Advertisement

ವಾಟರ್‌ ಕಲರ್‌

06:00 AM Jun 03, 2018 | |

ಪೆಯಿಂಟಿಂಗ್‌ಗಳಲ್ಲಿ “ವಾಟರ್‌ ಕಲರ್‌’ ಎಂಬ ವಿಭಾಗವಿದೆ. ವಾಟರ್‌ ಮತ್ತು ಕಲರ್‌ ಎಂಬುದು ವಿರುದ್ಧ ಸಂಗತಿಗಳು. ವಾಟರ್‌ಗೆ ಕಲರ್‌ ಇಲ್ಲ. ಶುದ್ಧ ನೀರು ಸ್ಫಟಿಕದಂತೆ. ಮಳೆನೀರು ಕೂಡ ಪರಿಶುದ್ಧವೇ. ಹೇಳಿಕೇಳಿ ಅದು ಆಗಸದಿಂದ ಬೀಳುವಂಥಾದ್ದು. ಗಂಗಾ ಭವಾನಿಗೆ ಸಮಾನ. ಮಳೆ ಬರುವುದೇ ತೊಳೆದು ಹಾಕಲು. ಮುಗಿಲಿನಿಂದಾಗಿ ಎಲ್ಲೆಡೆ ಆವೃತವಾದ ಅರೆಗತ್ತಲನ್ನು ಶುಭ್ರಗೊಳಿಸಿ ಜಗವಿಡೀ ಬೆಳಕಾಗುವಂತೆ ಮಾಡುತ್ತದೆ. ಮರಗಳು ನೆನೆದು ಶುದ್ಧವಾಗುತ್ತವೆ. ಮಳೆನೀರು ಬಣ್ಣಗಳನ್ನು ತೊಳೆದುಬಿಡುತ್ತದೆ ಎಂಬುದು ಒಂದು ದೃಷ್ಟಿ. ಆದರೆ, ಸೃಜನಶೀಲ ಕಲಾವಿದನ ಪ್ರಕಾರ ಮಳೆನೀರಿನಲ್ಲಿ ಬಣ್ಣಗಳು ಮೂಡುತ್ತವೆ. ಮಳೆ ಬರುವಾಗ ಸುಮ್ಮನೆ ಮನೆಯೊಳಗೆ ಕೂರದೆ, ಕೊಡೆಯಡಿಯಲ್ಲಿ ಬಾಗಿಕೊಂಡು ನಡೆಯದೆ ಒಮ್ಮೆ ಕಣ್ಣು ತೆರೆದು ನೋಡಬೇಕು. ಅಥವಾ ವಾಹನದೊಳಗೆ ಕೂತು ಗಾಜಿನ ಮೂಲಕ ಮಳೆಜಗತ್ತನ್ನು ಕಾಣಬೇಕು!

Advertisement

ಇಲ್ಲಿರುವ ಚಿತ್ರಗಳನ್ನು ನಾನು ಇತ್ತೀಚೆಗೆ ಮಳೆಯ ಸಂದರ್ಭದಲ್ಲಿ ಸೆರೆಹಿಡಿದಿದ್ದೆ. ಮೊದಲ ನೋಟಕ್ಕೆ ಇವು ಕೇವಲ ಮಸುಕು ಚಿತ್ರಗಳು ಎಂದು ಭಾವಿಸಬಹುದು, ಆದರೆ, ಸೂಕ್ಷ್ಮವಾಗಿ ನೋಡಿದರೆ ಇವು ವಾಟರ್‌ಕಲರ್‌ ಕಲಾಕೃತಿಯಂತಿವೆೆ. ಕೆಲವೊಂದು ಛಾಯಾಚಿತ್ರಗಳು “ಅಮೂರ್ತ ಕಲಾಕೃತಿ’ ಎನ್ನುತ್ತಾರಲ್ಲ, ಹಾಗಿವೆ. ಮೂಲದಲ್ಲಿ ಎಲ್ಲವೂ ಅಮೂರ್ತವೇ; ಬಳಿಕ ಮೂರ್ತಗೊಳ್ಳುತ್ತ ಹೋಗುವಂಥಾದ್ದು. ಯಾವುದಾದರೂ ವಸ್ತು ಅಥವಾ ವ್ಯಕ್ತಿ ತನ್ನ ಹುಟ್ಟಿನಲ್ಲಿ ಮೂಲದಲ್ಲಿ ಹೀಗಿದ್ದಿರಬಹುದೆ ಎಂಬಂಥ ಕಲ್ಪನೆ ಮೂಡಿಸುವ ರೀತಿಯಲ್ಲಿ ಇಲ್ಲಿನ ದೃಶ್ಯಗಳು ಗಮನ ಸೆಳೆಯುತ್ತವೆ. ಒದ್ದೆ ಗಾಜಿನ ಆಚೆಗೆ ನಡೆದುಕೊಂಡು ಬರುತ್ತಿರುವ ವ್ಯಕ್ತಿಯ ಶರೀರ, ಉಡುಪು ಎಲ್ಲವೂ ಒಂದರೊಡನೊಂದು ಬೆಸೆದುಕೊಂಡು, ಮೂರ್ತವಾಗಿರುವ ರೂಹು, ಮೂಲದಲ್ಲಿರುವಂತೆ ಅಮೂರ್ತವಾಗುವ ಅನುಭವ ವಿಸ್ಮಯಕಾರಕವಾದುದು.

ಅಲ್ಲದೆ, ಇಂಥ ಯಾವುದೇ ದೃಶ್ಯ ಒಂದು ಕ್ಷಣಕ್ಕೆ ಮಾತ್ರ ಸಿಗುವಂಥಾದ್ದು. ನೀವು ಈಗ ಸೂರ್ಯನ ಶುಭ್ರ ಬೆಳಕಿನಲ್ಲಿ ಇಂದು ತೆಗೆದ ಚಿತ್ರವನ್ನು ನಾಳೆಯೂ ತೆಗೆಯಲು ಪ್ರಯತ್ನಿಸಬಹುದು. ಈ ಕ್ಷಣದಿಂದ ಮತ್ತೂಂದು ಕ್ಷಣಕ್ಕೆ, ಮತ್ತೂಂದು ದಿನಕ್ಕೆ ಗಮನಾರ್ಹವಾದ ಬದಲಾವಣೆ ಏನೂ ಆಗುವುದಿಲ್ಲ. ಆದರೆ, ಮಳೆನೀರೆಂಬ ಗಾಜಿನ ಮೂಲಕ ಕಂಡ ದೃಶ್ಯಗಳು ಈ ಕ್ಷಣ ನೋಡಿದಂತೆ ಮತ್ತೂಂದು ಕ್ಷಣವಿಲ್ಲ. ಈ ಕ್ಷಣ ಕಂಡದ್ದು ಮತ್ತೆಂದೂ ಕಾಣಲಾರದು. ಮತ್ತೂಮ್ಮೆ ಕಾಣುವುದು ಬೇರೆಯೇ. 

ಕೆಲವು ಸಮಯದ ಹಿಂದೆ ಬೇಲೂರು-ಹಳೇಬೀಡು ಕಡೆಗೆ ಹೋಗಿದ್ದೆ. ಫೋಟೋ ತೆಗೆಯಬೇಕಿತ್ತು. ಅಷ್ಟರಲ್ಲಿ ಮಳೆ ಬಂತು. ನಿಜವಾಗಿ ಮಳೆಬಂದು ಫೊಟೋಗ್ರಫಿಯ ಸಾಧ್ಯತೆ ಹಾಳಾಯಿತಲ್ಲ ಎಂದು ಪರಿತಪಿಸಬೇಕಿತ್ತು. ಆದರೆ, ಮಳೆಯ ಮೂಲಕ ಕಾಣುವ ಶಿಲ್ಪವೈಭವದ ಸೊಗಸೇ ಬೇರೆ ಇದೆಯಲ್ಲ ಅಂತನ್ನಿಸಿ ಕಲ್ಪನೆಗಳು ಗರಿಗೆದರಿದವು. ಮಳೆಯಲ್ಲಿಯೇ ಕೆಲವು ಫೊಟೋಗಳನ್ನು ತೆಗೆದೆ.

ಮತ್ತೆ ಮಳೆ ಶುರುವಾಗಿದೆ. ಬೆಳಕು ಚೆನ್ನಾಗಿಲ್ಲ, ದೃಶ್ಯ ಸು#ಟವಾಗಿ ಕಾಣಿಸುವುದಿಲ್ಲ ಎಂದು ಬೇಸರಪಟ್ಟುಕೊಳ್ಳುವವರಿದ್ದಾರೆ. ಆದರೆ, ಕಲ್ಪನಾಲೋಕದ ಚೌಕಟ್ಟನ್ನು ಇನ್ನಷ್ಟು ವಿಸ್ತರಿಸಬಲ್ಲವರಿಗೆ ಮಾತ್ರ ಮಳೆಯ ಕಾಲದಲ್ಲಿ ಹೊಸ ಸಾಧ್ಯತೆಗಳು ಗೋಚರಿಸುತ್ತವೆ.

Advertisement

ನೀರಿಗೆ ಬಣ್ಣವಿಲ್ಲ. ಮಳೆ ನೀರಿಗೂ ಬಣ್ಣವಿಲ್ಲ. ಆದರೆ ಮಳೆ ನೀರಿನಿಂದ ಕಾಣಿಸುವ ಜಗತ್ತಿಗೆ ಎಷ್ಟೊಂದು ಬಣ್ಣಗಳಿವೆ! ಇದರಲ್ಲಿ ಎಷ್ಟೊಂದು ವಾಟರ್‌ಕಲರ್‌ ಪೆಯಿಂಟಿಂಗ್‌ಗಳಿವೆ! ಇದರಲ್ಲಿ ಎಷ್ಟೊಂದು ಲ್ಯಾಂಡ್‌ಸ್ಕೇಪ್‌ಗ್ಳಿವೆ !

(ನಿರೂಪಣೆ : ಛಾಯಾ)

ಕೆ. ಎಸ್‌. ರಾಜಾರಾಮ್‌

Advertisement

Udayavani is now on Telegram. Click here to join our channel and stay updated with the latest news.

Next