿಕಾರಿ ಯು.ಆರ್.ರಾಕಿ, ಇಂಜಿನಿಯರ್ ದಿಲೀಪ್, ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್, ಸಹಾಯಕ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸುರೇಶ್‌ಬಾಬು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ತಂಡದ ಜೊತೆಯಲ್ಲಿದ್ದರು.
ಸಮಗ್ರ ವರದಿ ಸಲ್ಲಿಸಿದ ಜಿಪಂ ಸಿಇಒ: ಕೇಂದ್ರದ ಜಲಶಕ್ತಿ ಅಭಿಯಾನದ ತಂಡಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕೇಂದ್ರದ ಜಲಶಕ್ತಿ ತಂಡಕ್ಕೆ ಜಿಲ್ಲಾದ್ಯಂತ ಜಿಪಂ ಮೂಲಕ ಅನುಷ್ಠಾನಗೊಳಿಸುತ್ತಿರುವ ಜಲಮೂಲಗಳ ಸಂರಕ್ಷಣೆ, ಪುನಶ್ಚೇತನ ಕುರಿತಾಗಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ವಿವರಿಸಿ, ಅಗತ್ಯವಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆಯು ಅಧಿಕಾರಿಗಳ ಗಮನ ಸೆಳೆದು ಜಿಲ್ಲೆಯ ಬಗ್ಗೆ ಸಮಗ್ರ ವರದಿ ಸಲ್ಲಿಸಿದರು.