Advertisement
ಪ್ರಸ್ತುತ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಸರಬರಾಜು ಮಾಡುವ ನೀರು ಸರಿಯಾದ ರೀತಿಯಲ್ಲಿ ಶುದ್ಧೀಕರಣಗೊಂಡಿರುವುದಿಲ್ಲ. ಪಾತ್ರೆಯ ತಳದಲ್ಲಿ ಮಣ್ಣು ಶೇಖರಣೆಯಾಗಿರುತ್ತದೆ. ಹಲವಾರು ಕಡೆ ಕುಡಿಯುವ ನೀರಿನ ಪೈಪ್ ಒಡೆದು ನೀರು ಮೋರಿ ಸೇರುತ್ತಿದೆ. ನಿಗದಿತ ಸಮಯಕ್ಕೂ ನೀರನ್ನು ಪೂರೈಸುತ್ತಿಲ್ಲ. ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ನೀರಿನ ದರವನ್ನು ಏರಿಕೆ ಮಾಡಿರುವ ಅಧಿಕಾರಿಗಳ ನಿಲುವಿಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Related Articles
Advertisement
ಚರಂಡಿ ಪಾಲು: ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿಲ್ಲದ ಕಾರಣ ಜನರ ಬಳಕೆಗೆ ಸಿಗದೆ ಸಾಕಷ್ಟು ನೀರು ಚರಂಡಿಗೆ ಹರಿದು ಪೋಲಾಗುತ್ತಿದೆ. ವಾಟರ್ ಟ್ಯಾಂಕ್‌ಗಳಿಗೆ ಗುಣಮಟ್ಟದ ಗೇಜ್ ಅಳವಡಿಸಿ ನೀರು ಪೋಲಾಗುವುದನ್ನು ತಡೆಯುತ್ತಿಲ್ಲ. ಹಲವೆಡೆ ಕುಡಿಯುವ ನೀರಿನ ಪೈಪ್‌ಗ್ಳು ಒಡೆದುಹೋಗಿವೆ. ಚರಂಡಿಯೊಳಗೆ ಹಾದುಹೋಗಿರುವ ಪೈಪ್‌ಗ್ಳನ್ನು ಸ್ಥಳಾಂತರಿಸುವ ಪ್ರಯತ್ನಗಳೂ ನಡೆದಿಲ್ಲ.
ನಗರಕ್ಕೆ 24*7 ನೀರು ಪೂರೈಸುವ ಅಮೃತ್ ಯೋಜನೆಯೂ ಕುಂಟುತ್ತಾ ತೆವಳುತ್ತಾ ಸಾಗಿದೆ. ಆ ಹಿನ್ನೆಲೆಯಲ್ಲಿ ಅಮೃತ್ ಯೋಜನೆ ಪೂರ್ಣಗೊಂಡು ಎಲ್ಲಾ ಕೊಳಾಯಿ ಸಂಪರ್ಕಗಳಿಗೆ ಮೀಟರ್ ಅಳವಡಿಸಿದ ನಂತರ ನೀರಿನ ದರ ವಿಧಿಸುವಂತೆ ನಗರದ ನಾಗರಿಕರು ಒತ್ತಾಯಿಸಿದ್ದಾರೆ.
ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿಲ್ಲ: ಸಾರ್ವಜನಿಕರ ಗಮನಕ್ಕೆ ತರದೆ ನೀರಿನ ಕರ ಏರಿಕೆ ಮಾಡಿರುವ ಅಧಿಕಾರಿಗಳ ತೀರ್ಮಾನದ ವಿರುದ್ಧ ಜನಸಾಮಾನ್ಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನೀರಿನ ದರ ಏರಿಕೆಗೂ ಮುನ್ನ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಕುಡಿಯುವ ನೀರು ಸರಬರಾಜಿನಲ್ಲಿರುವ ದೋಷಗಳೇನು,
ನಿಗದಿತ ಸಮಯದಲ್ಲಿ ನೀರು ಪೂರೈಕೆಯಾಗುತ್ತಿದೆಯೇ, ಎಷ್ಟು ಪ್ರಮಾಣದಲ್ಲಿ ಗೃಹ ಬಳಕೆಗೆ ನೀರು ದೊರಕುತ್ತಿದೆ. ವಾರಕ್ಕೊಮ್ಮೆ ಬಿಡುವ ನೀರಿನಲ್ಲಿ ಒಂದು ಗಂಟೆ ನೀರು ಪೂರೈಸಿದರೆ ಸಾಕೇ, ನೀರಿನ ಶುದ್ಧೀಕರಣದಲ್ಲಿ ಆಗುತ್ತಿರುವ ಲೋಪಗಳು, ನೀರಿನ ಶುದ್ಧೀಕರಣ ಕೇಂದ್ರದ ವ್ಯವಸ್ಥೆ ಹೇಗಿದೆ ಎನ್ನುವುದನ್ನು ಪರಿಶೀಲನೆ ನಡೆಸದೆ, ಸಾರ್ವಜನಿಕರಿಂದ ಅಭಿಪ್ರಾಯಗಳನ್ನೂ ಪಡೆಯದೆ ಏಕಾಏಕಿ ನೀರಿನ ದರ ಏರಿಸಿರುವುದು ಸರಿಯೇ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ.
ಕೆಲವೊಂದು ಬಡಾವಣೆಗಳಿಗೆ ಕಾವೇರಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಪ್ರಭಾವಿಗಳು ಕೊಳಾಯಿಗಳಿಗೇ ಮೋಟಾರ್ ಪಂಪ್ ಅಳವಡಿಸಿಕೊಂಡಿದ್ದಾರೆ. ಇದರಿಂದ ಮುಂದಕ್ಕೆ ನೀರಿನ ಹರಿವಿನ ಒತ್ತಡ ಕಡಿಮೆಯಾಗಿ ಆ ಭಾಗದ ಜನರಿಗೆ ಸರಿಯಾಗಿ ನೀರು ಸಿಗದಂತಾಗಿದೆ. ಈ ಅಂಶಗಳನ್ನೆಲ್ಲಾ ಪರಿಗಣಿಸದೆ ದಿಢೀರನೆ ದರ ಏರಿಕೆ ಮಾಡಿರುವುದು ಅವೈಜ್ಞಾನಿಕ ಎಂದು ದೂರಿದ್ದಾರೆ.
ಕುಡಿಯುವ ನೀರಿನ ದರ ಏರಿಕೆ ಮಾಡುವುದಕ್ಕೂ ಮುನ್ನಾ ಈ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸಿ ಪರಿಷ್ಕೃತ ದರ ಜಾರಿಗೊಳಿಸಿದ್ದರೆ ಅದಕ್ಕೊಂದು ವೈಜ್ಞಾನಿಕ ಅರ್ಥ ಬರುತ್ತಿತ್ತು. ಏಳೆಂಟು ವರ್ಷಗಳಿಂದ ದರ ಪರಿಷ್ಕರಣೆ ಮಾಡಿಲ್ಲವೆಂಬ ನೆಪವನ್ನು ಮುಂದಿಟ್ಟುಕೊಂಡು ಏಕಾಏಕಿ 160 ರೂ. ದರ ಏರಿಕೆ ಮಾಡಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ದೂರಿದ್ದಾರೆ.
* ಮಂಡ್ಯ ಮಂಜುನಾಥ್