ಕುಂದಾಪುರ: ಉದಯವಾಣಿಯ ಜಲಸಂರಕ್ಷಣೆ ಅಭಿಯಾನದಿಂದ ಪ್ರೇರಿತವಾಗಿ ಶಿಕ್ಷಣ ಸಂಸ್ಥೆಗಳು ಈಗ ಕೇವಲ ಪಠ್ಯಕ್ಕೆ ಸೀಮಿತವಾಗದೇ ಈಗ ಜಲ ಸಾಕ್ಷರತೆ ಸಾಧಿಸುವ ಕಡೆಗೂ ದಿಟ್ಟ ಹೆಜ್ಜೆಯನ್ನು ಇಡುತ್ತಿದೆ. ಕುಂದಾಪುರದ ವಕ್ವಾಡಿ ಗ್ರಾಮದ ಗುರುಕುಲ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ಮಳೆ ನೀರನ್ನು ಪೋಲಾಗದಂತೆ ಇಂಗು ಬಾವಿಗೆ ಬಿಡುವ ವ್ಯವಸ್ಥೆ ಮಾಡುವ ಮೂಲಕ ವರ್ಷವಿಡೀ ನೀರಿನ ಸಮಸ್ಯೆಯಾಗದಂತೆ ಮಾಡಲಾಗುತ್ತಿದೆ.
ಈ ಶಿಕ್ಷಣ ಸಂಸ್ಥೆಯು ಸುಮಾರು 36 ಎಕರೆ ಪ್ರದೇಶದಲ್ಲಿದ್ದು, ಇಲ್ಲಿ ಶಿಕ್ಷಣ ಸಂಸ್ಥೆಯ ಬೇರೆ ಬೇರೆ ಕಟ್ಟಡಗಳಲ್ಲದೆ, ತೆಂಗಿನ ಮರಗಳು, ತರಕಾರಿ ತೋಟಗಳು, ಬೇರೆ ಔಷಧೀಯ ಸಸ್ಯಗಳ ತೋಟವೂ ಇದೆ.
2 ವರ್ಷದ ಹಿಂದೆ ಪ್ರಯತ್ನ
ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 10 ವರ್ಷಗಳಿಂದ ನಿತ್ಯ ಬಳಕೆಗಾಗಿ ನೀರಿನ ಸಮಸ್ಯೆಯಾಗುತ್ತಿದ್ದು, ಪ್ರತಿ ಬೇಸಿಗೆಯಲ್ಲೂ ಈ ಸಮಸ್ಯೆ ಗಂಭೀರವಾಗಿ ಪರಿಣಮಿಸಿತ್ತು. ಇದನ್ನು ಮನಗಂಡು ಕಳೆದ ಎರಡು ವರ್ಷಗಳ ಹಿಂದೆ ಶಿಕ್ಷಣ ಸಂಸ್ಥೆಯ ಪರಿಸರದಲ್ಲಿ 2 ಬಾವಿಗೆ ಹಾಗೂ 2 ಬೋರ್‌ವೆಲ್ಗಳಿಗೆ ಮಳೆ ನೀರನ್ನು ಬಿಡುವ ವ್ಯವಸ್ಥೆ ಮಾಡಲಾಗಿದೆ.
Advertisement
ಕಳೆದ ಎರಡು ವರ್ಷಗಳಿಂದ ಗುರುಕುಲ ಪಬ್ಲಿಕ್ ಸ್ಕೂಲ್ ಪರಿಸರದಲ್ಲಿ 4 ಕಡೆಗಳಲ್ಲಿ ಇಂಗು ಬಾವಿ (ರೀಚಾರ್ಜ್ ವೆಲ್) ಹಾಗೂ ಬೋರ್‌ವೆಲ್ಗೆ ನೀರು ಬಿಡುವ ಮೂಲಕ ಮಳೆ ನೀರನ್ನು ಹಿಡಿದಿಡುವ ಪ್ರಯುತ್ನ ಮಾಡಲಾಗುತ್ತಿದೆ.
Related Articles
Advertisement
ನೀರಿನ ಸಮಸ್ಯೆಯಿಲ್ಲ
ಈ ಶಿಕ್ಷಣ ಸಂಸ್ಥೆಯಲ್ಲಿ ಸದ್ಯ 1300 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಇವರಲ್ಲಿ 280 ಮಂದಿ ಇಲ್ಲಿನ ಹಾಸ್ಟೆಲ್ನಲ್ಲಿ ವಾಸ್ತವ್ಯವಿದ್ದಾರೆ. ವಿದ್ಯಾರ್ಥಿಗಳ ನಿತ್ಯ ಬಳಕೆಗೆ ಮಾತ್ರವಲ್ಲದೆ, ತೆಂಗಿನ ಮರಗಳು, ತರಕಾರಿ ಗಿಡಗಳಿಗೆ ಸೇರಿದಂತೆ ದಿನಕ್ಕೆ ಅಂದಾಜು 50 ಸಾವಿರ ಲೀಟರ್ ನೀರಿನ ಅಗತ್ಯವಿದೆ. ಮಳೆ ಕೊಯ್ಲು ಅಳವಡಿಸಿದ ಅನಂತರ ಯಾವುದೇ ರೀತಿಯ ನೀರಿನ ಸಮಸ್ಯೆ ಇಲ್ಲ ಎನ್ನುವುದು ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ಅನುಪಮಾ ಶೆಟ್ಟಿ ಮಾತು.
ತಗುಲಿದ ವೆಚ್ಚವೆಷ್ಟು?
ಜಲತಜ್ಞ ಶ್ರೀ ಪಡ್ರೆಯವರ ಮಾರ್ಗದರ್ಶನದಲ್ಲಿ ಎರಡು ಇಂಗು ಬಾವಿಗಳು ಹಾಗೂ ಎರಡು ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಆದರೆ ಇಂಗು ಬಾವಿಯೊಂದನ್ನು ಬೆಂಗಳೂರಿನ ಪರಿಣತ ತಂಡದಿಂದ ಮಾಡಿಸಿರುವುದರಿಂದ ಅದಕ್ಕೆ ಸ್ವಲ್ಪ ಹೆಚ್ಚು ಅಂದರೆ ಸುಮಾರು 1 ಲಕ್ಷ ರೂ ಖರ್ಚಾದರೆ, ಬಾಕಿ ಉಳಿದುದಕ್ಕೆ ಒಟ್ಟಾರೆ 50 ಸಾವಿರ ರೂ. ಅಷ್ಟೇ ಖರ್ಚು ಮಾಡಲಾಗಿದೆ.
ಉದಯವಾಣಿ ಕಾರ್ಯಕ್ಕೆ ಶ್ಲಾಘನೆ
ಉದಯವಾಣಿ ಪತ್ರಿಕೆ ಮಳೆ ಕೊಯ್ಲು ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿರುವುದರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟರು, ಇಂತಹ ಕೆಲಸ ಪತ್ರಿಕೆಗಳಿಂದ ಆಗಬೇಕಾಗಿದೆ. ಯುವ ಪೀಳಿಗೆಗೆ ಜಲ ಜಾಗೃತಿಯ ಅರಿವನ್ನು ಮೂಡಿಸಬೇಕಾಗಿದೆ ಎಂದಿದ್ದಾರೆ.
ಇಂಗು ಬಾವಿಗಳು 3 ಅಡಿ ಅಗಲ ಹಾಗೂ 20 ಅಡಿ ಆಳವಿದ್ದರೆ, ಇಂಗು ಬೋರ್‌ವೆಲ್ 5 ಅಡಿ ಆಳ ಹಾಗೂ 15 ಅಡಿ ಆಳವಿರುವಂತೆ ನಿರ್ಮಿಸಲಾಗಿದೆ. ಪೋಲಾಗುವ ನೀರನ್ನು ಪೈಪ್ ಮೂಲಕ ಹರಿಸುವ ವ್ಯವಸ್ಥೆ ಮಾಡಿ ಇಂಗು ಬಾವಿಗೆ ಬಿಡಲಾಗುತ್ತಿದೆ. ಇಂಗು ಬಾವಿಗೆ ನೀರು ಹಿಂಗುವ ಮಣ್ಣಿರುವ ಪ್ರದೇಶ ಉತ್ತಮ. ಇಂಗು ಬಾವಿಗೆ ನೀರು ಹರಿಸುವಾಗ ಕಸ, ಕಡ್ಡಿ, ತ್ಯಾಜ್ಯ ನೀರು ಬಾವಿಗೆ ಹೋಗದಂತೆ ಫಿಲ್ಟರ್ ಮಾಡಿ ಬಿಡಬೇಕು. ಇಂಗು ಬಾವಿ ಮೇಲ್ಭಾಗಕ್ಕೆ ಸಿಮೆಂಟ್ ಸ್ಲ್ಯಾಬ್ ಅಳವಡಿಸಲಾಗಿದೆ.
ಶಿಕ್ಷಣ ಸಂಸ್ಥೆಯೀಗ ಜಲ ಸ್ವಾವಲಂಬಿ
2 ವರ್ಷಗಳ ಹಿಂದೆ ಇಲ್ಲಿ ನೀರಿನ ಸಮಸ್ಯೆಯಾಗಿ, ಮತ್ತೆ ಟ್ಯಾಂಕರ್ ನೀರನ್ನು ತರಿಸಿ ಬಳಕೆ ಮಾಡಲಾಗಿತ್ತು. ಇದರಿಂದ ಈ ಪರಿಸರದಲ್ಲೇ ಬೀಳುವ ಸಾಕಷ್ಟು ಮಳೆ ನೀರನ್ನು ಸದುಪಯೋಗಪಡಿಸಿಕೊಳ್ಳುವ ಚಿಂತನೆ ಮಾಡಿದ್ದು, ಅದರಂತೆ 2 ವರ್ಷದ ಹಿಂದೆ ಶ್ರೀ ಪಡ್ರೆಯವರ ಸಲಹೆಯಂತೆ ಜಲ ಮರುಪೂರಣ ವ್ಯವಸ್ಥೆಯನ್ನು ಮಾಡಲಾಗಿದೆ. ಈಗ ನೀರಿನ ಸಮಸ್ಯೆಯೇ ಇಲ್ಲ. ಪರಿಸರದಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಿದೆ. ಈಗ ನಮ್ಮ ಶಿಕ್ಷಣ ಸಂಸ್ಥೆಯು ಜಲ ಸ್ವಾವಲಂಬಿಯಾಗಿದೆ.
– ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಜಂಟಿ ಕಾರ್ಯನಿರ್ವಾಹಕ ನಿರ್ದೇಶಕ, ಗುರುಕುಲ ಶಿಕ್ಷಣ ಸಂಸ್ಥೆ